ರಾಮನಗರ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ 6 ಸಾವಿರ ರೂ. ಪಡೆಯಲು ಭೂ ಒಡೆತನ ಹೊಂದಿರುವ ರೈತರು ಕೂಡಲೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಜೂನ್ 25 ಕೊನೆ ದಿನ. ತಾಲೂಕು ಆಡಳಿತದ ನಗದಿತ ಅರ್ಜಿಗಳನ್ನು ರೈತರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ ಎಂದು ತಹಶೀಲ್ದಾರ್ ರಾಜು ತಿಳಿಸಿದ್ದಾರೆ.
ಮಿನಿ ವಿಧಾನಸೌಧದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಸಹಾಯಕರು, ಗ್ರಾಮ ಪಂಚಾಯ್ತಿ ಸಿಬ್ಬಂದಿ ರೈತರ ಮನೆ ಬಾಗಿಲಿಗೆ ತೆರಳಿ ಅರ್ಜಿಗಳನ್ನು ವಿತರಿಸಲಿದ್ದಾರೆ. ಈ ಯೋಜನೆಯಡಿ ಪ್ರತಿ ರೈತರಿಗೆ 3 ಕಂತುಗಳಲ್ಲಿ ವಾರ್ಷಿಕ 6 ಸಾವಿರ ರೂ. ರೈತರ ಆಧಾರ್ ಜೋಡಣೆ ಆಗಿರುವ ಬ್ಯಾಂಕ್ ಖಾತೆಗಳಿಗೆ ಜಮೆ ಆಗಲಿದೆ. ಈ ಸೌಲಭ್ಯವನ್ನು ಪಡೆಯಲು ಎಲ್ಲಾ ರೈತರು ಅರ್ಹರಿದ್ದಾರೆ ಎಂದರು.
ಒದಗಿಸಬೇಕಾದ ದಾಖಲೆಗಳು: ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸೌಲಭ್ಯ ಪಡೆಯಲು ರೈತರು ತಮ್ಮ ಆಧಾರ್ ಸಂಖ್ಯೆ, ಆಧಾರ್ ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ಪಾಸ್‌ಬುಕ್ ಛಾಯಾ ಪ್ರತಿ ನೀಡಬೇಕಾಗಿದೆ. ರೈತರು ಪಹಣಿ ನೀಡಬೇಕಾಗಿಲ್ಲ. ಆದರೆ, ತಾವು ಹೊಂದಿರುವ ಭೂಮಿಯ ವಿವರವನ್ನು ಅರ್ಜಿಯಲ್ಲಿ ನಮೂದಿಸಬೇಕಾಗಿದೆ. ಪಹಣಿ ವಿವರಗಳನ್ನು ತಾಲೂಕು ಕಚೇರಿಯಲ್ಲಿ ಸಿಬ್ಬಂದಿಯೇ ಪರಿಶೀಲನೆ ಮಾಡಲಿದ್ದಾರೆ ಎಂದು ಹೇಳಿದರು.
ಇವರು ಅನರ್ಹರು: ಸರ್ಕಾರಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತರಾಗಿರುವ ಅಧಿಕಾರಿಗಳು (ಡಿ-ಗ್ರೂಪ್ ನೌಕರರು ಹೊರತುಪಡಿಸಿ), 10 ಸಾವಿರ ರೂ.ಗಿಂತ ಹೆಚ್ಚಿ ಮೊತ್ತ ಪಡೆಯುತ್ತಿರುವ ಪಿಂಚಣಿದಾರರು. ಆದಾಯ ತೆರಿಗೆ ಪಾವತಿಸುವ ಕುಟುಂಬಗಳು, ವೈದ್ಯರು, ಎಂಜಿನಿಯರ್, ವಕೀಲರು ಮುಂತಾದ ವೃತ್ತಿಪರರು (ಪತಿ ಅಥವಾ ಪತ್ನಿ), ಸಾಂವಿಧಾನಿಕ ಹುದ್ದೆ ಹೊಂದಿದ ಕುಟುಂಬಗಳು, ಸಾಂಸ್ಥಿಕ ಭೂ ಮಾಲೀಕರ ಕುಟುಂಬಗಳು ಯೋಜನೆಗೆ ಅನರ್ಹರಾಗಿದ್ದಾರೆ. ರೈತರು ತಮಗೆ ಸಮೀಪದ ಬಾಪೂಜಿ ಸೇವಾ ಕೇಂದ್ರ, ನಾಡ ಕಚೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ತೆರಳಿ ಅನುಬಂಧದಲ್ಲಿ ತಮ್ಮ ಹೆಸರು, ಆಧಾರ್ ಸಂಖ್ಯೆ, ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ವಿವರ, ಜಮೀನಿನ ವಿವರ ಮುಂತಾದ ವಿವರಗಳನ್ನು ನಮೂದಿಸಿ ಸ್ವಯಂ ಘೋಷಣೆಯನ್ನು ಸದರಿ ದಾಖಲೆಗಳ ನಕಲು ಪ್ರತಿಯೊಂದಿಗೆ ಜೂ. 25ರೊಳಗೆ ಸಲ್ಲಿಸಬೇಕಾಗಿದೆ ಎಂದು ಹೇಳಿದರು.
ರಜೆಯಿದ್ದರೂ ಕರ್ತವ್ಯ ನಿರ್ವಹಣೆ: ರೈತರ ಅನುಕೂಲಕ್ಕಾಗಿ ಜೂ.22 ಮತ್ತು 23ರಂದು ಸಾರ್ವಜನಿಕ ರಜೆಯಿದ್ದರೂ ಕೃಷಿ ಇಲಾಖೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳು ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳು ಕರ್ತವ್ಯ ನಿರ್ವಹಿಸುತ್ತವೆ. ಹೆಚ್ಚಿನ ಸಂಖ್ಯೆಯ ರೈತರು ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ತಾಲೂಕು ಪಂಚಯ್ತಿ ಇಒ ಬಾಬು ಉಪಸ್ಥಿತರಿದ್ದರು.