ಚೆನ್ನೈ: ನಾಯಕ ನಿತೀಶ್ ರಾಣಾ ಮತ್ತು ರಿಂಕು ಸಿಂಗ್ ಅವರ ಅಮೋಘ ಆಟದಿಂದಾಗಿ ಕೋಲ್ಕತಾ ನೈಟ್‌ರೈಡರ್ ತಂಡವು ರವಿವಾರದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ.
ದೀಪಕ್ ಚಹರ್ ದಾಳಿಗೆ ಆರಂಭದಲ್ಲಿ ಕುಸಿದರೂ ನಿತೀಶ್ ಮತ್ತು ರಿಂಕು ಅವರು ನಾಲ್ಕನೇ ವಿಕೆಟಿಗೆ ಸೇರಿಸಿದ 99 ರನ್ನುಗಳ ಜತೆಯಾಟದಿಂದಾಗಿ ಕೆಕೆಆರ್ 18.3 ಓವರ್‌ಗಳಲ್ಲಿ 4 ವಿಕೆಟಿಗೆ 147 ರನ್ ಗಳಿಸಿ ಜಯ ಸಾಧಿಸಿತು. ಈ ಮೊದಲು ಚೆನ್ನೈ ತಂಡವು ಆರು ವಿಕೆಟಿಗೆ 144 ರನ್ ಗಳಿಸಿತ್ತು.
ಈ ಗೆಲುವಿನಿಂದ ಕೆಕೆಆರ್‌ಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಯಿಲ್ಲ. ಒಟ್ಟಾರೆ 12 ಅಂಕ ಹೊಂದಿರುವ ಕೆಕೆಆರ್ 7ನೇ ಸ್ಥಾನದಲ್ಲಿದೆ. ಆದರೆ ದ್ವಿತೀಯ ಸ್ಥಾನದಲ್ಲಿರುವ ಚೆನ್ನೈಗೆ ಈ ಸೋಲಿನಿಂದಾಗಿ ಪ್ಲೇ ಆಫ್ಗೇರುವ ಪ್ರಯತ್ನ ಕಠಿನವಾಗುವ ಸಾಧ್ಯತೆ ಇದೆ.
ಆರಂಭಿಕರಾದ ಜೇಸನ್ ರಾಯ್, ಗುರ್ಬಜ್ ಮತ್ತು ವೆಂಕಟೇಶ್ ಅಯ್ಯರ್ ಅವರನ್ನು ತಂಡ 33 ರನ್ ಗಳಿಸುವಷ್ಟರಲ್ಲಿ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಆದರೆ ನಿತೀಶ್ ರಾಣಾ ಮತ್ತು ರಿಂಕು ಸಿಂಗ್ ಆತ್ಮವಿಶ್ವಾಸದಿಂದ ಆಡಿ ಚೆನ್ನೈ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ನಾಲ್ಕನೇ ವಿಕೆಟಿಗೆ 99 ರನ್ ಪೇರಿಸಿದ ಅವರು ಗೆಲ್ಲಲು 13 ರನ್ ಇರುವಾಗ ಬೇರ್ಪಟ್ಟರು. 43 ಎಸೆತಗಳಿಂದ 54 ರನ್ ಹೊಡೆದ ರಿಂಕು ಔಟಾದರೆ ನಿತೀಶ್ ರಾಣಾ 44 ಎಸೆತ ಎದುರಿಸಿ 57 ರನ್ ಗಳಿಸಿ ಅಜೆಯರಾಗಿ ಉಳಿದರು. 6 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ್ದರು.
ಪ್ಲೇ ಆಫ್ಗೇರಲು ಚೆನ್ನೈಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿತ್ತು. ಆದರೆ ಬ್ಯಾಟಿಂಗಿಗೆ ಕಠಿನವಾಗಿರುವ ಪಿಚ್‌ನಲ್ಲಿ ಚೆನ್ನೈ ಆಟಗಾರರು ಉತ್ತಮ ನಿರ್ವಹಣೆ ನೀಡಲು ಬಹಳಷ್ಟು ಒದ್ದಾಡಿದರು. ಮೊದಲ 11 ಓವರ್ ಮುಗಿದಾಗ ತಂಡ 72 ರನ್ ಗಳಿಸಿದ್ದು 5 ವಿಕೆಟ್ ಉರುಳಿದ್ದವು. ಆಬಳಿಕ ಶಿವಂ ದುಬೆ ಅವರ ಜವಾಬ್ದಾರಿಯ ಆಟದಿಂದಾಗಿ ತಂಡ ಸಾಧಾರಣ ಮೊತ್ತ ಪೇರಿಸಲು ಯಶಸ್ವಿಯಾಯಿತು.
ಕೆಕೆಆರ್ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ ದುಬೆ ಮತ್ತು ರವೀಂದ್ರ ಜಡೇಜ ಅವರು ಆರನೇ ವಿಕೆಟಿಗೆ 68 ರನ್ನುಗಳ ಜತೆಯಾಟ ನಡೆಸಿದರು. ಇದರಿಂದ ತಂಡದ ಮೊತ್ತ 150 ಗಡಿ ಹತ್ತಿರ ಬರುವಂತಾಯಿತು. ಜಡೇಜ 24 ಎಸೆತಗಳಿಂದ 20 ರನ್ ಗಳಿಸಿದರೆ ದುಬೆ 34 ಎಸೆತಗಳಿಂದ 48 ರನ್ ಗಳಿಸಿ ಅಜೇಯರಾಗಿ ಉಳಿದರು. ಒಂದು ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು.
ಕೆಕೆಆರ್‌ನ ಸ್ಪಿನ್ ಬೌಲರ್‌ಗಳು ನಿಖರ ದಾಳಿ ಸಂಘಟಿಸಿದ್ದರು. ಇದರಿಂದ ಚೆನ್ನೈಯ ರನ್‌ವೇಗಕ್ಕೆ ಕಡಿವಾಣ ಬಿತ್ತು. ಸುನಿಲ್ ನಾರಾಯಣ್ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 15 ರನ್ ನೀಡಿ 2 ವಿಕೆಟ್ ಹಾರಿಸಿದ್ದರೆ ಶಾದೂìಲ್ ಠಾಕೂರ್ 15 ರನ್ನಿಗೆ 1 ವಿಕೆಟ್ ಪಡೆದರು. ವರುಣ್ ಚಕ್ರವರ್ತಿ 36 ರನ್ನಿಗೆ 2 ವಿಕೆಟ್ ಕಿತ್ತರೆ ವೈಭವ್ ಅರೋರ 30 ರನ್ನಿಗೆ 1 ವಿಕೆಟ್ ಪಡೆದರು.