Advertisement

ಪುರಾತತ್ವಜ್ಞ ಕೆ.ಕೆ.ಮುಹಮ್ಮದ್‌ ಉಪನ್ಯಾಸಕ್ಕೆ ಕಿವಿಗೊಟ್ಟ ಜನತೆ

11:34 PM Feb 28, 2021 | Team Udayavani |

ಡಾ|ಪಾದೂರು ಗುರುರಾಜ ಭಟ್‌ ಸ್ಮಾರಕ ಟ್ರಸ್ಟ್‌ನಿಂದ ಇತಿಹಾಸತಜ್ಞ ಡಾ|ಪಾದೂರು ಗುರುರಾಜ ಭಟ್‌ ಸ್ಮಾರಕ ಪ್ರಶಸ್ತಿಯನ್ನು ರವಿವಾರ ಉಡುಪಿ ವಿದ್ಯೋದಯ ಪಬ್ಲಿಕ್‌ ಸ್ಕೂಲ್‌ ಇಂಡೋರ್‌ ಸಭಾಂಗಣದಲ್ಲಿ ಸ್ವೀಕರಿಸಿದ ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಉತVನನ ನಡೆಸಿದ ಪುರಾತತ್ವಜ್ಞ ಕೆ.ಕೆ. ಮುಹಮ್ಮದ್‌ ಅವರ ಮಾತುಗಳನ್ನು ಆಲಿಸಲು ಪ್ರಬುದ್ಧ ಜನತೆ ಅತ್ಯುತ್ಸಾಹ ತೋರಿತು. ಮಹಾಭಾರತ, ರಾಮಾಯಣ ಕಾಲದ ಘಟನೆಗಳನ್ನು ಪುರಾತಣ್ತೀ ಶೋಧನೆಗಳು ಸಾಬೀತುಪಡಿಸಿವೆ. ಇವುಗಳನ್ನು ಸಾಧಿಸುವಾಗ ಎಡಪಂಥೀಯ ಇತಿಹಾಸಕಾರರು ಅಡ್ಡಿ ಮಾಡಿದ ವಿವಿಧ ಘಟನೆಗಳನ್ನು ಮುಹಮ್ಮದ್‌ ಸೋದಾಹರಣೆ ಮೂಲಕ ವಿವರಿಸಿದರು.

Advertisement

ಸತ್ಯವನ್ನು ನಿಷ್ಪಕ್ಷಪಾತವಾಗಿ ಹೇಳುವ ಅಗತ್ಯ: ಪುತ್ತಿಗೆ ಶ್ರೀ
ಉಡುಪಿ: ಸಮಾರಂಭವನ್ನು ಉದ್ಘಾಟಿಸಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸತ್ಯವನ್ನು ನಿಷ್ಪಕ್ಷಪಾತವಾಗಿ ಹೇಳುವ ಅಗತ್ಯವಿದೆ. ಇದರ ಬದಲು ನಾವು ಭ್ರಮೆ, ಆಗ್ರಹ, ಸ್ವಾರ್ಥಗಳಲ್ಲಿ ಬದುಕುತ್ತಿದ್ದೇವೆ, ಸತ್ಯ ಯಾರಿಗೂ ಬೇಕಾಗಿಲ್ಲ ಎಂದು ವಿಷಾದಿಸಿದರು.

ಸತ್ಯ ಚಿನ್ನದ ಆವರಣದಲ್ಲಿ ಮುಚ್ಚಲ್ಪಟ್ಟಿದೆ. ನಾವು ಹೊರಗೆ ನೋಡುವುದು ಸತ್ಯವನ್ನಲ್ಲ. ಸತ್ಯವನ್ನು ನಿರ್ಭೀತಿಯಿಂದ ಹೇಳುವ ಅಗತ್ಯವಿದೆ. ಸ್ವಭಾವತಃ ದುಷ್ಟರು, ಉತ್ತಮರು, ಮಧ್ಯಮರು ಹೀಗೆ ಜೀವ ತ್ತೈವಿಧ್ಯದ ಸತ್ಯವನ್ನು ಮಧ್ವಾಚಾರ್ಯರು ಪ್ರತಿಪಾದಿಸಿದರು. ಎಲ್ಲರೂ ಒಳ್ಳೆಯವರೆಂದರೆ ಜನಪ್ರಿಯವಾಗ ಬಹುದು. ನಿರಪರಾಧಿಗಳಿಗೆ ತೊಂದರೆ ಕೊಡುವವರು
ಇರುವುದೇ ಇದಕ್ಕೆ ಉದಾಹರಣೆ.ಮುಹಮ್ಮದ್‌ ಅವರು ಕರ್ತವ್ಯ ಸಲ್ಲಿಸುವಾಗ ಸತ್ಯವನ್ನು ಪ್ರತಿಪಾದಿಸಿದರು ಎಂದು ಸ್ವಾಮೀಜಿ ಹೇಳಿದರು.

ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ವಾಗತಿಸಿದ ಟ್ರಸ್ಟ್‌ ಚೆಯರ್‌ಮ್ಯಾನ್‌ ಪ್ರೊ| ಪಿ.ಶ್ರೀಪತಿ ತಂತ್ರಿಯವರು ಮುಹಮ್ಮದ್‌ ಅವರು ವೈಯಕ್ತಿಕವಾಗಿ ಮುಸಲ್ಮಾನರಾದರೂ ಸಾಮಾಜಿಕವಾಗಿ ಭಾರತೀಯರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಂದಿನ ಅತಿ ಅಗತ್ಯವೂ ಇದೇ ಆಗಿದೆ ಎಂದರು. ಟ್ರಸ್ಟಿ ವೆಂಕಟೇಶ ನಾಡಿಗ್‌ ಕಾರ್ಯಕ್ರಮ ನಿರ್ವಹಿಸಿದರು. ಮುಹಮ್ಮದ್‌ ಅವರ ಪೂರ್ತಿ ಉಪನ್ಯಾಸವನ್ನು ಪುತ್ತಿಗೆ ಸ್ವಾಮೀಜಿ ಆಲಿಸಿ ಮೆಚ್ಚುಗೆ ಸೂಚಿಸಿದರು.

ಪ್ರತಿಗಳು ಖಾಲಿ ಖಾಲಿ…
ಮುಹಮ್ಮದ್‌ ಅವರ ಜೀವನ ಚರಿತ್ರೆಯನ್ನು ಕನ್ನಡಕ್ಕೆ ಭಾಷಾಂತರಿಸಿದ ಕಾಸರಗೋಡಿನ ನರಸಿಂಗ ರಾವ್‌ ಅವರು “ನಾನೆಂಬ ಭಾರತೀಯ’ ಪುಸ್ತಕದ 75 ಪ್ರತಿಗಳನ್ನು ತಂದಿದ್ದರು. ಈ ಎಲ್ಲ ಪ್ರತಿ ಕೆಲವೇ ಹೊತ್ತಿನಲ್ಲಿ ಮಾರಾಟವಾದವು. ಪ್ರತಿಗಳಿಗೆ
ಇನ್ನಷ್ಟು ಬೇಡಿಕೆ ಬಂದ ಕಾರಣ ಉಡುಪಿಯ ಬೆಸ್ಟ್‌ಕೋ ಸಂಸ್ಥೆಗೆ ಮತ್ತೆ ಒಂದಿಷ್ಟು ಪ್ರತಿ ಕಳುಹಿಸುವುದಾಗಿ ನರಸಿಂಗ ರಾವ್‌ ತಿಳಿಸಿದರು. ಇದರಿಂದ ಬಂದ ಆದಾಯ ಕಡುಬಡ ವರ ಸೇವೆ ಸಲ್ಲಿಸುತ್ತಿರುವ ಕಾಸರಗೋಡು ಮಂಜೇಶ್ವರ ಬಳಿಯ ಸಾಯಿನಿಕೇತನಕ್ಕೆ ನೀಡಲಾಗುತ್ತಿದೆ.

Advertisement

ಸುಪ್ರೀಂ ಕೋರ್ಟ್‌ ಹೇಳಿದ್ದರೂ ವಿವಾದಿತವೇ?: ಪಲಿಮಾರು ಶ್ರೀ
ಉಡುಪಿ: ಸರ್ವೋಚ್ಚ ನ್ಯಾಯಾಲಯ ಸ್ಪಷ್ಟ ತೀರ್ಪು ನೀಡಿದ ಬಳಿಕವೂ ರಾಮಜನ್ಮಭೂಮಿ ವಿವಾದಿತವೆನಿಸುವುದೇ ಎಂದು ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಪ್ರಶ್ನಿಸಿದರು.

ಕೆ.ಕೆ.ಮುಹಮ್ಮದ್‌ ಅವರಿಗೆ ಡಾ|ಪಾದೂರು ಗುರುರಾಜ ಭಟ್‌ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ ಮಾಡಿ ಆಶೀರ್ವಚನ ನೀಡಿದ ಅವರು, ನ್ಯಾಯಾಲಯ ತೀರ್ಪು ನೀಡಿದರೂ ವಕೀಲರಾದವರೇ ರಾಮಜನ್ಮಭೂಮಿ ವಿವಾದಿತ ಎನ್ನುವುದು ಸಮಂಜಸವಲ್ಲ ಎಂದರು.

