Advertisement

ನೀರಿನ ಬಾಟಲಿ ಮಾರಿದ ವಿದ್ಯಾರ್ಥಿಯೊಬ್ಬನ ಸಿನೆಮಾ ಕಥೆ !

10:19 AM Jun 22, 2018 | |

ಮಹಾನಗರ: ಹತ್ತನೇ ತರಗತಿ ಓದುತ್ತಿರುವ ಹುಡಗನಿಗೆ ಎಳೆ ವಯಸ್ಸಿನಲ್ಲೇ ಸಿನೆಮಾ ನಿರ್ದೇಶಕನಾಗುವ ಹಂಬಲ. ಅದಕ್ಕಾಗಿ ಆತ ಬೇಸಗೆ ರಜೆಯಲ್ಲಿ ದುಡಿದು ಹಣ ಸಂಗ್ರಹಿಸಿ ತನ್ನ ಕನಸನ್ನು ದಕ್ಕಿಸಿಕೊಂಡ. ಕಿರಣ್‌ ನಾಯಕ್‌ ಮೂಲತಃ ಬಳ್ಳಾರಿ ಜಿಲ್ಲೆಯವರು. ತನ್ನ ಕುಟುಂಬದೊಂದಿಗೆ ಮಂಗಳೂರಿನ ಅಶೋಕನಗರದಲ್ಲಿ ನೆಲೆಸಿದ್ದಾರೆ. ಬೆಸೆಂಟ್‌ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾದ ಕಿರಣ್‌ಗೆ ಶಾಲೆಗೆ ಹೋಗುತ್ತಿದ್ದಾಗಿನಿಂದಲೂ ಸಿನೆಮಾ ಗೀಳು. ಆತನ ಸಿನೆಮಾ ಹುಚ್ಚು ಕಂಡು ಮನೆಯವರು, ಅಕ್ಕ-ಪಕ್ಕದವರೆಲ್ಲ ‘ಸ್ಟಾರ್‌ ಕಿರಣ್‌’ ಎನ್ನತೊಡಗಿದ್ದರು. 

Advertisement

ಹೈಸ್ಕೂಲ್‌ ಮೆಟ್ಟಿಲೇರಿದಾಗ, ಈ ವಯಸ್ಸಿನಲ್ಲಿ ಒಂದು ಉತ್ತಮ ಕಥೆ ಆಧರಿಸಿದ ಸಿನೆಮಾ ಮಾಡುವುದು ಸಾಧ್ಯವಿಲ್ಲ ಎನಿಸಿತ್ತು. ಜತೆಗೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಅಪ್ಪ-ಅಮ್ಮನ ಸಂಬಳ ಜೀವನ ನಿರ್ವಹಣೆಗಷ್ಟೇ ಆಗುತ್ತಿತ್ತು. ಆದರೂ ಛಲ ಬಿಡಲಿಲ್ಲ. ಅದರ ಪರಿಣಾಮ ‘ನಂಬರ್‌ 1 ಲವ್‌ ಸ್ಟೇಟಸ್‌ ಅಲ್ಲ ಎನ್ನುವ 12 ನಿಮಿಷದ ಕಿರುಚಿತ್ರಕ್ಕೆ ಕಥೆ-ಸಾಹಿತ್ಯ ಬರೆದು ನಿರ್ಮಿಸಿ ಶಿಕ್ಷಕರು ಹಾಗೂ ಸಹಪಾಠಿಗಳ ಗಮನಸೆಳೆದ.

ರಜೆಯಲ್ಲಿ ದುಡಿದು ಸಂಪಾದನೆ
9ನೇ ತರಗತಿಯಲ್ಲಿದ್ದಾಗ ಕಿರಣ್‌ ಕಿರುಚಿತ್ರ ನಿರ್ಮಾಣಕ್ಕೆ ಮುಂದಾದ. ಕೈಯಲ್ಲಿ ನಯಾಪೈಸೆ ಇರಲಿಲ್ಲ. ಕೊನೆಗೆ ಬೇಸಗೆ ರಜೆಯಲ್ಲಿ ತನ್ನ ಮನೆ ಬಳಿಯ ಬಾಟಲಿ ನೀರು ಮಾರಾಟದ ಡೀಲರ್‌ ರಿಂದ ಒಂದಷ್ಟು ಬಾಟಲಿ ಹೊತ್ತು ಮಲ್ಪೆ ಸೇರಿದಂತೆ ಕೆಲವು ಬೀಚ್‌, ಅಂಗಡಿಗಳಲ್ಲಿ ಮಾರ ತೊಡಗಿದ. ತಿಂಗಳಲ್ಲಿ ಕಮಿಷನ್‌ ರೂಪದಲ್ಲಿ 9 ಸಾವಿರ ರೂ. ಸಂಪಾದಿಸಿದ. ಗೆಳೆಯರ ಸಹಾಯವೂ ಸಿಕ್ಕಿ ಸುಮಾರು 15 ಸಾವಿರ ರೂ. ಗಳಲ್ಲಿ ಕಿರುಚಿತ್ರ ನಿರ್ಮಿಸಿದ. ಸಾಮಾಜಿಕ ಜಾಲ ತಾಣಗಳಲ್ಲಿನ ಸ್ಟೇಟಸ್‌ ನೋಡಿ ಹೇಗೆ ಯುವಜನರು ಪ್ರೀತಿ ಬಲೆಗೆ ಬೀಳುತ್ತಾರೆ ಎಂಬುದು ಕಥಾವಸ್ತು.

