Advertisement

Play Off ಸಡಗರದಲ್ಲಿರುವ ಕೆಕೆಆರ್‌ ಎದುರಾಳಿ: ಪವಾಡದ ನಿರೀಕ್ಷೆಯಲ್ಲಿ ಗುಜರಾತ್‌

10:42 PM May 12, 2024 | Team Udayavani |

ಅಹ್ಮದಾಬಾದ್‌: ಆರಂಭದ ಎರಡು ಸೀಸನ್‌ಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಗುಜರಾತ್‌ ಟೈಟಾನ್ಸ್‌ ಈ ಬಾರಿ ಏಕೋ ಮುಳುಗುವ ಹಡಗಿನಂತೆ ಕಾಣುತ್ತಿದೆ. ಉಳಿದೆರಡು ಪಂದ್ಯಗಳನ್ನು ಗೆದ್ದು ಗರಿಷ್ಠ 14 ಅಂಕ ಸಂಪಾದಿಸುವ ಜತೆಗೆ, ನೆಟ್‌ ರನ್‌ರೇಟ್‌ ಏರಿಸಿಕೊಂಡು, ಉಳಿದವರ ಸೋಲನ್ನು ಹಾರೈಸಿ 4ನೇ ಸ್ಥಾನಿಯಾಗಿ ಪ್ಲೇ ಆಫ್ ಪ್ರವೇಶಿಸುವ ಕನಸು ಕಾಣುತ್ತಿದೆ. ನಾಯಕ ಶುಭಮನ್‌ ಗಿಲ್‌ ಹೇಳಿದಂತೆ ಇದಕ್ಕೆ ಪವಾಡವೇ ಸಂಭವಿಸಬೇಕು. ಆದರೆ ರಾಜಸ್ಥಾನ್‌ ವಿರುದ್ಧ ಚೆನ್ನೈ ಸಾಧಿಸಿದ ಗೆಲುವು ಗುಜರಾತ್‌ ಬಾಗಿಲನ್ನು ಬಹುತೇಕ ಮುಚ್ಚಿದೆ.

Advertisement

ಸೋಮವಾರ ರಾತ್ರಿ ಗುಜರಾತ್‌ ತಂಡದ ಒಂದು ಹಂತದ ಭವಿಷ್ಯ ನಿರ್ಧಾರವಾಗಲಿದೆ. ಗಿಲ್‌ ಪಡೆ ತವರಿನ ಅಹ್ಮದಾಬಾದ್‌ ಅಂಗಳದಲ್ಲಿ ಕೆಕೆಆರ್‌ ವಿರುದ್ಧ ಸೆಣಸಲಿದೆ. ಶ್ರೇಯಸ್‌ ಅಯ್ಯರ್‌ ಬಳಗ ಶನಿವಾರದ ಮಳೆ ಪಂದ್ಯದಲ್ಲಿ ಮುಂಬೈಯನ್ನು 18 ರನ್ನುಗಳಿಂದ ಮಣಿಸಿ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚೆನ್ನೈ ವಿರುದ್ಧ ಶುಕ್ರವಾರ ಅಹ್ಮದಾಬಾದ್‌ನಲ್ಲೇ ಆಡಲಾದ ಪಂದ್ಯದಲ್ಲಿ ಶುಭಮನ್‌ ಗಿಲ್‌ ಮತ್ತು ಸಾಯಿ ಸುದರ್ಶನ್‌ ಪ್ರಚಂಡ ಶತಕ ಬಾರಿಸಿ ಮೆರೆದುದನ್ನು ಮರೆಯುವಂತಿಲ್ಲ. ಆದರೆ ಗುಜರಾತ್‌ನ ಈ ಅಬ್ಬರ ಬಹಳ ವಿಳಂಬವಾಗಿ ಕಂಡುಬಂತು. ಹೀಗಾಗಿ ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ ಟಾಪ್‌-4 ಸುಲಭವಲ್ಲ ಎಂದೇ ಹೇಳಬೇಕು. ಮುಖ್ಯವಾಗಿ ತಂಡದ ರನ್‌ರೇಟ್‌ ಮೈನಸ್‌ನಲ್ಲಿರುವುದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಹಾಗೆಯೇ ತನ್ನ ಕೊನೆಯ ಪಂದ್ಯವನ್ನು ಬಲಿಷ್ಠ ಸನ್‌ರೈಸರ್ ವಿರುದ್ಧ ಹೈದರಾಬಾದ್‌ನಲ್ಲಿ ಆಡಬೇಕಾದ ಒತ್ತಡಕ್ಕೆ ಸಿಲುಕಿದೆ.

ಕೆಕೆಆರ್‌ ನಿರಾಳ
ಪ್ರಸಕ್ತ ಸೀಸನ್‌ನಲ್ಲಿ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡವಾಗಿರುವ ಕೆಕೆಆರ್‌ ಈಗ ನಿರಾಳ. ಆದರೆ ಗುರಿ ಇನ್ನೂ ಇದೆ. ಮೊದಲನೆಯದು ಅಗ್ರಸ್ಥಾನ ಕಾಯ್ದುಕೊಳ್ಳುವುದು. ಇದಕ್ಕೆ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ದ್ವಿತೀಯ ಸ್ಥಾನವಾದರೆ ಉಳಿದೆರಡರಲ್ಲಿ ಒಂದು ಪಂದ್ಯ ಗೆದ್ದರೆ ಸಾಕು. ಕೆಕೆಆರ್‌ನ ಕೊನೆಯ ಎದುರಾಳಿ ರಾಜಸ್ಥಾನ್‌ ರಾಯಲ್ಸ್‌ ಎಂಬುದನ್ನು ಮರೆಯುವಂತಿಲ್ಲ!

ಕೆಕೆಆರ್‌ನ ಈ ಓಟದಲ್ಲಿ ಕೆರಿಬಿಯನ್‌ ಕ್ರಿಕೆಟಿಗರಾದ ಸುನೀಲ್‌ ನಾರಾಯಣ್‌ ಮತ್ತು ಆ್ಯಂಡ್ರೆ ರಸೆಲ್‌ ಅವರ ಆಲ್‌ರೌಂಡ್‌ ಶೋ ಮಹತ್ವದ ಪಾತ್ರ ವಹಿಸಿದೆ. ಇಬ್ಬರೂ ಕ್ರಮವಾಗಿ 461 ಮತ್ತು 222 ರನ್‌ ಜತೆಗೆ 15 ವಿಕೆಟ್‌ ಉಡಾಯಿಸಿದ್ದಾರೆ. ಲೆಗ್‌ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಉತ್ತಮ ಲಯದಲ್ಲಿದ್ದು, 18 ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ಸಾಲ್ಟ್, ರಘುವಂಶಿ, ರಮಣ್‌ದೀಪ್‌ ಮೇಲೆ ಬ್ಯಾಟಿಂಗ್‌ ಭರವಸೆ ಇಡಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next