ಗಗಾವತಿ: ಕೋಟ್ಯಾಂತರ ಹಿಂದೂ ಭಕ್ತರ ಶ್ರದ್ಧಾಕೇಂದ್ರವಾಗಿರುವ ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿ ಪೂಜಾ ಮತ್ತು ಮಾಲೀಕತ್ವದ ವಿವಾದ ಧಾರವಾಡ ಹೈಕೋರ್ಟ್ನಲ್ಲಿರುವಾಗಲೇ ರಾಜ್ಯ ಸರಕಾರ ಕ್ಷೇತ್ರದ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ.ಖರ್ಚು ಮಾಡಲು ನೀಲ ನಕ್ಷೆ ಸಿದ್ಧಪಡಿಸಿದ್ದು ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರದ ಗೃಹ ಸಚಿವ ಅಮೀತ್ ಷಾ ಕಾಮಗಾರಿ ಭೂಮಿಪೂಜೆ ನೆರವೇರಿಸಲಿದ್ದು ಈ ಮಧ್ಯೆ ಅರ್ಚಕ ವಿದ್ಯಾದಾಸ ಬಾಬಾ ಪೂಜಾ ಅಧಿಕಾರ ತಮಗಿದ್ದು ತೀರ್ಥ ಪ್ರಸಾದ ಹಾಗೂ ಭಕ್ತರು ನೀಡುವ ಕಾಣಿಕೆ ಸಂಗ್ರಹ ಮಾಡಲು ಸಹಾಯಕರನ್ನು ನೇಮಕ ಮಾಡಿಕೊಂಡಿರುವ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಅಂಜನಾದ್ರಿ ಬೆಟ್ಟದ ದೇಗುಲ ಉಸ್ತುವಾರಿ ಮಾಡಲು ಆನೆಗೊಂದಿ ರಾಜವಂಶ್ಥರು ಹಲವು ದಶಕಗಳಿಂದ ಟ್ರಸ್ಟ್ ರಚಿಸಿಕೊಂಡು ಪೂಜಾ ಹಾಗೂ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಡುತ್ತಿದ್ದರು. ಉತ್ತರ ಭಾರತದ ಅರ್ಚಕರಾಗಿದ್ದ ದಿವಂಗತ ಲಕಡದಾಸ ಬಾಬಾ ನಿಧನದ ಕೆಲ ವರ್ಷಗಳ ನಂತರ ಟ್ರಸ್ಟ್ ನವರು ಮಹಾಂತ ವಿದ್ಯಾದಾಸ ಬಾಬಾ ಅವರನ್ನು ಅಂಜನಾದ್ರಿಯಲ್ಲಿ ಅರ್ಚಕ ವೃತ್ತಿಗೆ ನೇಮಕ ಮಾಡಿದ್ದರು. ಟ್ರಸ್ಟ್ ಹಾಗೂ ವಿದ್ಯಾದಾಸ ಬಾಬಾ ಅವರ ಮಧ್ಯೆ ಕೆಲ ವಿಷಯಗಳಲ್ಲಿ ಗೊಂದಲವುಂಟಾಗಿದ್ದರಿಂದ ರಾಜವಂಶಸ್ಥರನ್ನು ನಿರ್ಲಕ್ಷ್ಯ ಮಾಡಿದ ನೆಪ ಮತ್ತು ದೇಗುಲದ ವ್ಯಾಪ್ತಿಯಲ್ಲಿ ಬಾಬಾ ಕೆಲ ವರ್ತನೆಯ ಪರಿಣಾಮ ಅರ್ಚಕ ವೃತ್ತಿಯಿಂದ ಬಾಬಾ ಅವರನ್ನು ಟ್ರಸ್ಟ್ ವಜಾ ಮಾಡಿತು. ನಂತರ ಬಾಬಾ ಅವರನ್ನು ಪೊಲೀಸರು ಬೆಟ್ಟದಿಂದ ಕೆಳಗಿಳಿಸಿದರು. ಈ ಮಧ್ಯೆ ಅಂಜನಾದ್ರಿಯಲ್ಲಿ ಅಶಾಂತಿಯ ವಾತಾವರಣವಿದ್ದು ಭಕ್ತರ ಹಿತದೃಷ್ಠಿಯಿಂದ ದೇವಾಲಯವನ್ನು ಸರಕಾರದ ವಶಕ್ಕೆ ಪಡೆಯುಂತೆ ತಹಸೀಲ್ದಾರ್ ಹಾಗೂ ಗ್ರಾಮೀಣ ಪೊಲೀಸ ವರದಿ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ 2018 ಜುಲೈ 23 ರಂದು ಅಂಜನಾದ್ರಿಯನ್ನು ಜಿಲ್ಲಾಡಳಿತದ ವಶಕ್ಕೆ ಪಡೆದು ಸರಕಾರಕ್ಕೆ ವರದಿ ಸಲ್ಲಿಸಿದರು. ರಾಜ್ಯ ಸರಕಾರ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಅಂಜನಾದ್ರಿಯನ್ನು ವಹಿಸಿ ಇಲ್ಲಿ ಕೆಲಸ ಮಾಡುತ್ತಿದ್ದ 22 ಜನರ ಸಿಬ್ಬಂದಿಯನ್ನು ಖಾಯಂಗೊಳಿಸಿತು.
