Advertisement
ಭಾರತೀಯ ಕಿಸಾನ್ ಸಂಘ ಜನ್ಮ ತಳೆದು ಸುಮಾರು 44 ವರ್ಷಗಳಾಗುತ್ತಿದ್ದರೂ ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಕೆಲ ರಾಜ್ಯಗಳಲ್ಲಿ ಸ್ವಂತ ಕಟ್ಟಡ ಹೊಂದಿದೆ. ರಾಜ್ಯದಲ್ಲಿ ಹಲವು ವರ್ಷಗಳಿಂದ ಭಾರತೀಯ ಕಿಸಾನ್ ಸಂಘ ಕಾರ್ಯನಿರ್ವಹಿಸುತ್ತ ಬಂದಿದೆಯಾದರೂ ಇದುವರೆಗೂ ತನ್ನದೇಯಾದ ಸ್ವಂತ ಕಟ್ಟಡ ಹೊಂದಿರಲಿಲ್ಲ. ಹುಬ್ಬಳ್ಳಿಯಲ್ಲಿ ಸ್ವಂತ ಕಟ್ಟಡ ನಿರ್ಮಿಸಬೇಕೆಂಬ ಹಲವು ವರ್ಷಗಳ ಭಾರತೀಯ ಕಿಸಾನ್ ಸಂಘ ಉತ್ತರ ಪ್ರಾಂತದ ಯತ್ನ ಇದೀಗ ಸಾಕಾರಗೊಂಡಿದೆಯಲ್ಲದೆ, ಹುಬ್ಬಳ್ಳಿಯಲ್ಲಿ ತಲೆ ಎತ್ತಿರುವ ರೈತ ಸೌಧ ಕಟ್ಟಡ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಮಾದರಿಯಾಗಿದ್ದು, ನ.24ರಂದು ಲೋಕಾರ್ಪಣೆಗೊಳ್ಳಲಿದೆ.
Related Articles
Advertisement
ದಕ್ಷಿಣ ಭಾರತದ ಮೊದಲ ಸ್ವಂತ ಕಟ್ಟಡ: ಭಾರತೀಯ ಕಿಸಾನ್ ಸಂಘದ ದಕ್ಷಿಣ ಭಾರತದ ಮೊದಲ ಕಟ್ಟಡ ಹುಬ್ಬಳ್ಳಿಯಲ್ಲಿ ತಲೆ ಎತ್ತಿದೆ. ಸುಮಾರು 2,200 ಚದರ ಅಡಿಗಿಂತ ಹೆಚ್ಚಿನ ಜಾಗದಲ್ಲಿ ಕಟ್ಟಡ ಕಂಗೊಳಿಸುತ್ತಿದೆ. 2019ರ ನವೆಂಬರ್ 7ರಂದು ಆರಂಭವಾಗಿದ್ದ ಕಟ್ಟಡ ಇದೀಗ ರೈತರ ಬಳಕೆಗೆ ಸಜ್ಜುಗೊಂಡಿದೆ.
ರೈತರ-ದಾನಿಗಳ ದೇಣಿಗೆಯೊಂದಿಗೆ ನಿರ್ಮಾಣಗೊಂಡ ಮೊದಲ ಸ್ವಂತ ಕಟ್ಟಡ ಎಂಬ ಹೆಗ್ಗಳಿಕೆ ಹುಬ್ಬಳ್ಳಿ ಕಟ್ಟಡ ಹೊಂದಿದೆ. ಅಂದಾಜು 1 ಕೋಟಿ ರೂ.ವೆಚ್ಚದಲ್ಲಿ ನೆಲಮಹಡಿ ಸೇರಿದಂತೆ ಒಟ್ಟು 3 ಮಹಡಿ ಕಟ್ಟಡವನ್ನು ಇದು ಹೊಂದಿದೆ. ಮೇಲಿನ ಮಹಡಿಯಲ್ಲಿ 150-200 ರೈತರು ಕುಳಿತುಕೊಳ್ಳಬಹುದಾದ ಸಭಾಭವನ ಹೊಂದಿದೆ. ಮಧ್ಯದ ಮಹಡಿಯಲ್ಲಿ ರೈತರಿಗೆ ಉಪಹಾರ-ಭೋಜನಕ್ಕೆ ಅಡುಗೆ ತಯಾರಿಗೆ ಸ್ಥಳವಕಾಶ ಕಲ್ಪಿಸಲಾಗಿದೆ. ಇದಲ್ಲದೆ ಅತಿಥಿಗಳು ಯಾರಾದರು ಬಂದರೆ ಅವರು ಉಳಿದುಕೊಳ್ಳುವುದಕ್ಕೆ ಮೂರು ಕೋಣೆಗಳ ವ್ಯವಸ್ಥೆಯನ್ನು ಕಟ್ಟಡ ಹೊಂದಿದೆ.
ಬಿಕೆಎಸ್ ರೈತ ಸೌಧದಲ್ಲಿ ರೈತರಿಗೆ ಗೋ ಆಧಾರಿತ ಹಾಗೂ ಸಾವಯವ ಕೃಷಿ ಕಡೆಗೆ ಆಕರ್ಷಿಸುವ ನಿಟ್ಟಿನಲ್ಲಿ ಅಗತ್ಯ ತರಬೇತಿ, ಮಾರ್ಗದರ್ಶನ, ಭೂಮಿ ಫಲವತ್ತತೆ, ಪರಿಸರ ಮೇಲಾಗುವ ಪ್ರಯೋಜನ, ವಿಷಮುಕ್ತ ಕೃಷಿ ಅಗತ್ಯತೆ, ದೇಸಿ ಗೋವು ಸಾಕಣೆಯಿಂದ ದೊರೆಯುವ ಲಾಭ, ಸ್ವಾವಲಂಬಿ ಗ್ರಾಮ, ಸಮರ್ಥ ಭಾರತ ನಿರ್ಮಾಣ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.
