ಒಂದಿನವೂ ಶಾಲೆ, ಕಾಲೇಜಿಗೆ ಕಾರಿನಲ್ಲಿ ಹೋಗಿಲ್ಲ…
ನಾನು ಮಾಡಿದ ಮೀನು ಸಾರ್‌ಗೆ ಅಪ್ಪ ಫಿದಾ ಆಗ್ತಿದ್ರು…
ಮಕ್ಕಳ ಪಾಲಿಗೆ ಸ್ಟ್ರಿಕ್ಟ್ ಅಮ್ಮ
Advertisement
ಕೀರ್ತಿ ವಿಷ್ಣುವರ್ಧನ್, ಕನ್ನಡದ ಹೆಸರಾಂತ ಕಲಾವಿದ ದಂಪತಿ ವಿಷ್ಣುವರ್ಧನ್- ಭಾರತಿ ಅವರ ಪುತ್ರಿ, ಸಿನಿಮಾ ನಟ ಅನಿರುದ್ಧ್ ಅವರ ಪತ್ನಿ. ಕುಟುಂಬವೇ ನನ್ನ ಶಕ್ತಿ ಮತ್ತು ಸ್ಫೂರ್ತಿ ಎನ್ನುವ ಇವರು ಜೇಷ್ಠ ವರ್ಧನ್, ಶ್ಲೋಕ ಎಂಬ ಇಬ್ಬರು ಮುದ್ದುಮಕ್ಕಳ ತಾಯಿ. “ಕೀರ್ತಿ, ನಟನಾರಂಗಕ್ಕೆ ಬರುತ್ತಾರಾ?’ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇದೆ. ಇಬ್ಬರು ಸೂಪರ್‌ಸ್ಟಾರ್‌ಗಳ ಮಗಳಾಗಿ, ಪೋಷಕರಿಂದ ಕಲಿತ ಜೀವನ ಪಾಠ, ಮಜಭರಿತ ಪ್ರಸಂಗಗಳು, ಬಾಲ್ಯ, ವೃತ್ತಿ ಎಲ್ಲವನ್ನೂ ಇವರು “ಅವಳು’ ಜೊತೆ ಹಂಚಿಕೊಂಡಿದ್ದಾರೆ…
ನನಗೆ ಚಿಕ್ಕಂದಿನಿಂದಲೂ ಬಣ್ಣಗಳು, ಹೊಸ ವಿನ್ಯಾಸಗಳು, ಬಟ್ಟೆ ಬರೆ ಎಂದರೆ ತುಂಬಾ ಇಷ್ಟ. ನಾನು ಓದಿದ್ದು ಕೂಡ ಫ್ಯಾಷನ್ ಡಿಸೈನಿಂಗ್. ಮನೆಯಲ್ಲಿ ಅಪ್ಪ- ಅಮ್ಮನ ಡ್ರೆಸ್ಸಿಂಗ್ ಸೆನ್ಸ್ ಅಂತೂ ಸೂಪರ್. ಅವರನ್ನು ನೋಡುತ್ತಲೇ ಉಡುಗೆ- ತೊಡುಗೆ ಮೇಲೆ ಆಸಕ್ತಿ ಬೆಳೆದಿದ್ದು. ಆಗೆಲ್ಲಾ ಸಿನಿಮಾಗಳಿಗೆ ಅಪ್ಪನಿಗೆ ಬಡಾಸಾಬ್ ಮತ್ತು ಅಮ್ಮನಿಗೆ ನಾಗರಾಜ್ ಎಂಬವರು ವಸ್ತ್ರವಿನ್ಯಾಸ ಮಾಡುತ್ತಿದ್ದರು. ಆಮೇಲೆ ಅಪ್ಪ ನಿತ್ಯ ಹಾಕುವ ಬಟ್ಟೆಗಳನ್ನು ನಾನೇ ಆರಿಸಲು ಆರಂಭಿಸಿದೆ. ಅಪ್ಪನ ಉಡುಗೆಗೆ ಅಪಾರ ಮೆಚ್ಚುಗೆ ಸಿಕ್ಕಿತು. ಆಮೇಲೆ “ವಿಷ್ಣು ಸರ್‌ಗೆ ನೀನೇ ಏಕೆ ವಸ್ತ್ರವಿನ್ಯಾಸ ಮಾಡಬಾರದು?’ ಎಂಬ ಸಲಹೆಗಳು ಬಂದವು. “ಮೋಜುಗಾರ ಸೊಗಸುಗಾರ’ ಚಿತ್ರಕ್ಕೆ ನಾನು ವಸ್ತ್ರವಿನ್ಯಾಸ ಮಾಡಿದ್ದು ಆಗಲೇ. ಹೀಗೆ ತುಂಬಾ ಕಿರಿಯ ವಯಸ್ಸಿನಲ್ಲೇ ವಸ್ತ್ರವಿನ್ಯಾಸಕಿ ಆದೆ. |
ಅಪ್ಪ- ಅಮ್ಮ ಇಬ್ಬರೂ ದೊಡ್ಡ ಕಲಾವಿದರೇ ಆಗಿದ್ದರೂ ನಮ್ಮನ್ನು ಸಾಮಾನ್ಯರ ಮಕ್ಕಳಂತೆಯೇ ಬೆಳೆಸಿದರು. ನಮ್ಮ ಮನೆಯಲ್ಲಿ 4 ಕಾರುಗಳಿದ್ದರೂ ಒಮ್ಮೆಯೂ ನಾವು ಶಾಲೆ, ಕಾಲೇಜಿಗೆ ಕಾರಿನಲ್ಲಿ ಹೋದವರಲ್ಲ. ಅಷ್ಟೇ ಏಕೆ, ಮೆಜೆಸ್ಟಿಕ್‌ಗೆ ಹೋಗಿ ಬಸ್ ಪಾಸನ್ನು ನಾವೇ ಮಾಡಿಸಿಕೊಳ್ಳಬೇಕಿತ್ತು. ಮೈಸೂರಿಗೆ ಹೋಗುವುದಿದ್ದರೆ ರೈಲಿನಲ್ಲಿ ಹೋಗುತ್ತಿದ್ದೆವು. ಶ್ರಮ ಪಡದೇ ಏನನ್ನೂ ಪಡೆಯಬಾರದು ಎಂಬುದು ಅಪ್ಪನ ಅಭಿಪ್ರಾಯವಾಗಿತ್ತು. ನನ್ನಲ್ಲಿರುವ ಧೈರ್ಯ, ಆತ್ಮವಿಶ್ವಾಸಕ್ಕೆಲ್ಲಾ ಅವರು ನನ್ನನ್ನು ಬೆಳೆಸಿದ ರೀತಿಯೇ ಕಾರಣ.
Related Articles
ಅಮ್ಮ ಮತ್ತು ಅಪ್ಪ ಇಬ್ಬರದೂ ದೊಡ್ಡ ಕುಟುಂಬ. ಅಪ್ಪ ಯಾವತ್ತೂ ಹೆಣ್ಣು ಮಕ್ಕಳನ್ನೂ ಏಕವಚನದಲ್ಲಿ ಮಾತಾಡಿಸಿದವರಲ್ಲ. ಮಹಿಳೆಯರನ್ನು ಗೌರವಯುತವಾಗಿ ಕಾಣುತ್ತಿದ್ದರು. ಅವರೊಬ್ಬರೇ ಅಲ್ಲ, ಮನೆಯಲ್ಲಿ ಎಲ್ಲರೂ ಸಂಸ್ಕಾರ ಪಾಲಿಸುತ್ತಿದ್ದರು. ಅವರೆಲ್ಲರ ಮಧ್ಯೆ ಬೆಳೆದಿದ್ದು ನನ್ನ ಪುಣ್ಯ.
