“ಕಿರಿಕ್ ಪಾರ್ಟಿ’ ಚಿತ್ರ ಬಿಡುಗಡೆಯಾಗಿ ಫೆ.19ಕ್ಕೆ 50 ದಿನ. ಸಾಮಾನ್ಯವಾಗಿ ಸದ್ಯದ ಸ್ಥಿತಿಯಲ್ಲಿ ಒಂದು ಸಿನಿಮಾ ಬಿಡುಗಡೆಯಾಗಿ ಒಂದೇ ವಾರಕ್ಕೆ ಥಿಯೇಟರ್‌ಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಚಿತ್ರಮಂದಿರಗಳ ಅಭಾವ ಎಂದು ನಿರ್ಮಾಪಕರು ಬೇಸರ ವ್ಯಕ್ತಪಡಿಸುತ್ತಿರುತ್ತಾರೆ. ಆದರೆ “ಕಿರಿಕ್ ಪಾರ್ಟಿ’ ಚಿತ್ರ ಬಿಡುಗಡೆಯಾಗಿ 50ನೇ ದಿನದ ಹೊಸ್ತಿಲಿನಲ್ಲಿದ್ದರೂ ಈ ಚಿತ್ರಕ್ಕೆ ಚಿತ್ರಮಂದಿರದ ಅಭಾವ ಕಾಡಿಲ್ಲ.
ಇವತ್ತಿಗೂ ಅಂದಾಜು 200 ಚಿತ್ರಮಂದಿರಗಳಲ್ಲಿ “ಕಿರಿಕ್ ಪಾರ್ಟಿ’ ಯಶಸ್ವಿ ಪ್ರದರ್ಶನವಾಗುತ್ತಿದೆ. ಒಂದು ಕಡೆ ಚಿತ್ರಮಂದಿರಗಳ ಅಭಾವ ಎಂದು ನಿರ್ಮಾಪಕರು ಹೇಳುತ್ತಿರುವಾಗಲೇ “ಕಿರಿಕ್ ಪಾರ್ಟಿ’ಗೆ ಚಿತ್ರಮಂದಿರದ ಅಭಾವ ಕಾಡದಿರುವುದು ಅನೇಕರ ಹುಬ್ಬೇರಿಸಿದೆ. ಇದಕ್ಕೆ ಒಂದು ಕಾರಣ ಸಿನಿಮಾವನ್ನು ಪ್ರೇಕ್ಷಕ ಇಷ್ಟಪಟ್ಟಿರೋದು.
ಯಾವುದೇ ಸಿನಿಮಾಕ್ಕಾಗಲಿ ಪ್ರೇಕ್ಷಕನ ಗ್ರೀನ್‌ಸಿಗ್ನಲ್ ಸಿಕ್ಕರೆ ಥಿಯೇಟರ್ ಅಭಾವ ಕಾಡೋದಿಲ್ಲ ಎಂಬುದಕ್ಕೆ “ಕಿರಿಕ್ ಪಾರ್ಟಿ’ ಸಾಕ್ಷಿ ಎಂಬ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಇನ್ನು, ಈ ವಾರ “ಕಿರಿಕ್ ಪಾರ್ಟಿ’ ಹಾಗೂ “ಚೌಕ’ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ ಕಾಡದಿರಲು ಮತ್ತೂಂದು ಕಾರಣ ಎಂದರೆ ಮೂರು ಸಿನಿಮಾಗಳು ಮುಂದಕ್ಕೆ ಹೋಗಿರೋದು.
“ಪಂಟ’, “ಶ್ರೀನಿವಾಸ ಕಲ್ಯಾಣ’ ಹಾಗೂ “ವರ್ಧನ’ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗುವ ಮೂಲಕ ಈ ಚಿತ್ರಗಳ ಚಿತ್ರಮಂದಿರಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಒಂದು ವೇಳೆ ಈ ಚಿತ್ರಗಳು ಬಿಡುಗಡೆಯಾಗುತಿದ್ದರೆ ಒಂದಷ್ಟು ಥಿಯೇಟರ್‌ಗಳನ್ನು “ಕಿರಿಕ್ ಪಾರ್ಟಿ’ ಹಾಗೂ “ಚೌಕ’ ಕಳೆದುಕೊಳ್ಳಬೇಕಿತ್ತು.
ಇನ್ನು, ಮುಂದಿನ ವಾರ ಈ ಚಿತ್ರಗಳ ಚಿತ್ರಮಂದಿರಗಳಲ್ಲಿ ವ್ಯತ್ಯಯವಾಗಲಿದೆ. ಅದಕ್ಕೆ ಕಾರಣ “ಹೆಬ್ಬುಲಿ’. ಸುದೀಪ್ ಅವರ “ಹೆಬ್ಬುಲಿ’ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದರಿಂದ ಒಂದಷ್ಟು ಚಿತ್ರಮಂದಿರಗಳನ್ನು ಕಳೆದುಕೊಳ್ಳಬೇಕಾಗಿ ಬರಬಹುದು.