ರೈತರೊಂದಿಗೆ ಸಂವಾದ, ತಜ್ಞರ ಮಾರ್ಗದರ್ಶನ, ರೈತರ ಸಮಾವೇಶಕ್ಕೆ ರೈತ ಸೌಧ ಕಟ್ಟಡ ವೇದಿಕೆಯಾಗಲಿದೆ. ಪರಸ್ಥಳಗಳಿಂದ ಹುಬ್ಬಳ್ಳಿಗೆ ಬಂದ ರೈತರ ವಾಸ್ತವ್ಯಕ್ಕೂ ಇದು ಆಸರೆಯಾಗಲಿದೆ. ಭಾರತೀಯ ಕೃಷಿ ಮೂಲಪುರುಷ ಎಂದೇ ಭಾವಿಸುವ ಬಲರಾಮನ ಆಳೆತ್ತರದ ಚಿತ್ರ ಹೊಂದಿರುವ ಭಾರತೀಯ ಕಿಸಾನ್ ಸಂಘದ ರೈತ ಸೌಧ ನ.24ರಿಂದ ಅನ್ನದಾತನ ಬಳಕೆಗೆ ತನ್ನನ್ನು ತಾನು ತೊಡಗಿಸಿಕೊಳ್ಳಲಿದೆ. ಇತರೆ ರಾಜ್ಯಗಳಿಗೆ ಸ್ವಂತ ಕಟ್ಟಡಕ್ಕೆ ಪ್ರೇರಣಾ ಶಕ್ತಿಯಾಗಲಿದೆ.
ಗೋ ಆಧಾರಿತ ಕೃಷಿ, ರೈತರ ಹಿತ ನಿಟ್ಟಿನಲ್ಲಿ ಸದಾ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಿಸಾನ ಸಂಘ ಸ್ವಂತ ಕಟ್ಟಡ ಹೊಂದಬೇಕೆಂಬ ಕನಸು ರಾಜ್ಯದ ಅನೇರದ್ದಾಗಿತ್ತು. ಈ ನಿಟ್ಟಿನಲ್ಲಿ ಹಲವು ಕಡೆಗಳಲ್ಲಿ ಯತ್ನಗಳು ನಡೆದಿದ್ದವದರೂ, ಹುಬ್ಬಳ್ಳಿಯಲ್ಲಿ ಸಮುದಾಯ ಬಳಕೆ ಜಾಗ ದೊರೆತಿದ್ದರಿಂದ ರೈತ ಸೌಧ ನಿರ್ಮಾಣಕ್ಕೆ ಮುಂದಾದ ಸಂಘಕ್ಕೆ ಅನ್ನದಾತರು, ದಾನಿಗಳ ನೆರವು ಬಹುದೊಡ್ಡ ಉತ್ತೇಜನ ನೀಡಿತು. ಹಲವು ಹಿರಿಯರ ಮಾರ್ಗದರ್ಶನ ಜತೆಗೆ ಸಂಘದ ರಾಜ್ಯಾಧ್ಯಕ್ಷ ಭೀಮಸೇನ ಕೋಕರೆ, ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ರಮೇಶ ಕೊರವಿ, ಉತ್ತರ ಪ್ರಾಂತ್ಯ ಅಧ್ಯಕ್ಷ ವಿವೇಕ ಮೋರೆ ಸೇರಿದಂತೆ ಅನೇಕರ ಪರಿಶ್ರಮದ ಫಲವಾಗಿ ಸೌಧ ಎದ್ದು ನಿಂತಿದೆ. ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡು ಬಳಕೆಗೆ ಸಿದ್ಧವಿದ್ದು, ಕಂಪೌಂಡ್ ನಿರ್ಮಾಣ ಇನ್ನು ಬಾಕಿ ಇದೆ. ಹುಬ್ಬಳ್ಳಿಯಲ್ಲಿನ ರೈತ ಸೌಧ ದಕ್ಷಿಣ ಭಾರತದಕ್ಕೇ ಕೇಂದ್ರ ಬಿಂದುವಾಗಿ ಮಿಂಚುತ್ತಿದೆ ಎಂಬ ಸಂತಸ ನಮ್ಮೆಲ್ಲರದ್ದಾಗಿದೆ. ಇದರ ಹಿಂದಿನ ಹಲವರ ಪರಿಶ್ರಮ, ಶ್ರಮದಾನ, ದಾನಿಗಳ ನೆರವನ್ನು ಯಾವ ಕಾರಣಕ್ಕೂ ಮರೆಯುವಂತಿಲ್ಲ. -ಪುಟ್ಟಸ್ವಾಮಿ, ಭಾರತೀಯ ಕಿಸಾನ್ ಸಂಘ ಸಂಘಟನಾ ಕಾರ್ಯದರ್ಶಿ
-ಅಮರೇಗೌಡ ಗೋನವಾರ