Advertisement
– ನಿಮ್ಮ ಮದುವೆ ಲವ್ ಮ್ಯಾರೇಜಾ, ಅರೇಂಜ್ಡ್ ಮ್ಯಾರೇಜಾ? ನಮ್ಮದು ಅರೇಂಜ್ಡ್ ಮ್ಯಾರೇಜ್. ಅಪ್ಪ, ಅಮ್ಮ, ಅಕ್ಕ ನೋಡಿ, ಒಪ್ಪಿದ ಹುಡುಗ ಅನಿರುದ್ಧ್. “ಹಯವದನ’ ನಾಟಕ ನೋಡಲು ಎಲ್ಲರೂ ಹೋಗಿದ್ದೆವು. ಅನಿ ಅದರಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದರು. ನಾಟಕ ಮುಗಿದ ಬಳಿಕ ಅಪ್ಪ, ಅಮ್ಮ, ನಾನು, ಅಕ್ಕ ಕಲಾವಿದರನ್ನು ಅಭಿನಂದಿಸಲು ತೆರಳಿದೆವು. ಅನಿ, ಅಪ್ಪನಿಗೆ ತುಂಬಾ ಇಷ್ಟವಾದರು. ಮನೆಗೆ ಬಂದ ಬಳಿಕ ಅವರ ಬಗ್ಗೆ, ಅವರ ಕುಟುಂಬದ ಬಗ್ಗೆ ವಿಚಾರಿಸಿದರು. ಎಲ್ಲರಿಗೂ ಈ ಸಂಬಂಧ ಇಷ್ಟವಾಯಿತು. ನಾನು ಅನಿಯನ್ನು ಒಮ್ಮೆ ಭೇಟಿ ಮಾಡಿದೆ. ನಾನು ಅಪ್ಪನ ಮಗಳು. ಅಪ್ಪ ಇಷ್ಟಪಟ್ಟ ಮೇಲೆ ಮರುಯೋಚಿಸಲು ಹೋಗಲಿಲ್ಲ. – ಮದುವೆ ಬಗ್ಗೆ ನಿಮ್ಮ ವ್ಯಾಖ್ಯಾನ ಏನು?
ಮದುವೆ ಎನ್ನುವುದು ಕೇವಲ ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಬಂಧವಲ್ಲ. ಎರಡು ಕುಟುಂಬಗಳ ಮಧ್ಯೆ ನಡೆಯುವಂಥದ್ದು. ನಮ್ಮ ಮದುವೆ ಹಾಗೆಯೇ ನಡೆದಿದೆ. ನನ್ನ ತಂದೆ- ತಾಯಿಯನ್ನು, ಅನಿ ತಮ್ಮ ಸ್ವಂತ ತಂದೆ ತಾಯಿಯಂತೆ ಕಾಣುತ್ತಾರೆ. ಅವರ ತಂದೆ- ತಾಯಿಯನ್ನು ನಾನು ನನ್ನ ತಂದೆ- ತಾಯಿಯಂತೆ ಕಾಣುತ್ತೇನೆ. ಅವರನ್ನೂ ನಾನು ಅಪ್ಪ, ಅಮ್ಮ ಎಂದೇ ಕರೆಯುವುದು. ನಾವೆಲ್ಲರೂ ಒಟ್ಟಿಗೇ ಒಂದೇ ಮನೆಯಲ್ಲಿದ್ದೇವೆ.
