ಮುಂಬಯಿ: ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರ ಜೀವನಾಧಾರಿತ ʼಬೇಡಿʼ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಆ ಮೂಲಕ ಅಧಿಕೃತವಾಗಿ ಚಿತ್ರ ಅನೌನ್ಸ್ ಆಗಿದೆ.
1972ರಲ್ಲಿ ಐಪಿಎಸ್‌ಗೆ ಸೇರಿದ ದಿನದಿಂದ ಪೊಲೀಸ್ ಇಲಾಖೆಯಲ್ಲಿ ತಂದ ಬದಲಾವಣೆ, ಭಾಗಿಯಾದ ಕಾರ್ಯಾಚರಣೆ, ರಾಜಕೀಯ ಜರ್ನಿ, ವೈಯಕ್ತಿಕ ಬದುಕಿನ ಘಟನೆಗಳು ಚಿತ್ರದಲ್ಲಿರಲಿದೆ ಎಂದು ಚಿತ್ರತಂಡ ಹೇಳಿದೆ.
ಈಗಾಗಲೇ ಕೆಲ ಕಿರುಚಿತ್ರಗಳನ್ನು ಮಾಡಿ ಪ್ರಶಸ್ತಿಗಳನ್ನು ಗೆದ್ದಿರುವ ಕುಶಾಲ್ ಚಾವ್ಲಾ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.
ʼಬೇಡಿʼ ಹೆಸರು ನಿಮಗೆ ಗೊತ್ತು, ಕಥೆ ಗೊತ್ತಿಲ್ಲ ಎನ್ನುವ ಕ್ಯಾಪ್ಷನ್ ನೀಡಲಾಗಿದೆ. ನಾಲ್ಕು ವರ್ಷಗಳ ಕಾಲ ಬೇಡಿ ಅವರ ಬದುಕಿನ ಹಾಗೂ ವೃತ್ತಿ ಬದುಕಿನ ಬಗೆಗಿನ ಹಿನ್ನೆಲೆಯನ್ನು ಅಧ್ಯಾಯ ಮಾಡಿಕೊಂಡು ಸಿನಿಮಾದ ಸ್ಕ್ರಿಪ್ಟ್ ಸಿದ್ದಪಡಿಸಿಕೊಳ್ಳಲಾಗಿದೆ ಎಂದು ಚಿತ್ರತಂಡ ಹೇಳಿದೆ.
ಈ ಚಿತ್ರವನ್ನು 50ನೇ ಅಂತರರಾಷ್ಟ್ರೀಯ ಮಹಿಳಾ ವರ್ಷದಲ್ಲಿ(2025 ರಂದು) ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.
ಚಿತ್ರವನ್ನು ಗೌರವ್ ಚಾವ್ಲಾ (ಡ್ರೀಮ್ ಸ್ಲೇಟ್ ಪಿಕ್ಚರ್ಸ್) ನಿರ್ಮಾಣ ಮಾಡಲಿದ್ದಾರೆ. ಸದ್ಯ ಪಾತ್ರ ವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.