ದೇಗುಲವನ್ನು ಸರಕಾರದ ವಶಕ್ಕೆ ಪಡೆದ ಮತ್ತು ಪೂಜಾ ಕಾರ್ಯಕ್ಕೆ ಅಡ್ಡಿಪಡಿಸಿದ ಕುರಿತು ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಧಾರವಾಡ ಹೈಕೋರ್ಟ್ನಲ್ಲಿ ಪ್ರಶ್ನಿಸಿ ದಾವೆ ಹೂಡಿದರು. ನ್ಯಾಯಾಲಯ ಮಧ್ಯಂತರ ಆದೇಶ ನೀಡಿ ವಿದ್ಯಾದಾಸ ಬಾಬಾ ಅವರಿಗೆ ಪೂಜಾ ಕಾರ್ಯ ಮಾಡಲು ಅವಕಾಶ ಕಲ್ಪಿಸಿತು. ಭಕ್ತರ ಕಾಣಿಕೆ ಸಂಗ್ರಹ ಮತ್ತು ತೀರ್ಥ ಪ್ರಸಾದ ವಿತರಣೆ ಮಾಡಲು ಅರ್ಚಕ ವಿದ್ಯಾದಾಸ ಬಾಬಾ ಅವರು ಈಗಾಗಲೇ ಯತ್ನ ನಡೆಸಿದ್ದು ಇದಕ್ಕೆ ಮುಜರಾಯಿ ಇಲಾಖೆ ಸಿಬ್ಬಂದಿಗಳು ಆಕ್ಷೇಪಿಸುತ್ತಲೇ ಬಂದಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಲ್ಹೋಟ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಸಚಿವರು ಗಣ್ಯರು ಅಂಜನಾದ್ರಿಗೆ ಭೇಟಿ ನೀಡಿ ಬೆಟ್ಟದ ಕೆಳಗಿನ ಪಾದಗಟ್ಟೆ ಆಂಜನೇಯನಿಗೆ ಪೂಜೆ ಸಲ್ಲಿಸುವ ಸಂದರ್ಭದಲ್ಲೂ ತಾವೇ ಧಾರ್ಮಿಕ ಕಾರ್ಯ ಮಾಡುವುದಾಗಿ ವಿದ್ಯಾದಾಸ ಬಾಬಾ ಕ್ಯಾತೆ ತೆಗೆದ ಸಂದರ್ಭದಲ್ಲಿ ಪೊಲೀಸರು ಬಾಬಾನನ್ನು ವಶಪಡೆದಿದ್ದರು. ಶುಕ್ರವಾರ ಬಾಬಾ ತನ್ನ ಆಪ್ತರನ್ನು ಬೆಟ್ಟದ ಮೇಲಿನ ದೇಗುಲದಲ್ಲಿ ಕಾಣಿಕೆ ಸಂಗ್ರಹ ಮತ್ತು ತೀರ್ಥ ಪ್ರಸಾದ ಕೊಡಲು ಕುಳ್ಳಿರಿಸಿದ ಸಂದರ್ಭದಲ್ಲಿ ಸಿಬ್ಬಂದಿ ಹಾಗೂ ಬಾಬಾ ಮಧ್ಯೆ ವಾಗ್ವಾದ ತಳ್ಳಾಟ ನಡೆದು ಪೊಲೀಸ್ ಠಾಣೆಯ ಮೆಟ್ಟಿಲೇರಿ ನಂತರ ದೂರು ಕೊಡುವ ಹಂತಕ್ಕೂ ತಲುಪಿ ಪ್ರಭಾವಿಗಳ ಒತ್ತಡದ ಕಾರಣ ದೂರು ದಾಖಲಾಗಿಲ್ಲ ಎನ್ನಲಾಗುತ್ತಿದೆ.
