ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿರುವ “ಕಿರಿಕ್ ಪಾರ್ಟಿ’ ಚಿತ್ರಕ್ಕೆ ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ನಿರ್ದೇಶಕ ರಿಷಬ್ ಶೆಟ್ಟಿ ಹೇಳುವಂತೆ, ಕನ್ನಡಿಗರು ಚಿತ್ರವನ್ನು ರೊಚ್ಚಿಗೆದ್ದು ಪ್ರಮೋಟ್ ಮಾಡುತ್ತಿದ್ದಾರಂತೆ. ಈಗಾಗಲೇ ಚಿತ್ರವು ಕರ್ನಾಟಕದವಲ್ಲದೆ ಚೆನ್ನೈ ಮತ್ತು ಕೊಚ್ಚಿಯಲ್ಲೂ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ದುಬೈನಲ್ಲೂ ಚಿತ್ರ ಬಿಡುಗಡೆಯಾಗಿದ್ದು, ಇಂದಿನಿಂದ “ಕಿರಿಕ್ ಪಾರ್ಟಿ’ ಚಿತ್ರವು ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಸಿಂಗಾಪೂರ್, ಜರ್ಮನಿ, ಅಮೇರಿಕಾ ಮುಂತಾದ ಕಡೆ ಬಿಡುಗಡೆಯಾಗುತ್ತದಂತೆ.
ಹೌದು, “ಕಿರಿಕ್ ಪಾರ್ಟಿ” ಚಿತ್ರವು ಇಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿರುವ ಫೌಂಟೇನ್ ಗೇಟ್‌ನ ವಿಲೇಜ್ ಸಿನಿಮಾಸ್‌ನಲ್ಲಿ ಸಂಜೆ 4ಕ್ಕೆಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಲಿವರ್ ಪೂಲ್, ಪರ್ಥ್, ಅಡಿಲೈಡ್, ಬ್ರಿಸ್ಬೇನ್ ಮುಂತಾದ ಕಡೆ ಜನವರಿ 22ರ ನಂತರ ಬಿಡುಗಡೆಯಾಗಲಿದೆ. ಇದಾದ ಮೇಲೆ ಜನವರಿ 21ಕ್ಕೆ ಚಿತ್ರವು ಸಿಂಗಾಪೂರ್‌ನಲ್ಲಿ ಬಿಡುಗಡೆಯಾಗುತ್ತದೆ. ಜನವರಿ 29ಕ್ಕೆ ಜರ್ಮನಿಯಲ್ಲಿ ಬಿಡುಗಡೆಯಾಗಲಿದ್ದು, ಈಗಾಗಲೇ ಅಲ್ಲಿ ಸೆನ್ಸಾರ್ ಕೂಡಾ ಮಾಡಿಸಲಾಗಿದೆ.
ಫೆಬ್ರವರಿ ಒಂದರಂದು ಅಮೇರಿಕಾದಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಅಮೇರಿಕಾದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ “ಕಿರಿಕ್ ಪಾರ್ಟಿ’ ಎಂದು ಹೇಳಲಾಗುತ್ತಿದೆ. ಅಮೇರಿಕಾ ದಾದ್ಯಂತ ಸುಮಾರು 100 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಓಡಾಡುತ್ತಿದೆ.
ಇವಿಷ್ಟು ಓವರ್‌ಸೀಸ್‌ನ ಸುದ್ದಿಯಾದರೆ, ಕರ್ನಾಟಕದಲ್ಲಿ ಸುಮಾರು 200 ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆಯಂತೆ. ಸುಮಾರು 100 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು, ಮೂರನೇ ವಾರಕ್ಕೆ 200 ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ ಎಂದು ಖುಷಿಪಡುತ್ತಾರೆ ನಿರ್ದೇಶಕ ರಿಷಬ್. ಅಲ್ಲಿಗೆ ಎರಡು ವಾರಗಳ ಅಂತರದಲ್ಲಿ ಸುಮಾರು 100 ಚಿತ್ರಮಂದಿರಗಳು ಸೇರ್ಪಡೆಯಾಗಿವೆ. “ಕಿರಿಕ್ ಪಾರ್ಟಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗಡೆ, ಕೆ.ಎಸ್. ಶ್ರೀಧರ್, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಕರಮ್ ಚಾವ್ಲಾ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.