Advertisement

ಗಾಳಿಯಲ್ಲಿ ಪಟ ಚಿತ್ರವು

06:43 PM Jan 18, 2020 | mahesh |

ಎರಡು ಊರುಗಳ ನಡುವಣ ದೂರವನ್ನು ಅಳೆಯಲು, ಸೇನಾ ಮಾಹಿತಿಯನ್ನು ಕಳುಹಿಸಲು ಅಥವಾ ಒಂದೆಡೆಯಿಂದ ಇನ್ನೊಂದೆಡೆಗೆ ಸಂದೇಶ ರವಾನಿಸಲು ಹಿಂದಿನ ಕಾಲದಲ್ಲಿ ಗಾಳಿಪಟವನ್ನು ಬಳಸುತ್ತಿದ್ದರಂತೆ. ಚೀನಾದವರಂತೂ ಈ ಗಾಳಿಪಟ ತಂತ್ರವನ್ನೇ ಬಳಸಿ ಯುದ್ಧ ತಂತ್ರ ಹೂಡಿದ ಕತೆಗಳಿವೆ. ಅದಿರಲಿ, ತುಳುನಾಡಿನ ಮುಟ್ಟಾಳೆಯನ್ನೋ, ಕೇರಳದ ಕಥಕ್ಕಳಿಯನ್ನೋ ಅಥವಾ ನಮ್ಮ ಯಕ್ಷಗಾನವನ್ನೊ ವಿದೇಶಗಳಲ್ಲಿ ಪರಿಚಯಿಸಲು ಟೀಮ್‌ ಮಂಗಳೂರು ಗಾಳಿಪಟವನ್ನೇ ಬಳಸಿಕೊಂಡಿದೆ.

Advertisement

ಕಲಾವಿದ ಸರ್ವೇಶ್‌ ರಾವ್‌ ರೂಪಿಸಿರುವ ಟೀಮ್‌ ಮಂಗಳೂರು ಹಲವು ಬಾರಿ ವಿದೇಶಗಳಲ್ಲಿ ನಡೆದ ಗಾಳಿಪಟ ಉತ್ಸವಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಿದೆ. ಅದೇ ರೀತಿ ಗಾಳಿಪಟ ಹಾರಿಸುವ ಪ್ರಕ್ರಿಯೆಯನ್ನು ಮಂಗಳೂರಿನಲ್ಲಿಯೂ ಹಬ್ಬವಾಗಿಸಿ, ಸ್ಥಳೀಯರಿಗೂ ಪಟದ ವೈವಿಧ್ಯವನ್ನು ಉಣಬಡಿಸಿದವರು. ಚಳಿಗಾಲದ ತಂಪು ಗಾಳಿಯನ್ನು ಸೀಳಿಕೊಂಡು ಹಾರುವ ಬಣ್ಣದ ಪಟಗಳ ಉತ್ಸವ ಜನವರಿ 17ರಂದೇ ಆರಂಭವಾಯಿತು.

ಈ ಬಾರಿ, ಚೀನಾ, ಇಸ್ರೇಲ್‌, ಥೈಲ್ಯಾಂಡ್‌, ಇಂಡೋನೇಷ್ಯಾ, ನೆದರ್‌ಲ್ಯಾಂಡ್‌, ಸ್ವೀಡನ್‌ನ್‌ ದೇಶಗಳ ಪಟಗಳು ಪಣಂಬೂರು ಕಡಲ ದಂಡೆಯಲ್ಲಿ ಹಾರಾಡಿದವು. ವಿದೇಶಗಳ ಏರೋಫಾಯಿಲ್‌ ಗಾಳಿಪಟಗಳ ಜೊತೆಗೆ ಮಂಗಳೂರಿನ ಕಲಾಕುಸುರಿಯ ಪಟಗಳು ಮತ್ತಷ್ಟು ಆಕರ್ಷಕವಾಗಿ ಕಂಡವು. ಹೈದರಾಬಾದ್‌, ಬೆಂಗಳೂರು, ಮುಂಬೈ, ಉದಯ್‌ಪುರ ಸೇರಿದಂತೆ ಒಟ್ಟು 21 ತಂಡಗಳು ಗಾಳಿಪಟ ಹಾರಿಸಿ ಸಂಭ್ರಮಿಸಿದವು.