ಅಂಜನಾದ್ರಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ರೈತರ ನೂರಾರು ಎಕರೆ ಭೂಮಿ ವಶಪಡಿಸಿಕೊಂಡು ಕೋಟ್ಯಾಂತರ ರೂ. ಪರಿಹಾರ ನೀಡುವ ಪ್ರಕ್ರಿಯೆ ನಡೆದಿದೆ.ದೇಗುಲದ ಮಾಲೀಕತ್ವದ ಕುರಿತು ಕೋರ್ಟ್ನಲ್ಲಿ ವಿವಾದ ಯಾರ ಪರವಾಗಿ ಬರುತ್ತದೆ ಎಂದು ತಿಳಿಯದು ಈ ಮಧ್ಯೆ ಸರಕಾರ ತರಾತುರಿಯಲ್ಲಿ 120 ಕೋಟಿ ರೂ.ಗಳಲ್ಲಿ ಮೂಲಸೌಕರ್ಯ ಹಾಗೂ ಯಾತ್ರಿ ನಿವಾಸ ಹಾಗೂ 600 ಕೋಟಿ ವೆಚ್ಚದಲ್ಲಿ ಹಿಟ್ನಾಳದಿಂದ ಸಾಯಿನಗರದ ವರೆಗೆ ದ್ವಿಮುಖ ರಸ್ತೆ ಸೇರಿ ಹಲವು ಅಭಿವೃದ್ದಿ ಕಾರ್ಯಗಳಿಗೆ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡುತ್ತಿದ್ದು ಭವಿಷ್ಯದಲ್ಲಿ ವಿವಾದಕ್ಕೀಡಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪ್ರಚಾರಕ್ಕಾಗಿ ಸರಕಾರ ಕೋಟ್ಯಾಂತ ರೂ. ಅನುದಾನ ಘೋಷಣೆ ಆರೋಪ: ಅಂಜನಾದ್ರಿ ಬೆಟ್ಟದ ಪೂಜಾ ಕಾರ್ಯ ಮತ್ತು ಮಾಲೀಕತ್ವದ ವಿವಾದ ಧಾರವಾಡ ಹೈಕೋರ್ಟಿನಲ್ಲಿದ್ದು ನಿರ್ಣಯವಾಗದ ಮುನ್ನ ಪ್ರಚಾರಕ್ಕಾಗಿ ಅಂಜನಾದ್ರಿಯಲ್ಲಿ ಮೂಲಸೌಕರ್ಯ ಕಲ್ಪಿಸಲು ನೂರಾರು ಎಕರೆ ರೈತರ ಭೂಮಿ ವಶಕ್ಕೆ ಪಡೆದು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿ ಕೋಟ್ಯಾಂತರ ರೂ. ಖರ್ಚು ಮಾಡುವ ಮಾತನಾಡುತ್ತಿದೆ. ಇದುವರೆಗೂ ಒಂದು ಪೈಸಾ ಕೂಡ ಬಿಡುಗಡೆ ಮಾಡಿಲ್ಲ. ದೇಗುಲದಲ್ಲಿ ಸಣ್ಣಪುಟ್ಟ ಕಾಮಗಾರಿಯನ್ನು ಭಕ್ತರು ನೀಡಿದ ಕಾಣಿಕೆ ಹುಂಡಿಯ ಹಣದಿಂದ ಖರ್ಚು ಮಾಡಲಾಗಿದ್ದು ಸರಕಾರಕ್ಕೆ ಅಂಜನಾದ್ರಿ ಶಾಶ್ವತವಾಗಿ ಅಭಿವೃದ್ಧಿ ಮಾಡುವ ಇಚ್ಛೆ ಇದ್ದರೆ ಕೋರ್ಟ್ ನಿರ್ಣಯದ ವರೆಗೂ ಕಾಯುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ವಿವಾದದ ಅಂತ್ಯಕ್ಕೂ ಮೊದಲು ಅಭಿವೃದ್ದಿಯ ಮಂತ್ರ
