ಬೆಂಗಳೂರು: ರಾಜ್ಯದ 28 ಸಾವಿರಕ್ಕೂ ಅಧಿಕ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ವಿಲೀನಗೊಳಿಸಲು ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ಸಾಹಿತಿಗಳು ವಿರೋಧಿಸಿರುವ ಬೆನ್ನಲ್ಲೇ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ವಿವಾದಾತ್ಮಕ ಟ್ವೀಟ್ ಮೂಲಕ ಕನ್ನಡಪರ ಹೋರಾಟಗಾರರನ್ನು ಕೆರಳಿಸಿದ್ದಾರೆ. “ಮಾಧ್ಯಮ ಯಾವಾಗಲೂ ಸಣ್ಣ ಗುಂಪನ್ನು ದೊಡ್ಡದಾಗಿ ಚಿತ್ರಿಸುತ್ತದೆ.
ಆ ಗುಂಪು ಯಾವಾಗಲೂ ಸಮಸ್ಯೆ ಸೃಷ್ಟಸುವ ಬಗ್ಗೆಯೇ ಚಿಂತಿಸುತ್ತಿರುತ್ತದೆ. ಶಿಕ್ಷಣ ಅಥವಾ ಉದ್ಯೋಗದ ಬಗ್ಗೆ ಗಮನ ಹರಿಸುವವರು ಯಾರು’ ಎಂದು ಕಿರಣ್ ಮುಜುಂದಾರ್ ಷಾ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸುದೀರ್ಘ ಪತ್ರದ ಮೂಲಕ ಪ್ರತ್ಯುತ್ತರ ನೀಡಿ, ಕನ್ನಡದ ಸೌಲಭ್ಯಗಳನ್ನು ಬಳಸಿಕೊಂಡು, ಈ ರೀತಿ ಹೇಳಿಕೆ ನೀಡಿರುವುದು ಕನ್ನಡ ವಿರೋಧಿ ನಡೆಯಾಗಿದೆ.
ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಜತೆಗೆ,ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದೀರಿ. ಶಿಕ್ಷಣವನ್ನು ವ್ಯಾಪಾರಿ ದೃಷ್ಟಿಕೋನದಲ್ಲಿ ನೋಡುವ ನಿಮಗೆ ಭಾಷೆ ಸಂಸ್ಕೃತಿಯ ವಿಚಾರ ಅರ್ಥವಾಗುವುದಿಲ್ಲ. ಸರ್ಕಾರಕ್ಕೆ ಭಾಷೆಯ ಮೂಲಭೂತ ಜವಾಬ್ದಾರಿಯನ್ನು ಅರ್ಥೈಸುವ ಕೆಲಸ ಕನ್ನಡ ಹೋರಾಟಗಾರರ ಜತೆಗೂಡಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಸಿದ್ದರಾಮಯ್ಯ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಕನ್ನಡಪರ ಹೋರಾಟಗಾರರಿಗೆ ಗ್ರಾಮೀಣ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗದ ಬಗ್ಗೆ ಯಾವುದೇ ಚಿಂತೆ ಇಲ್ಲ. ಅನಗತ್ಯ ಗೊಂದಲ ಸೃಷ್ಟಿಸುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವವರು ಎಂಬ ಮಂಜುಂದಾರ್ ಷಾ ಟ್ವೀಟ್ ಬಗ್ಗೆಯೂ ಕನ್ನಡಪರ ಹೋರಾಟಗಾರರೂ ಗರಂ ಆಗಿದ್ದು, ತೀವ್ರವಾಗಿ ಖಂಡಿಸಿದ್ದಾರೆ.
ಬಾಕ್ಸ್ ಕನ್ನಡಿಗರ ಕ್ಷಮೆ ಕೇಳಲು ಆಗ್ರಹ ಕನ್ನಡ ಪರ ಹೋರಾಟಗಾರರ ಕುರಿತು ಉದ್ಯಮಿ ಕಿರಣ್ ಮಂಜೂದಾರ್ ಷಾ ನೀಡಿರುವ ಹೇಳಿಕೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲಿಕಾ ಘಂಟಿ, ಸಾಹಿತಿಗಳಾದ ಡಾ.ಕೆ.ಷರೀಫಾ. ಡಾ.ಸರಜೂ ಕಾಟ್ಕರ್, ದಲಿತ ಕವಿ ಡಾ.ಸಿದ್ದಲಿಂಗಯ್ಯ, ಅಲ್ಲಮಪ್ರಭು ಬೆಟ್ಟದೂರು ಸೇರಿದಂತೆ ಅನೇಕ ಸಾಹಿತಿಗಳು ವಿರೋಧಿಸಿದ್ದಾರೆ. ಷಾ ಅವರದ್ದು, ಕನ್ನಡಿಗರ ವಿರೋಧಿ ನೀತಿಯಾಗಿದೆ.
ಬಯೋಕಾನ್ ಕಂಪನಿಗೆ ಸರ್ಕಾರ ಸಾಕಷ್ಟು ಸವಲತ್ತು ನೀಡಿದೆ. ಅಲ್ಲದೇ ಕಂಪನಿ ಅಭ್ಯುದ್ಯಯಕ್ಕೆ ಕನ್ನಡಿಗರು ಶ್ರಮಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಮರೆತು ವ್ಯಂಗ್ಯ ಮಾಡಿರುವುದು ಸರಿಯಲ್ಲ. ಈ ಕೂಡಲೇ ಹೇಳಿಕೆಯನ್ನು ಹಿಂತೆಗೆದುಕೊಂಡು, ಕನ್ನಡಿಗರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.