Advertisement

ಇಶಾನ್‌ ಕಿಶನ್‌ 94 ಎಸೆತಗಳಲ್ಲಿ 173: ಜಾರ್ಖಂಡ್‌ ತಂಡದ ನಾಯಕನ ದಾಖಲೆ

12:09 AM Feb 21, 2021 | Team Udayavani |

ಇಂದೋರ್‌: ವಿಜಯ್‌ ಹಜಾರೆ ಟ್ರೋಫಿ ಪಂದ್ಯಾವಳಿಯ ಮೊದಲ ದಿನವೇ ಜಾರ್ಖಂಡ್‌ ಮತ್ತು ಆ ತಂಡದ ನಾಯಕ ಇಶಾನ್‌ ಕಿಶನ್‌ ಬೃಹತ್‌ ಮೊತ್ತದ ದಾಖಲೆಯೊಂದಿಗೆ ಕೂಟದ ಕಾವೇರಿಸಿದರು. ಇಲ್ಲಿನ “ಹೋಳ್ಕರ್‌ ಸ್ಟೇಡಿಯಂ’ನಲ್ಲಿ ಮಧ್ಯಪ್ರದೇಶ ವಿರುದ್ಧ ಮೊದಲು ಬ್ಯಾಟಿಂಗ್‌ ನಡೆಸಿದ ಜಾರ್ಖಂಡ್‌ 9 ವಿಕೆಟಿಗೆ 422 ರನ್‌ ಪೇರಿಸಿತು. ಇದರಲ್ಲಿ ಇಶಾನ್‌ ಕಿಶನ್‌ ಪಾಲು ಅಮೋಘ 173 ರನ್‌. ಕೇವಲ 94 ಎಸೆತಗಳನ್ನು ಎದುರಿಸಿದ ಇಶಾನ್‌ 19 ಬೌಂಡರಿ ಹಾಗೂ 11 ಭರ್ಜರಿ ಸಿಕ್ಸರ್‌ ಸಿಡಿಸಿ ಮೆರೆದರು.
ಇದು ಭಾರತದ ದೇಶಿ ಏಕದಿನ ಕ್ರಿಕೆಟ್‌ ಇತಿಹಾಸದಲ್ಲೇ ತಂಡವೊಂದು ಪೇರಿಸಿದ ಬೃಹತ್‌ ಮೊತ್ತ. 2010ರಲ್ಲಿ ಇದೇ ಅಂಗಳದಲ್ಲಿ ರೈಲ್ವೇಸ್‌ ವಿರುದ್ಧ ನಡೆದ ವಿಜಯ್‌ ಹಜಾರೆ ಟ್ರೋಫಿ ಪಂದ್ಯದಲ್ಲಿ ಮಧ್ಯಪ್ರದೇಶ 6ಕ್ಕೆ 412 ರನ್‌ ಗಳಿಸಿದ ದಾಖಲೆ ಪತನಗೊಂಡಿತು. ಅಂದಿನ ಪಂದ್ಯದಲ್ಲಿ ನಮನ್‌ ಓಜಾ 167 ರನ್‌ ಬಾರಿಸಿದ್ದರು. ಓಜಾ ಕೂಡ ವಿಕೆಟ್‌ ಕೀಪರ್‌ ಎಂಬುದು ಉಲ್ಲೇಖನೀಯ.

Advertisement

ಜವಾಬಿತ್ತ ಮಧ್ಯಪ್ರದೇಶ 18.4 ಓವರ್‌ಗಳಲ್ಲಿ ಕೇವಲ 98 ರನ್ನಿಗೆ ಆಲೌಟ್‌ ಆಯಿತು. ಜಾರ್ಖಂಡ್‌ 324 ರನ್ನುಗಳ ಬೃಹತ್‌ ಅಂತರದ ಗೆಲುವು ಸಾಧಿಸಿ ಮತ್ತೂಂದು ದಾಖಲೆ ಸ್ಥಾಪಿಸಿತು.

ತಪ್ಪಿದ ದ್ವಿಶತಕ
ಇಶಾನ್‌ ಕಿಶನ್‌ ಅವರಿಗೆ ದ್ವಿಶತಕ ಬಾರಿಸುವ ಉಜ್ವಲ ಅವಕಾಶವೊಂದಿತ್ತು. ಅವರು ಔಟಾಗುವಾಗ ಇನ್ನೂ 22 ಓವರ್‌ಗಳ ಆಟ ಬಾಕಿ ಇತ್ತು. ಕೆಲವು ಓವರ್‌ ಕ್ರೀಸ್‌ ಆಕ್ರಮಿಸಿಕೊಂಡರೂ ದೊಡ್ಡ ಮೊತ್ತ ಒಲಿಯುತ್ತಿತ್ತು.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್‌ ಆಟಗಾರನಾಗಿರುವ ಇಶಾನ್‌ ಕಿಶನ್‌ ಕಳೆದ ಋತುವಿನಲ್ಲಿ 145.76 ಸ್ಟ್ರೈಕ್‌ರೇಟ್‌ನಲ್ಲಿ 516 ರನ್‌ ಪೇರಿಸಿದ್ದರು. ಕೂಟದಲ್ಲೇ ಅತ್ಯಧಿಕ 29 ಸಿಕ್ಸರ್‌ ಬಾರಿಸಿದ ದಾಖಲೆ ಇವರದಾಗಿತ್ತು.

ತಮಿಳುನಾಡು ಭರ್ಜರಿ ಚೇಸಿಂಗ್‌
ಇಂದೋರ್‌: ಆರಂಭಕಾರ ಎನ್‌. ಜಗದೀಶನ್‌ ಅವರ ಅಮೋಘ ಶತಕ (101), ಬಾಬಾ ಅಪರಾಜಿತ್‌ (88) ಮತ್ತು ಶಾರೂಖ್‌ ಖಾನ್‌ (ಅಜೇಯ 55) ಅವರ ಬಿರುಸಿನ ಬ್ಯಾಟಿಂಗ್‌ ನೆರವಿನಿಂದ ಪಂಜಾಬ್‌ ವಿರುದ್ಧದ “ವಿಜಯ್‌ ಹಜಾರೆ ಟ್ರೋಫಿ’ ಪಂದ್ಯದಲ್ಲಿ ತಮಿಳುನಾಡು 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌, ಗುರುಕೀರತ್‌ ಸಿಂಗ್‌ ಮಾನ್‌ ಅವರ ಅಜೇಯ 139 ರನ್‌ ಸಾಹಸದಿಂದ 4 ವಿಕೆಟಿಗೆ 288 ರನ್‌ ಪೇರಿಸಿ ಸವಾಲೊಡ್ಡಿತು. ತಮಿಳುನಾಡು 49 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 289 ರನ್‌ ಬಾರಿಸಿತು.

ಐಪಿಎಲ್‌ನಲ್ಲಿ 5.25 ಕೋಟಿ ರೂ. ಮೊತ್ತಕ್ಕೆ ಪಂಜಾಬ್‌ ಕಿಂಗ್ಸ್‌ ಪಾಲಾಗಿದ್ದ ಶಾರೂಖ್‌ ಖಾನ್‌ 5ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದು ಕೇವಲ 36 ಎಸೆತಗಳಿಂದ 55 ರನ್‌ ಸಿಡಿಸಿದ ಪರಿಣಾಮ ತಮಿಳುನಾಡು ದಡ ಸೇರಿತು. ಶಾರೂಖ್‌ 7 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next