ಗಗಾವತಿ: ಅಂಜನಾದ್ರಿಯ ಮಾಲೀಕತ್ವದ ವಿವಾದ ನಿರ್ಣಯವಾಗುವ ಮೊದಲೇ ಸರಕಾರ ತರಾತುರಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮುಂದಾಗಿದ್ದು ರೈತರ ಭೂಮಿ ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಸಿದೆ. ಪೂಜಾ ಕಾರ್ಯದ ಕುರಿತು ಪದೇ ಪದೇ ಅರ್ಚಕ, ಆಪ್ತರು ಮತ್ತು ಸಿಬ್ಬಂದಿಗಳ ಮಧ್ಯೆ ಹಲವು ಭಾರಿ ಘರ್ಷಣೆ ನಡದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮತ್ತು ಕೇಂದ್ರ ಸರಕಾರದ ಕೆಲ ಸಚಿವರು ಅಂಜನಾದ್ರಿಯನ್ನು ಪ್ರಸ್ತಾಪಿಸುವ ಮೂಲಕ ಚುನಾವಣೆಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದು ಕ್ಷೇತ್ರದ ಮಾಲೀಕತ್ವ ಮತ್ತು ಅಭಿವೃದ್ಧಿಯ ಕುರಿತು ಅವರಿಗೆ ಕಾಳಜಿ ಇಲ್ಲ ಎಂದು ಆನೆಗೊಂದಿ ರಾಜವಂಶಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಂಜನಾದ್ರಿ ಬೆಟ್ಟ ರಾಜ್ಯ ಸರಕಾರಕ್ಕೆ ಸೇರಿದೆ ಈಗಾಗಲೇ ಸರಕಾರ ಆದೇಶಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿಯ ಕೆಲಸ ಮಾಡುವ ಸಿಬ್ಬಂದಿಗೆ ಸರಕಾರಿ ನೌಕರರ ಮಾನ್ಯತೆ ನೀಡಲಾಗಿದೆ. ನಿತ್ಯವೂ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು ಅವರಿಗೆ ಮೂಲಸೌಕರ್ಯಕ್ಕೆ ಯೋಜನೆ ರೂಪಿಸಲಾಗಿದೆ. ಸರಕಾರ ಜನರ ಧಾರ್ಮಿಕ ವಿಷಯಗಳಲ್ಲಿ ಗೌರವವಿದ್ದು ಅವರಿಗೆ ಎಲ್ಲಾ ಸೌಕರ್ಯ ನೀಡಲಾಗುತ್ತದೆ. ಧಾರವಾಡ ಹೈಕೋರ್ಟ್ ಅರ್ಚಕ ವೃತ್ತಿ ಮಾಡಲು ಮಹಾಂತ ವಿದ್ಯಾದಾಸ ಬಾಬಾ ಅವರಿಗೆ ಅವಕಾಶ ಕಲ್ಪಿಸಿದ್ದು ನಿತ್ಯವೂ ಅವರಿಗೆ ಪೂಜಾ ಧಾರ್ಮಿಕ ಕಾರ್ಯಕ್ಕೆ ಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದಾರೆ. ಇತರರಿಗೆ ದೇಗುಲದಲ್ಲಿ ಪೂಜಾ ಧಾರ್ಮಿಕ ಕಾರ್ಯ ಹಾಗೂ ತೀರ್ಥ ಪ್ರಸಾದ ವಿತರಣೆ ಮಾಡಲು ಅವಕಾಶವಿಲ್ಲ. ದೇಗುಲದ ಸಿಬ್ಬಂದಿಯವರೇ ತೀರ್ಥ ಪ್ರಸಾದ ವಿತರಣೆ ಮಾಡಲಿದ್ದಾರೆ. ಮಾ.14 ರಂದು ಸಿಎಂ ಬೊಮ್ಮಾಯಿಯವರು ಅಂಜನಾದ್ರಿಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ.
– ಪರಣ್ಣ ಮುನವಳ್ಳಿ ಶಾಸಕರು.
– ಕೆ.ನಿಂಗಜ್ಜ