ರಬಕವಿ-ಬನಹಟ್ಟಿ: ಉಕ್ರೇನ್ ನ ಓಲೆಸ್ಕಿವಿಸ್ಕಾ ನಗರದಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿರುವು ತಾಲ್ಲೂಕಿನ ನಾವಲಗಿ ಗ್ರಾಮದ ಕಿರಣ ಸವದಿ ಸದ್ಯ ಅಲ್ಲಿಯ ಹಾಸ್ಟೆಲ್ ಕೆಳಗಡೆ ಇರುವ ಬಂಕರ್ ನಲ್ಲಿ ವಾಸವಾಗಿದ್ದಾರೆ.
ಭಾರತೀಯ ಕಾಲಮಾನದ ಪ್ರಕಾರ ಮಧ್ಯಹ್ನ 3 ಗಂಟೆಯ ಸುಮಾರಿಗೆ ತಾವು ಇರುವ ಹಾಸ್ಟೆಲ್‌ನಿಂದ ಐದಾರು ಕಿ.ಮೀ. ದೂರದಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಈ ಕುರಿತು ಬಹುದೊಡ್ಡ ಸದ್ದು ಕೇಳಿ ಬಂದಿತು. ಇಲ್ಲಿರುವ ಅಂದಾಜು ಇನ್ನೂರರಷ್ಟು ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ ಎಂದು ಪತ್ರಿಕೆಗೆ ತಿಳಿಸಿದರು.
ಮಧ್ಯಾಹ್ನ ಹಾಸ್ಟೆಲ್ ಗೆ ತೆರಳಿ ಐದು ಹತ್ತು ನಿಮಿಷಗಳಲ್ಲಿ ಊಟ ಮಾಡಿ ಮತ್ತೆ ಬಂಕರ್‌ನಲ್ಲಿ ಇರಬೇಕಾಗಿದೆ. ಆಹಾರ ಮತ್ತು ನೀರು ಕಡಿಮೆಯಾಗುತ್ತಿದೆ. ಇಲ್ಲಿ ಕೆಲವರಿಗೆ ಮಾತ್ರ ಮಲಗಲು ಅವಕಾಶವಿದ್ದು, ಕುಳಿತುಕೊಳ್ಳಲು ಮಾತ್ರ ಅವಕಾಶವಿದೆ.
ಭಾರತೀಯ ರಾಯಭಾರಿಗಳ ಜೊತೆಗೆ ಸಂಪರ್ಕದಲ್ಲಿದ್ದು, ಅವರೆ ವಾಟ್ಸಪ್ ಗ್ರೂಪ್ ಮಾಡಿದ್ದಾರೆ. ಅವುಗಳ ಮೂಲಕ ಮಾಹಿತಿಯನ್ನು ಕಳಹಿಸುತ್ತಿದ್ದಾರೆ. ಭಾರತಕ್ಕೆ ಮರಳುವ ಬಗ್ಗೆ ಯಾವುದೆ ಮಾಹಿತಿ ದೊರೆತಿಲ್ಲ. ಇಲ್ಲಿರುವ ಎಲ್ಲರೂ ಭಯದಲ್ಲಿ ಇದ್ದಾರೆ ಎಂದು ಕಿರಣ ಸವದಿ ಪತ್ರಿಕೆಗೆ ತಿಳಿಸಿದರು.
ಕಿರಣ ಸವದಿಯವರ ಜೊತೆಗೆ ತುಮಕೂರಿನ ನಂದಿನಿ, ಉದಿತ ಮತ್ತು ಯಶಸ್ವಿನಿ ಕೂಡಾ ಚಿತ್ರದಲ್ಲಿದ್ದಾರೆ.
ಇದನ್ನೂ ಓದಿ : ಉಕ್ರೇನ್ʼನಲ್ಲಿ ಸಿಲುಕಿರುವ ಕನ್ನಡಿಗರನ್ನು ಏರ್‌ಲಿಫ್ಟ್ ಮಾಡಿ : ಸರಕಾರಕ್ಕೆ HDK ಮನವಿ