ಗಂಗಾವತಿ: ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿಯಲ್ಲಿ ತಾವು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರೂ ದೇಗುಲದ ಆಡಳಿತ ನಡೆಸುವ ಅಧಿಕಾರಿಗಳು ಪುನಹ ಅರ್ಚಕರನ್ನು ಕಾನೂನಿಗೆ ವಿರುದ್ಧವಾಗಿ ನೇಮಕ ಮಾಡಿಕೊಂಡಿದ್ದು ಇದನ್ನು ನ್ಯಾಯಾಲಯದ ಗಮನಕ್ಕೆ ತರುವುದಾಗಿ ಅಂಜನಾದ್ರಿಯ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಅವರು ಆಕ್ಷೇಪವೆತ್ತಿದ್ದಾರೆ.
ಅವರು ಉದಯವಾಣಿ ಜತೆ ಮಾತನಾಡಿ, ದೇಗುಲದ ಮಾಲೀಕತ್ವ ಕುರಿತು ಧಾರವಾಡ ಹೈಕೋರ್ಟಿನಲ್ಲಿ ವ್ಯಾಜ್ಯವಿದ್ದು ಕೋರ್ಟು ತಮಗೆ ಪೂಜೆ ಧಾರ್ಮಿಕ ಕಾರ್ಯಕ್ರಮ ಮಾಡಲು ಅವಕಾಶ ಕಲ್ಪಿಸಿದೆ. ಅದರಂತೆ ತಾವು ಕಳೆದ ಮೂರು ವರ್ಷಗಳಿಂದ ಬೆಟ್ಟದ ಮೇಲಿದ್ದುಕೊಂಡು ಪೂಜಾ ಕಾರ್ಯ ಮಾಡುತ್ತಿದ್ದರೂ ತಹಸೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರು ಮೂರು ನಾಲ್ಕು ಅರ್ಚಕರನ್ನು ಅಕ್ರಮವಾಗಿ ನೇಮಕ ಮಾಡಿಕೊಂಡು ಜನರಿಂದ ದಕ್ಷಿಣೆ ಪಡೆಯುತ್ತಿದ್ದಾರೆ.
ಕೆಲ ಅರ್ಚಕ ಕುಟುಂಬದವರಿಗೆ ಬೆಟ್ಟದ ಮೇಲಿನ ಕೊಠಡಿಗಳಲ್ಲಿ ವಾಸ ಮಾಡಲು ಅವಕಾಶ ಕಲ್ಪಿಸಿದ್ದು ಕೊರೊನಾ ಕರ್ಪ್ಯೂ ಸಂದರ್ಭದ ನಿಯಮ ಗಾಳಿ ತೂರಿ ಬಳ್ಳಾರಿಯಿಂದ ಆಗಮಿಸಿದ ಕುಟುಂಬಗಳಿಗೆ ದೇಗುಲದಲ್ಲಿ ಅವಕಾಶ ಕಲ್ಪಿಸಿದ್ದು ನಿಯಮಗಳಿಗೆ ವಿರುದ್ದವಾಗಿದ್ದು ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶ ಮಾಡಿ ಈ ಅಕ್ರಮವನ್ನು ತಡೆಯಬೇಕು. ವಾಹನಗಳ ಪಾರ್ಕಿಂಗ್ ಜಾಗದಲ್ಲಿ ವಾಹನಗಳ ನಿಲುಗಡೆಗೆ ದೇಗುಲ ಕಮೀಟಿಯವರು ಶುಲ್ಕ ನಿಗದಿ ಮಾಡಿದ್ದು ಕೆಲ ಅಧಿಕಾರಿಗಳು ತಮ್ಮ ಸಂಬಂಧಿಕರನ್ನು ಕೆಲಸಕ್ಕೆ ನೇಮಕ ಮಾಡಿಕೊಂಡು ವಾಹನಗಳ ಪಾರ್ಕಿಂಗ್ ಶುಲ್ಕದಲ್ಲಿ ಗೋಲ್ ಮಾಡುತ್ತಿರುವ ಕುರಿತು ಬಿಎಸ್ಪಿ ಪಕ್ಷ ಹಾಗೂ ಸ್ಥಳೀಯರು ದೂರು ಸಲ್ಲಿಸಿದ್ದರೂ ಅಧಿಕಾರಿಗಳ ಸಂಬಂಧಿಕರನ್ನು ಕೂಡಲೇ ಕೆಲಸದಿಂದ ತೆಗೆದುಹಾಕಬೇಕು. ಕುಡಿಯುವ ನೀರಿನ ತೊಂದರೆ ಇದ್ದು ಇಲ್ಲಿಗೆ ಆಗಮಿಸುವ ಭಕ್ತರಿಗೆ ತೊಂದರೆಯಾಗಿದೆ. ಅನಗತ್ಯ ಖರ್ಚುವೆಚ್ಚಗಳನ್ನು ತೋರಿಸಿ ಹಣ ಹೊಡೆಯುವ ಕಾರ್ಯ ಕೆಲ ಅಧಿಕಾರಿಗಳು ಮಾಡುತ್ತಿದ್ದಾರೆ. ಎಲ್ಲಾ ಹಗರಣಗಳ ಬಗ್ಗೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ತನಿಖೆ ನಡೆಸಬೇಕೆಂದು ವಿದ್ಯಾದಾಸ ಬಾಬಾ ಒತ್ತಾಯಿಸಿದ್ದಾರೆ.