“ರಾನಿ’- ಇದು ಕಿರಣ್ ರಾಜ್ ನಾಯಕರಾಗಿರುವ ಸಿನಿಮಾ. ಕಿರುತೆರೆಯಲ್ಲಿ ತಮ್ಮದೇ ಆದ ಅಭಿಮಾನಿ ವರ್ಗವನ್ನು ಹೊಂದಿರುವ ಕಿರಣ್ ರಾಜ್ ನಟಿಸುತ್ತಿರುವ ಬಿಗ್ ಬಜೆಟ್‌ನ ನಿರೀಕ್ಷಿತ ಸಿನಿಮಾವಿದು.
ಈಗಾಗಲೇ ಹಾಡು, ಟೀಸರ್ ಮೂಲಕ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ಆಗಸ್ಟ್‌ನಲ್ಲಿ ತೆರೆಕಾಣುವುದು ಬಹುತೇಕ ಪಕ್ಕಾ ಆಗಿದೆ. “ಸ್ಟಾರ್ ಕ್ರಿಯೇಷನ್’ ಬ್ಯಾನರ್ ಅಡಿಯಲ್ಲಿ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗ್ಡೆ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಗುರುತೇಜ್ ಶೆಟ್ಟಿ ಈ ಸಿನಿಮಾದ ನಿರ್ದೇಶಕರು.
“ರಾನಿ’ ಸಿನಿಮಾ ಬಗ್ಗೆ ಮಾತನಾಡುವ ನಿರ್ದೇಶಕ ಗುರುತೇಜ್ ಶೆಟ್ಟಿ, ಇದೊಂದು ಆ್ಯಕ್ಷನ್ ಫ್ಯಾಮಿಲಿ ಡ್ರಾಮಾ ಎನ್ನುತ್ತಾರೆ.
“ಚಿತ್ರದಲ್ಲಿ ಆ್ಯಕ್ಷನ್‌ಗೆ ಹೆಚ್ಚಿನ ಮಹತ್ವವಿದೆ. ಹಾಗಂತ ಇಡೀ ಸಿನಿಮಾ ಕೇವಲ ಆ್ಯಕ್ಷನ್‌ಗೆ ಸೀಮಿತವಾಗಿಲ್ಲ. ಚಿತ್ರದಲ್ಲಿ ಫ್ಯಾಮಿಲಿ ಎಮೋಶನ್ ಗೆ ಜಾಗವಿದೆ. ಕಿರಣ್ ರಾಜ್ ಅವರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ. ಮುಖ್ಯವಾಗಿ ಇದು ಬಿಗ್ ಬಜೆಟ್ ಸಿನಿಮಾ. ಇದೊಂದು ಸಿಟಿ ಬ್ಯಾಕ್ ಡ್ರಾಪ್‌ನಲ್ಲಿ ನಡೆಯುವ ಕಾಮನ್‌ಮ್ಯಾನ್ ಕಥೆ. ದೊಡ್ಡ ಸ್ಟಾರ್ ಹೀರೋ ಸಿನಿಮಾದ ಮೇಕಿಂಗ್ ಹೇಗಿರುತ್ತದೋ ಅದೇ ರೀತಿಯ ಮೇಕಿಂಗ್, ದೊಡ್ಡ ಕ್ಯಾನ್ವಾಸ್ ಇಲ್ಲಿದೆ. ಮುಖ್ಯವಾಗಿ ಇದೊಂದು ಥಿಯೇಟರ್ ಎಕ್ಸ್‌ಪಿರಿಯನ್ಸ್ ಕೊಡುವ ಸಿನಿಮಾ. ಏಕೆಂದರೆ ಇಲ್ಲಿನ ಸೌಂಡ್ ಡಿಸೈನ್, ಕಥೆ ಹೇಳಿದ ರೀತಿ, ಟ್ವಿಸ್ಟ್‌ಗಳು ಎಲ್ಲವೂ ಪ್ರೇಕ್ಷಕರಿಗೆ ಒಂದೊಳ್ಳೆಯ ಅನುಭವ ನೀಡುವುದು ಸುಳ್ಳಲ್ಲ. ಸಿನಿಮಾವನ್ನು ಪ್ರೀತಿಸುವ ನಿರ್ಮಾಪಕರು ಸಿಕ್ಕಿರುವುದರಿಂದ ಸಿನಿಮಾ ಇಷ್ಟೊಂದು ಅದ್ಧೂರಿಯಾಗಿ ಬರಲು ಸಾಧ್ಯವಾಯಿತು’ ಎನ್ನುತ್ತಾರೆ.
ಚಿತ್ರದಲ್ಲಿ ಆರು ಫೈಟ್ ಇದೆ. ನಾಲ್ಕು ಹಾಡುಗಳು ಹಾಗೂ ಎರಡು ಬಿಟ್ ಸಾಂಗ್ ಇದ್ದು, ಮಣಿಕಾಂತ್ ಕದ್ರಿ ಸಂಗೀತ ಹಾಗೂ ಸಚಿನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರಕ್ಕಾಗಿ 5 ಬಿಗ್ ಬಜೆಟ್ ಸೆಟ್‌ಗಳನ್ನು ಹಾಕಲಾಗಿದ್ದು, ಸತೀಶ್ ಅವರ ಚಿತ್ರದ ಕಲಾ ನಿರ್ದೇಶಕರು. ಚಿತ್ರದ ಚಿತ್ರೀಕರಣ ಬೆಂಗಳೂರು, ಮೈಸೂರು, ವಿಷ್ಣುವರ್ಧನ್ ಸ್ಮಾರಕದಲ್ಲಿ ನಡೆದಿದೆ.