ಹುಟ್ಟಿದಾಗಿನಿಂದಲೂ ಸಿನಿಮಾರಂಗವನ್ನು ಹತ್ತಿರದಿಂದ ನೋಡಿಕೊಂಡು ಬಂದಿದ್ದೇನೆ. ಸಿನಿಮಾರಂಗ ಯಾವತ್ತೂ ನನ್ನ ಮನಸ್ಸಿಗೆ ಹತ್ತಿರವಿರುವ ಕ್ಷೇತ್ರ. ಕಾಸ್ಟೂéಮ್ ಡಿಸೈನರ್ ಆಗಿ, ಡಿಸ್ಟ್ರಿಬ್ಯೂಟರ್ ಆಗಿ ಇಲ್ಲಿ ಕೆಲಸ ಮಾಡಿದ್ದೇನೆ. ಅನಿರುದ್ಧ್ ಕೂಡ ಸಿನಿಮಾರಂಗದಲ್ಲೇ ಇರುವುದರಿಂದ ನಮ್ಮ ಬದುಕು, ಸಿನಿರಂಗದ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ. – ವಿಷ್ಣುವರ್ಧನ್ ಅವರ ಸಂಗೀತ ಕ್ಲಬ್ ಬಗ್ಗೆ ಹೇಳುತ್ತೀರಾ?
ತಿಂಗಳಲ್ಲಿ ಒಂದು ದಿನ ಚಿತ್ರರಂಗದವರೆಲ್ಲರೂ ಒಂದೆಡೆ ಸೇರಿ ಸಂತಸದಿಂದ ಸಮಯ ಕಳೆಯುವ ಉದ್ದೇಶದಿಂದ ಅಪ್ಪ ಒಂದು ಕರೋಕೆ ಕ್ಲಬ್ (ಸಂಗೀತ ಸಂಘ) ಆರಂಭಿಸಿದರು. ಈಗಲೂ ಅದು ಮುಂದುವರಿದುಕೊಂಡು ಬಂದಿದೆ. ಪ್ರತಿ ತಿಂಗಳ 2ನೇ ಶನಿವಾರ ಇಲ್ಲಿ ಸೇರಿ ನಮ್ಮಿಷ್ಟದ ಹಾಡುಗಳನ್ನು ಹಾಡುತ್ತೇವೆ. ನಾನು, ಅನಿ ತಪ್ಪದೇ ಹಾಡು ಹಾಡುತ್ತೇವೆ. ನಾವಿಬ್ಬರೂ ಸಂಗೀತಾಸಕ್ತರಲ್ಲದೇ ಶಾಸ್ತ್ರೀಯವಾಗಿ ಸಂಗೀತ ಕಲಿತಿರುವವರು. ನಾನು ಗಾಯಕಿ ಮಂಜುಳಾ ಗುರುರಾಜ್ ಬಳಿ ಸಂಗೀತ ಕಲಿತಿದ್ದೇನೆ. ಅನಿ, ಬಾಂಬೆ ಯುನಿವರ್ಸಿಟಿಯಿಂದಲೇ ಸಂಗೀತದಲ್ಲಿ ವಿದ್ವತ್ ಪಡೆದಿದ್ದಾರೆ. – ಬಿಡುವಿನ ವೇಳೆಯಲ್ಲಿ ಏನು ಮಾಡುತ್ತೀರಾ?
ನನಗೆ ಪ್ರವಾಸ ಮಾಡುವುದೆಂದರೆ ತುಂಬಾ ಇಷ್ಟ. ಯಾವುದಾದರೂ ಹೊಸ ಜಾಗ ಹುಡುಕಿಕೊಂಡು ಹೋಗುವುದರಲ್ಲಿ ಥ್ರಿಲ್ ಸಿಗುತ್ತದೆ. ಪ್ರವಾಸದ ಜೊತೆ ಹೊಸ ಬಗೆಯ ಆಹಾರದ ರುಚಿ ನೋಡುತ್ತೇನೆ. ವಿದೇಶ ಪ್ರವಾಸಕ್ಕೆ ಹೋದರೆ, ಅಲ್ಲಿನ ವಿಶೇಷ ಖಾದ್ಯಗಳ ರುಚಿ ನೋಡುವುದನ್ನು ತಪ್ಪಿಸುವುದಿಲ್ಲ. ಇತ್ತೀಚೆಗೆ ಮನೆಮಂದಿಯೆಲ್ಲಾ ಬದ್ರಿ, ಹರಿದ್ವಾರಕ್ಕೆ ಪ್ರವಾಸ ಹೋಗಿದ್ದೆವು. ಅದು ತುಂಬಾ ಖುಷಿಕೊಟ್ಟಿತು. – ನಮ್ಮ ಮತ್ತು ಅನಿರುದ್ಧ್ ಇಬ್ಬರಲ್ಲೂ ಇರುವ ಗುಣಗಳು, ಆಸಕ್ತಿಗಳು ಯಾವುವು?
