ಬಾಗಲಕೋಟೆ: ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ರಾಷ್ಟ್ರ ಮಟ್ಟದ ಗಾಳಿಪಟ ಉತ್ಸವವನ್ನು ಫೆ. 10 ಮತ್ತು 11ರಂದು ಹಮ್ಮಿಕೊಳ್ಳಲಾಗಿದೆ.ಎರಡು ದಿನಗಳ ಕಾಲ ನಡೆಯುವ ಗಾಳಿಪಟ ಉತ್ಸವವನ್ನು ಕೋಟೆ ನಾಡಿನ ಬಳಗ ಸೇವಾ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಸ್ಪರ್ಧಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ.
ಗುಜರಾತ್, ಮಹಾರಾಷ್ಟ್ರ, ದೊಡ್ಡಬಳ್ಳಾಪುರ, ಸೇರಿ ದೇಶದ ಮೂಲೆ ಮೂಲೆಯಿಂದ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ.
22ಕ್ಕೂ ಹೆಚ್ಚು ದೇಶಗಳಲ್ಲಿ ಆಯೋಜಿಸಿದ್ದ ಗಾಳಿಪಟ ಉತ್ಸವಗಳಲ್ಲಿ ಪಾಲ್ಗೊಂಡಿದ್ದ ಸ್ಪರ್ಧಾಳುಗಳು ಬಾಗಲಕೋಟೆಯಲ್ಲಿ ಹಮ್ಮಿಕೊಂಡಿರುವ ಗಾಳಿಪಟ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
ಅಲ್ಲದೇ ಇತ್ತೀಚೆಗಷ್ಟೇ ಲಿಂಗೈಕ್ಯರಾದ ಸಿದ್ದೇಶ್ವರ ಶ್ರೀಗಳು ಹಾಗೂ ನಟ ಪುನೀತ ರಾಜಕುಮಾರ್ ಅವರ ಭಾವಚಿತ್ರ ಇರುವ ಪಟಗಳನ್ನು ಈ ಉತ್ಸವದಲ್ಲಿ ಹಾರಿಸೊ ಮೂಲಕ ಎರಡು ದಿನಗಳ ಗಾಳಿಪಟ ಉತ್ಸಕ್ಕೆ ಚಾಲನೆ ಸಿಗಲಿದೆ. ಇನ್ನು ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಗಾಳಿಪಟ ಉತ್ಸವ ನಡೆಯಲಿದೆ.
ಫೆ. 10ರಂದು ಬೆಳಗ್ಗೆ 10ಕ್ಕೆ ಗಾಳಿಪಟ ಉತ್ಸವಕ್ಕೆ ಚಾಲನೆ ಸಿಗಲಿದ್ದು, ಎರಡು ದಿನಗಳ ಕಾಲ ರಂಗು ರಂಗಿನ ಗಾಳಿಪಟಗಳು, ಎಲ್‌ಇಡಿ ಗಾಳಿಪಟಗಳು ಜನರ ಮನ ತಣಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.