ಕೋಲ್ಕತಾ: ಬಂಗಾಲಿ ಹಿರಿಯ ನಟಿ, ಹಾಡುಗಾರ್ತಿ ರುಮಾ ಗುಹಾ ಥಾಕುರ್ತಾ(84 ವರ್ಷ) ಸೋಮವಾರ ಬೆಳಗ್ಗಿನ ಜಾವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿದೆ.
ಇಂದು ಸಂಜೆ ಕೋಲ್ಕತಾದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ರುಮಾ ಗುಹಾ 1934ರಲ್ಲಿ ಕೋಲ್ಕತಾದಲ್ಲಿ ಜನಿಸಿದ್ದರು. ರುಮಾ ಗುಹಾ ಬಾಲಿವುಡ್ ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರನ್ನು ವಿವಾಹವಾಗಿದ್ದರು. 1950ರಿಂದ 1958ರವರೆಗೆ ಇಬ್ಬರು ಜೊತೆಗಿದ್ದರು. ಈ ದಂಪತಿಯ ಪುತ್ರ ಅಮಿತ್ ಕುಮಾರ್ (66ವರ್ಷ). ಅಮಿತ್ ಕೂಡಾ ಬಾಲಿವುಡ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಾರೆ.
ಕಿಶೋರ್ ಕುಮಾರ್ ಜೊತೆ ಡೈವೋರ್ಸ್ ಆದ ಮೇಲೆ ರುಮಾ ಗುಹಾ ನಿರ್ದೇಶಕ, ಲೇಖಕ ಅರುಪ್ ಗುಹಾ ಥಾಕುರ್ತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಯ ಮಗಳು ಸ್ರೋಮೋನಾ ಗುಹಾ ಮತ್ತು ಅಯಾನ್ ಗುಹಾ ಥಾಕುರ್ತಾ.
1944ರಲ್ಲಿ ರುಮಾ ಗುಹಾ ಸಿನಿ ಜೀವನ ಆರಂಭಿಸಿದ್ದರು. ಬಂಗಾಲಿಯ ಅಮಿಯಾ ಚಕ್ರವರ್ತಿ ಸಿನಿಮಾದಲ್ಲಿ ನಟಿಸಿದ್ದರು. ಸತ್ಯಜಿತ್ ರೇ, ತಪನ್ ಸಿನ್ನಾ, ತರುಣ್ ಮಜುಂದಾರ್, ರಾಜೆನ್ ತಾರಪ್ಧದಾರ್, ಅಪರ್ಣಾ ಸೇನ್ ಸೇರಿದಂತೆ ಖ್ಯಾತ ನಿರ್ದೇಶಕರ ಸಿನಿಮಾಗಳಲ್ಲಿ ರುಮಾ ನಟಿಸಿ ಹೆಸರು ಗಳಿಸಿದ್ದರು.