ಇಬ್ಬರಿಗೂ ತಂದೆ- ತಾಯಿ ಎಂದರೆ ಪ್ರಾಣ. ಇಬ್ಬರೂ ಸಿಟ್ಟು ಮಾಡಿಕೊಳ್ಳುವುದು ಕಡಿಮೆ. ಸಿಟ್ಟು ಬಂದರೂ 10 ನಿಮಿಷದ ಮೇಲೆ ಇರುವುದಿಲ್ಲ. ಇಬ್ಬರೂ ದೈವ ಭಕ್ತರು, ಸಂಗೀತ ಪ್ರೇಮಿಗಳು. ಬಹುತೇಕ ವಿಚಾರಗಳಲ್ಲಿ ನಾವಿಬ್ಬರೂ ಒಂದೇ ರೀತಿ ಯೋಚಿಸುತ್ತೇವೆ. – ಅಡುಗೆ ಮಾಡುವುದೆಂದರೆ ನಿಮಗೆ ಇಷ್ಟವೇ?
ಅಡುಗೆ ಮಾಡುವುದರಲ್ಲಿ ನಾನು ಎಕ್ಸ್‌ಪರ್ಟ್. ಅಪ್ಪನಿಗೆ ನಾನು ತಯಾರಿಸುತ್ತಿದ್ದ ಮೀನು ಮತ್ತು ಚಿಕನ್ ಖಾದ್ಯಗಳು ತುಂಬಾ ಇಷ್ಟವಿತ್ತು. ಅಮ್ಮನಿಗೆ ಮಟನ್ ಸಾರು ತುಂಬಾ ಇಷ್ಟ. ಒಂದು ವಿಚಾರ ಹೇಳಲೇಬೇಕು. ನನ್ನ ಅಪ್ಪ ಆಗಲಿ, ಅನಿ ಆಗಲಿ ನಾನು ಮಾಡಿದ ಅಡುಗೆಯನ್ನು ಚೆನ್ನಾಗಿಲ್ಲ ಅಂತ ಯಾವತ್ತೂ ಹೇಳಿಲ್ಲ. ಅಡುಗೆ ಅಷ್ಟೊಂದು ಚೆನ್ನಾಗಿಲ್ಲದೇ ಇದ್ದಾಗಲೂ ಅಪ್ಪ, “ಚೆನ್ನಾಗಿದೆಯಮ್ಮ, ಸ್ವಲ್ಪ ಉಪ್ಪು ಬೇಕಿತ್ತು. ಅಷ್ಟೇ’ ಅಂತ ಮಾತ್ರ ಹೇಳುತ್ತಿದ್ದರು. – ಅಪ್ಪ- ಅಮ್ಮನಿಗೆ ಯಾವತ್ತಾದರೂ ಸರ್‌ಪ್ರೈಸ್ ಕೊಟ್ಟಿದ್ದೀರಾ?