ಈ ಗಾಳಿಪಟ ಉತ್ಸವದಲ್ಲಿ ಮಾತಿಗೆ ಸಿಕ್ಕ ನೆದರ್‌ಲ್ಯಾಂಡ್ಸ್‌ನ ಎಂಜಿನಿಯರ್‌ ರೇಮಂಡ್‌ ಡಿ ಗ್ರಾಫ್ ಭಾರತದ ಗಾಳಿಪಟಗಳನ್ನು ತುಂಬ ಇಷ್ಟಪಟ್ಟವರು. “ಭಾರತ ಸಾಂಸ್ಕೃತಿಕ ಹಿನ್ನೆಲೆಯೇ ಅತ್ಯಂತ ಶ್ರೀಮಂತವಾಗಿದೆ. ಆದ್ದರಿಂದ ಕಥಕಳಿ, ಯಕ್ಷಗಾನದ ಗಾಳಿಪಟಗಳಲ್ಲಿ ಬಣ್ಣಗಳ ವೈಭವ ಎದ್ದು ಕಾಣುತ್ತದೆ. ಫ್ರಾನ್ಸ್‌ನಲ್ಲಿ ಟೀಮ್‌ ಮಂಗಳೂರು ತಂಡದ ಸದಸ್ಯರು ಹಾರಿಸಿದ ಪಟಗಳನ್ನು ನೋಡಿ, ನನಗೆ ಭಾರತಕ್ಕೆ ಭೇಟಿ ನೀಡಬೇಕು ಎನಿಸಿತು. ಇಲ್ಲಿ ಈ ಹಿಂದೆಯೂ ಬಂದಿದ್ದೇನೆ. ಇಲ್ಲಿನ ಆಯುರ್ವೇದ ಔಷಧೀಯ ಬಗ್ಗೆಯೂ ನನಗೆ ಬಹಳ ಗೌರವ ಮೂಡಿದೆ. ಅದು ನನ್ನ ಅನಾರೋಗ್ಯವನ್ನು ಗುಣಪಡಿಸಿದೆ. ಮಂಗಳೂರು ನಗರದಲ್ಲಿ ನಾನು ಸ್ಥಳೀಯ ಕಲಾಪ್ರಕಾರಗಳ ಬಗ್ಗೆ ತುಂಬಾ ಹುಡುಕಾಡಿ ಮಾಹಿತಿ ಪಡೆದುಕೊಂಡಿದ್ದೇನೆ. ಇಲ್ಲಿ ಬಣ್ಣಗಳ ಮೇಳೈಸುವಿಕೆಯು ನನ್ನ ಕಲ್ಪನೆಯನ್ನು ತುಂಬ ವಿಸ್ತರಿಸಿದೆ’ ಎಂದು ಹೇಳುತ್ತ ಪಟ ಹಾರಿಸಲು ಸಜ್ಜಾದರು.

2006ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಅಂತ‌ರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಮೊತ್ತಮೊದಲು ಗಾಳಿಪಟ ಹಾರಿಸಿದ ಟೀಮ್‌ ಮಂಗಳೂರು ತಂಡ ಇದೀ ಗಾಳಿಪಟ ಸಂಸ್ಕೃತಿಯನ್ನು ರೂಪಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಿನೇಶ್‌ ಹೊಳ್ಳ, ಗಿರಿಧರ್‌ ಕಾಮತ್‌, ಪ್ರಶಾಂತ ಉಪಾಧ್ಯಾಯ, ವಿ.ಕೆ. ಸನಿಲ್‌, ಸತೀಶ್‌ ರಾವ್‌, ಪ್ರಾಣೇಶ್‌, ಅರುಣ್‌ ಕುಮಾರ್‌, ಶಶಾಂಕ್‌, ಸುಭಾಷ್‌ ಪೈ, ಪ್ರಾಣ್‌, ಜನಾರ್ದನ್‌ ಗಾಳಿಪಟ ಪ್ರೀತಿಯ ಕಲಾವಿದರು. ಇಂದು (ಜ.19) ಸಂಜೆ ಗಾಳಿಪಟ ಉತ್ಸವದ ಸಮಾರೋಪದಲ್ಲಿ ಮಂಗಳೂರಿನ ಪಣಂಬೂರು ಕಡಲ ದಂಡೆಯ ಆಕಾಶದಲ್ಲಿ ಟೀಮ್‌ ಮಂಗಳೂರು ಬಣ್ಣ ಬಣ್ಣದ ಪಟಗಳ ಮೂಲಕ ಚಿತ್ರಬಿಡಿಸಲಿದೆ.

Advertisement

ಶಾಲಿನಿ

Advertisement

Udayavani is now on Telegram. Click here to join our channel and stay updated with the latest news.

Next