ಈ ಮೂಲಕ, ಯುವಜನರಿಗೊಂದು ಸಂದೇಶ ಸಾರಲು ಹೊರಟಿದ್ದಾರೆ ಕಿರಣ್‌. ‘ಚಿತ್ರವನ್ನು ಮೊದಲಿಗೆ ನನಗೆ ತಂದು
ತೋರಿಸಿದ. ಆತನ ತುಡಿತವನ್ನು ಮೆಚ್ಚಿ, ನಿನ್ನ ಕನಸಿಗೆ ಬೆಂಬಲವಾಗಿ ನಿಲ್ಲುವುದಾಗಿ ಹೇಳಿದೆ. ಮುಂದಿನ ಸಿನೆಮಾದಲ್ಲಿ ಫೈಟಿಂಗ್‌ ಸೀನ್‌ ಇರಲೆಂದು ಸಲಹೆ ನೀಡಿರುವೆ’ ಎನ್ನುತ್ತಾರೆ ತಂದೆ ಮಂಜು ನಾಯಕ್‌.  ಈ ಕಿರುಚಿತ್ರದ ಮೂಲಕ ವೈಷ್ಣವಿ, ರೋಯ್‌ಸನ್‌ ಡಿ’ಸೋಜಾ, ಸದಾ ನಂದ, ಜಗ್ಗ ಮತ್ತಿತರರು ಬಣ್ಣಹಚ್ಚಿದ್ದು, ಎಲ್ಲರೂ ಹೊಸ ಪ್ರತಿಭೆಗಳು. ಕಿರು ಚಿತ್ರಕ್ಕೂ ಮೆಚ್ಚುಗೆ ವ್ಯಕ್ತವಾಗಿದ್ದು, ಕಥೆ ಬರೆಯಲು, ನಿರ್ದೇಶಿಸಲು ಕಿರಣ್‌ಗೆ ಬೇಡಿಕೆ ಬಂದಿವೆಯಂತೆ. ನಟನೆ ಮಾಡಿರುವ ವೈಷ್ಣವಿಗೂ ಆಫರ್‌ಗಳು ಬಂದಿವೆಯಂತೆ. 

ಕನಸು ಈಡೇರಿದ ತೃಪ್ತಿ ಇದೆ
ಕಿರಣ್‌ ತಂದೆ ಮಂಜು ನಾಯಕ ಡ್ರೈವರ್‌. ತಾಯಿ ಕಮಲಾಬಾಯಿ ಕಾರ್ಮಿಕೆ. ತಂಗಿಯರಾದ ಕಾವೇರಿ ಮತ್ತು ರಕ್ಷಿತಾ ಕ್ರಮವಾಗಿ 8 ಮತ್ತು 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ‘ಹಣದ ಮುಗ್ಗಟ್ಟಿನ ನಡುವೆಯೂ ನನ್ನ ಕನಸು ಈಡೇರಿಸಿಕೊಂಡ ತೃಪ್ತಿ ನನ್ನದು. ಭವಿಷ್ಯದಲ್ಲಿ ‘ತಂದೆ-ತಾಯಿ-ಕನಸು’ ಎಂಬ ಒಂದೂವರೆ ಗಂಟೆಯ ಸಿನೆಮಾ ನಿರ್ದೇಶಿಸಬೇಕೆಂದಿದೆ. ಇದರ ಕಥೆಯನ್ನೂ ಬರೆಯುತ್ತಿದ್ದು, ಎರಡು ಹಾಡುಗಳನ್ನೂ ರಚಿಸಿದ್ದೇನೆ’ ಎನ್ನುತ್ತಾನೆ
 - ಕಿರಣ್‌ ನಾಯಕ್‌

Advertisement

ಅನುಷಾ ಎನ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next