ತಿರುವನಂತಪುರಂ: ಕೇರಳದ ಆರೋಗ್ಯ ಸಚಿವೆಯಾಗಿ ಕೋವಿಡ್ ಸೋಂಕು ಹರಡಿದ್ದ ಸಂದರ್ಭದಲ್ಲಿ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕೆ ಪ್ರಶಂಸೆಗೆ ಒಳಗಾಗಿದ್ದ ಕೆಕೆ ಶೈಲಜಾ ಅವರಿಗೆ ಎಡಪಂಥೀಯ ಸರ್ಕಾರದ ನೂತನ ಸಂಪುಟದಲ್ಲಿ ಶೈಲಜಾ ಅವರಿಗೆ ಸಚಿವ ಸ್ಥಾನ ನೀಡಿಲ್ಲ.
ಇದನ್ನೂ ಓದಿ:ಎನ್ ಇ ಎಫ್ ಟಿ ‘ಈ’ ದಿನ 14 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವುದಿಲ್ಲ : ಆರ್ ಬಿ ಐ
ಕೇರಳದ ಚುನಾವಣೆಯಲ್ಲಿನ ಸಂಪ್ರದಾಯವನ್ನು ವಿರೋಧಿಸಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ ಡಿಎಫ್ ಮೈತ್ರಿಕೂಟ ಎರಡನೇ ಬಾರಿ ಅಧಿಕಾರದ ಗದ್ದುಗೆ ಏರಿದೆ. ಆದರೆ ಈ ಬಾರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಹೊರತುಪಡಿಸಿ ನೂತನ ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ ಎಂದು ವರದಿ ವಿವರಿಸಿದೆ.
ಕೆಕೆ ಶೈಲಜಾ ಅವರು ಶೈಲಜಾ ಟೀಚರ್ ಎಂದೇ ಜನಪ್ರಿಯರಾಗಿದ್ದರು. ಕಳೆದ ವರ್ಷ ಕೋವಿಡ್ ಮೊದಲ ಸೋಂಕು ಹರಡಿದ್ದ ಸಂದರ್ಭದಲ್ಲಿ ಆರೋಗ್ಯ ಸಚಿವೆಯಾಗಿದ್ದ ಶೈಲಜಾ ಅವರು ಕೇರಳದಲ್ಲಿ ಅದ್ಭುತವಾಗಿ ಕೋವಿಡ್ ಪರಿಸ್ಥಿತಿ ನಿಭಾಯಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು.
ನೂತನ ಸಚಿವ ಸಂಪುಟದಲ್ಲಿ ಹಿಂದಿನ ಎಲ್ ಡಿಎಫ್ ಸಚಿವ ಸಂಪುಟದಲ್ಲಿದ್ದ ಯಾರೊಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ. ಇದು ನಮ್ಮ ಪಕ್ಷದ ನಿರ್ಧಾರ. ಇಂತಹ ನಿರ್ಧಾರ ತೆಗೆದುಕೊಳ್ಳಲು ನಮ್ಮ ಪಕ್ಷಕ್ಕೆ ಮಾತ್ರ ಸಾಧ್ಯ. ಸತತವಾಗಿ ಜಯಸಾಧಿಸುತ್ತಿದ್ದವರಿಗೂ ಕೂಡಾ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡಿಲ್ಲವಾಗಿತ್ತು. ನಮಗೆ ಹೊಸ ಮುಖಗಳು ಬೇಕಾಗಿವೆ ಎಂದು ಸಿಪಿಎಂ ಶಾಸಕ ಎಎನ್ ಶಂಶೀರ್ ತಿಳಿಸಿದ್ದಾರೆ.
ನೂತನ ಸಚಿವ ಸಂಪುಟದಲ್ಲಿ ಎಂವಿ ಗೋವಿಂದನ್, ಕೆ.ರಾಧಾಕೃಷ್ಣನ್, ಕೆಎನ್ ಬಾಲಾಗೋಪಾಲನ್, ಪಿ.ರಾಜೀವ್, ವಿಎನ್ ವಾಸವನ್, ಸಾಜಿ ಚೆರಿಯನ್, ವಿ.ಶಿವನ್ ಕುಟ್ಟಿ, ಮೊಹಮ್ಮದ್ ರಿಯಾಜ್, ಡಾ.ಆರ್. ಬಿಂದು, ವೀಣಾ ಜಾರ್ಜ್ ಮತ್ತು ವಿ.ಅಬ್ದುಲ್ ರಹಮಾನ್ ಅವರಿಗೆ ಸ್ಥಾನ ಕಲ್ಪಿಸಿಕೊಡಲಾಗಿದೆ ಎಂದು ವರದಿ ತಿಳಿಸಿದೆ.
ಆದರೆ ಎಲ್ ಡಿಎಫ್ ಸರ್ಕಾರದ ಈ ನಿರ್ಧಾರದಿಂದ ಕಳೆದ ಬಾರಿ ಸಚಿವ ಸ್ಥಾನ ಪಡೆದು, ಈ ಬಾರಿಯೂ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿವರ ಹುಬ್ಬೇರಿಸುವಂತೆ ಮಾಡಿರುವುದಾಗಿ ವರದಿ ವಿವರಿಸಿದೆ.