ಅಪ್ಪ, ಅಮ್ಮನ 30ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಸುಮಾರು 200 ಜನ ನೆಂಟರು, ಸ್ನೇಹಿತರನ್ನು ಗುಟ್ಟಾಗಿ ಕರೆಸಿ, ಮನೆಯಲ್ಲಿ ಪೂಜೆ ಮಾಡಿಸಿ, ಅವರಿಬ್ಬರಿಗೂ ಮತ್ತೂಮ್ಮೆ ಮದುವೆ ಮಾಡಿಸಿದ್ದೆ. ಆಗ ಇಬ್ಬರೂ ತುಂಬಾ ಸಂತೋಷಪಟ್ಟಿದ್ದರು. ಪ್ರತಿ ವ್ಯಾಲೆಂಟೈನ್ಸ್ ಡೇ, ಹುಟ್ಟುಹಬ್ಬಗಳಂದು ಇಬ್ಬರಿಗೂ ತಪ್ಪದೇ ಸರ್‌ಪ್ರೈಸ್ ಗಿಫ್ಟ್ಗಳನ್ನು ಕೊಡುತ್ತಿದ್ದೆ. ಈಗಲೂ ಅಮ್ಮನಿಗೆ ಸರ್‌ಪ್ರೈಸ್ ಕೊಡುತ್ತೇನೆ.
ನನ್ನ ಜೊತೆ ಮಕ್ಕಳೂ ಕೈಜೋಡಿಸುತ್ತಾರೆ. ಅವರಿಗೂ ಅವರ ಅಪ್ಪ, ಅಜ್ಜಿ, ತಾತಂದಿರ ಹುಟ್ಟುಹಬ್ಬ ಆಚರಿಸುವುದು, ಗಿಫ್ಟ್ ಕೊಡುವುದು ಎಂದರೆ ತುಂಬಾ ಇಷ್ಟ. ಮಗ ನನಗಿಂತ ಮೊದಲೇ ಹೋಗಿ ಕೇಕ್ ಆರ್ಡರ್ ಮಾಡಿ ಬರುತ್ತಾನೆ. – ಮಕ್ಕಳ ಬಗ್ಗೆ ಹೇಳುತ್ತೀರಾ? ಅವರೂ ಚಿತ್ರರಂಗಕ್ಕೆ ಬರುತ್ತಾರಾ?
ಅವರಿಬ್ಬರೂ ಅಪ್ಪ- ಅಮ್ಮನಿಗಿಂತ ಹೆಚ್ಚಾಗಿ ಅಜ್ಜಿಯಂದಿರು, ತಾತನನ್ನೇ ತುಂಬಾ ಹಚ್ಚಿಕೊಂಡಿದ್ದಾರೆ. ಅವರ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ನನ್ನ ಬಗ್ಗೆ ಎಷ್ಟು ಪ್ರೀತಿ ಇದೆಯೋ ಅಷ್ಟೇ ಭಯವೂ ಇದೆ. ಮಗ ಜೇಷ್ಠ ವರ್ಧನ್ 9ನೇ ತರಗತಿಯಲ್ಲಿದ್ದಾನೆ. ಚೆನ್ನಾಗಿ ಓದುತ್ತಿದ್ದಾನೆ. ಅವನು ಸಿನಿಮಾರಂಗಕ್ಕೆ ಬರಲು ಆಸೆ ಪಟ್ಟರೆ ನನ್ನ ಸಂಪೂರ್ಣ ಬೆಂಬಲ ಆತನಿಗಿರುತ್ತದೆ. ಮಗಳು ಶ್ಲೋಕ 6ನೇ ತರಗತಿಯಲ್ಲಿದ್ದಾಳೆ. ಅವಳ ಅಭಿರುಚಿಗಳೆಲ್ಲಾ ಥೇಟ್ ನನ್ನಂತೆಯೇ ಇವೆ. ಅವಳು ಫ್ಯಾಷನ್ ಡಿಸೈನರ್ ಆಗಬೇಕೆಂದು ಈಗಲೇ ನಿರ್ಧರಿಸಿದ್ದಾಳೆ. ಅದಕ್ಕಾಗಿ ಈಗಿಂದಲೇ ತಯಾರಾಗುತ್ತಿದ್ದಾಳೆ. ಚೇತನ ಜೆ.ಕೆ.