ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಉಮೇದುವಾರರ ಪಟ್ಟಿಯಲ್ಲಿ ಇಡೀ ಕ್ಷೇತ್ರದ ಮತಗಟ್ಟೆಯ ಮುಂಭಾಗದ ಗೋಡೆಯ ಮೇಲೆ ಕೇಂದ್ರ ಚುನಾವಣಾ ಆಯೋಗದ ಆದೇಶದಂತೆ ಅಂಟಿಸಿದ್ದ ಉಮೇದುದಾರರ ಪಟ್ಟಿಯಲ್ಲಿ ಚುನಾವಣಾಧಿಕಾರಿಗಳ ಬೇಜವಾಬ್ದಾರಿಯಿಂದ ಕರ್ನಾಟಕ ಜನತಾ ಪಕ್ಷ(ಕೆಜೆಪಿ)ದ ಹೆಸರನ್ನು ತಪ್ಪಾಗಿ ನಮೂದಿಸಲಾಗಿತ್ತು ಎಂದು ಕ್ಷೇತ್ರದ ಕೆಜೆಪಿ ಅಭ್ಯರ್ಥಿ ನಾಗೇಂದ್ರ ರಾವ್ ಶಿಂಧೆ ಆರೋಪಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುದ್ರಣ ದೋಷ ಅನ್ನಿಸಲ್ಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಉಮೇದುವಾರರ ಪಟ್ಟಿಯಲ್ಲಿ ಮುದ್ರಣ ದೋಷ ಕಂಡು ಬಂದಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಇದು ಕೇವಲ ಮುದ್ರಣ ದೋಷ ಅನ್ನಿಸುವುದಿಲ್ಲ. ಜಿಲ್ಲಾ ಮುಖ್ಯ ಚುನಾವಣಾಧಿಖಾರಿ ಉದ್ದೇಶಪೂರ್ವಕವಾಗಿ ರಾಷ್ಟ್ರೀಯ ಪಕ್ಷಕ್ಕೆ ಅನುಕೂಲ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಮತದಾರರಲ್ಲಿ ಗೊಂದಲ: ನಮೂನೆ 7 ಎ ರಲ್ಲಿ ಅನ್ವಯ ಚುನಾವಣೆಗೆ ಸ್ಪರ್ಧಿಸುವ ಕ್ರಮಸಂಖ್ಯೆ 7ರಲ್ಲಿ ಕರ್ನಾಟಕ ಜನತಾ ಪಕ್ಷದ(ಕೆಜೆಪಿ)ಅಭ್ಯರ್ಥಿ ನಾಗೇಂದ್ರ ರಾವ್ ಶಿಂಧೆೆ ಹೆಸರಿನ ಮುಂಭಾಗದಲ್ಲಿ ಕರ್ನಾಟಕ ಜನತಾ ಪಕ್ಷದ(ಕೆಜೆಪಿ)ಎಂದು ಮುದ್ರಣಗೊಂಡಿದೆ. ಆ ಸಾಲಿನ ಕೆಳಭಾಗದಲ್ಲಿ ಸಮಾಜವಾದಿ ಜನತಾ ಪಾರ್ಟಿ ಕರ್ನಾಟಕ ಎಂದು ಆಂಗ್ಲ ಭಾಷೆಯಲ್ಲಿ ಪ್ರಕಟಗೊಂಡಿದೆ. ಇದರಿಂದ, ವಿದ್ಯಾವಂತ ಯುವಕರು ಸೇರಿದಂತೆ ಎಲ್ಲಾ ಮತದಾರರು ಗೊಂದಲಕ್ಕೀಡಾದ್ದರು. ಈ ಗೊಂದಲಗಳಿಗೆ ಚುನಾವಣಾಧಿಕಾರಿಗಳೇ ಕಾರಣರಾಗಿದ್ದಾರೆ. ಅವರು ಮಾಡಿರುವ ತಪ್ಪಿನಿಂದ ಪಕ್ಷದ ಹೆಸರಿಗೆ ಚ್ಯುತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಲಧಿಕಾರಿಗಳಿಗೆ ದೂರು: ಸಮಾಜವಾದಿ ಜನತಾ ಪಾರ್ಟಿ ಅಭ್ಯರ್ಥಿ ಖಾದರ ಸುಬಾನ್‌ಖಾನ್ ಎಂಬುವರ ಹೆಸರು ಹಾಗೂ ಕ್ರಮ ಸಂಖ್ಯೆ 5 ಡಿ.ಪಾಳ್ಯ, ಸಮಾಜವಾದಿ ಜನತಾ ಪಾರ್ಟಿ ಎಂದು ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಮುದ್ರಣಗೊಂಡಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದ್ದು, ತಪ್ಪು ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನ್ಯಾಯ ದೊರಕಿಸಿಕೊಡಿ: ಒಳ್ಳೆಯ ನಾಮಫಲಕದ ಜೊತೆಗೆ ಒಳ್ಳೆಯ ಸಂದೇಶ ತಲುಪಿಸಬೇಕಿದ್ದ ಚುನಾವಣಾ ಅಧಿಕಾರಿಗಳೇ ಈ ತಪ್ಪು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ತನಿಖೆ ನಡೆಸಿ, ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.