ಭೂಮಿ ಮನುಷ್ಯರಿಗೆ ಬೇಕಾದ ಧಾನ್ಯ, ನೀರು, ಪೆಟ್ರೋಲಿಯಂ ಉತ್ಪನ್ನವೇ ಮೊದಲಾದ ಸರ್ವತ್ರವನ್ನು ಕೊಡುತ್ತದೆ. ಈಗ ಅಯೋಧ್ಯೆಯ ಭೂಮಿಯಲ್ಲಿಡಗಿದ ಪುರಾತಣ್ತೀ ಅಂಶಗಳಿಂದಲೇ ಮುಹಮ್ಮದ್‌ರಂತಹವರು ಅಲ್ಲಿ ಅಡಗಿದ್ದ ಸತ್ಯವನ್ನು ಪ್ರತಿಪಾದಿಸಿದರು. ಮುಹಮ್ಮದ್‌ ಅವರು ತಮಗೆ ಬಂದ ಪ್ರಶಸ್ತಿ ಮೊತ್ತವನ್ನು ಕೇರಳದ ಬಡ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ನೀಡುತ್ತೇನೆ ಎಂದಿರುವುದು ಅವರ ಉದಾರತೆಯನ್ನು ತೋರಿಸುತ್ತದೆ ಎಂದರು.

ಡಾ|ಗುರುರಾಜ ಭಟ್ಟರ ಕೃತಿಗಳನ್ನು ಹೊರತರಲು ಸರಕಾರದಿಂದ ಚಿಂತನೆ ನಡೆಸಲಾಗಿದೆ. ಒಂದು ಹಂತದ ಕೆಲಸ ನಡೆದಿದೆ. ಮಂಗಳೂರು ವಿ.ವಿ.ಯಲ್ಲಿ ಡಾ|ಭಟ್ಟರ ಹೆಸರಿನ ಪೀಠ ಸ್ಥಾಪಿಸುವ ಕುರಿತೂ ಚಿಂತನೆ ನಡೆಸುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನ್ಯಾಯಾಲಯದ ತೀರ್ಪು ಹೊರಬಂದರೆ ರಕ್ತದ ಓಕುಳಿ ಹರಿಯುತ್ತದೆ ಎಂದು ಎಚ್ಚರಿಕೆ ನೀಡಿದವರು, ತೀರ್ಪು ಹೊರ ಬರುತ್ತದೆ ಎನ್ನುವಾಗ ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆಂದರು. ದೇಶದ 130 ಕೋಟಿ ಜನರು ಮುಹಮ್ಮದರಂತೆ ದೇಶ ಮೊದಲು ಎಂದು ಯೋಚಿಸಿದ್ದರೆ ದೇಶದ ಉದ್ಧಾರ ಯಾವತ್ತೋ ಆಗುತ್ತಿತ್ತು ಎಂದು ಪೂಜಾರಿ ಹೇಳಿದರು.

ಡಾ| ಗುರುರಾಜ ಭಟ್ಟರು ಮೈಸೂರು ವಿ.ವಿ.ಯಲ್ಲಿ ಸಲ್ಲಿಸಿದ ಪಿಎಚ್‌ಡಿ ಪ್ರಬಂಧವನ್ನು ನೋಡಿದ್ದೆ. ಇದು ಇಂದಿನ ನಾಲ್ಕು ಪಿಎಚ್‌ಡಿ ಪ್ರಬಂಧಕ್ಕೆ ಸಮನಾಗಿದೆ. ಅಂತಹ ಪ್ರಬಂಧವನ್ನು ನಾನು ನೋಡಿಲ್ಲ ಎಂದು ಮಂಗಳೂರು ವಿ.ವಿ. ವಿಶ್ರಾಂತ ಕುಲಪತಿ ಪ್ರೊ|ಕೆ. ಬೈರಪ್ಪ ಹೇಳಿದರು.

ರಾಜ್ಯ ಸರಕಾರದ ಪರವಾಗಿ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಕೆ.ರಘುಪತಿ ಭಟ್‌ ಸಮ್ಮಾನಿಸಿದರು. ಟ್ರಸ್ಟ್‌ ಅಧ್ಯಕ್ಷೆ ಪಿ.ಪಾರ್ವತಿ ಭಟ್‌, ಕಾರ್ಯದರ್ಶಿ ವಿಶ್ವನಾಥ ಪಾದೂರು, ಖಜಾಂಚಿ ಪರಶುರಾಮ ಭಟ್‌, ಸದಸ್ಯರಾದ ಮಹೇಶ ಭಟ್‌, ಕೃಷ್ಣ ಭಟ್‌, ನಾಗರಾಜ ಪಾದೂರು, ಯು.ರಘುಪತಿ ರಾವ್‌ ಉಪಸ್ಥಿತರಿದ್ದರು. ಟ್ರಸ್ಟಿ ಪಿ.ವೆಂಕಟೇಶ ಭಟ್‌ ವಂದಿಸಿದರು. ವಾಸುದೇವ ಭಟ್‌ ಪೆರಂಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾಲಕ್ಷ್ಮೀ ಪ್ರಶಸ್ತಿ ಪತ್ರ ವಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next