ಕಿನ್ನಿಗೋಳಿ: ವಿಳಂಬವಾದರೂ ಮುಂಗಾರು ಆರಂಭವಾಗಿದ್ದು, ಗಾಳಿ- ಮಳೆಯ ಅಬ್ಬರ ಇನ್ನೂ ತೀವ್ರತೆ ಪಡೆಯಲಿದ್ದು ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಬದಿಯಗಳಲ್ಲಿನ ಅಪಾಯಕಾರಿ ಒಣಗಿದ ಮರಗಳು ಧರೆಗುರುಳುತ್ತಿದೆ. ಅದರಲ್ಲೂ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಪಾದಾಚಾರಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆಗಳು ಇದ್ದು ಎಚ್ಚರಿಕೆ ಅಗತ್ಯವಿದೆ.
ಮೂಲ್ಕಿ – ಕಿನ್ನಿಗೋಳಿ ರಾಜ್ಯ ಹೆದ್ದಾರಿ ಸಹಿತ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಹಲವಾರು ಒಣಗಿದ ಮರಗಳು ಇದ್ದು ಕಳೆದ ಒಂದು ವಾರದಲ್ಲಿ 5 ಕಡೆಗಳಲ್ಲಿ ಮರ ಬಿದ್ದ ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಮಳೆ, ಜೋರು ಗಾಳಿ ಉಂಟಾದರೆ ಇನ್ನಷ್ಟು ಅಪಾಯ ಉಂಟಾಗಲಿದೆ.
ಕಿನ್ನಿಗೋಳಿ ವಾರದ ಸಂತೆ ಮಾರುಕಟ್ಟೆ ಪಕ್ಕದ ಶಾಲೆಯ ಸಮೀಪ, ಚರ್ಚ್ ಮುಂದುಗಡೆ, ಕೆಂಚನಕೆರೆ ತಿರುವಿನಲ್ಲಿ ರಾಜ್ಯ ಹೆದ್ದಾರಿ ಪಕ್ಕ ಮರಗಳು ಇದ್ದು ಇನ್ನಷ್ಟು ಅಪಾಯ ತಂದೊಡ್ಡುವ ಸಾಧ್ಯತೆ ಇದೆ.
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಲ್ಲಿ ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸಿದರೆ ನಿರ್ಭೀತಿಯಿಂದ ಸಂಚರಿಸಬಹುದು ಎಂದು ನಾಗರಿಕರಾದ ಮಹಮ್ಮದ್ ಬಾಷ್ ತಿಳಿಸಿದ್ದಾರೆ.
ಸಂಬಂಧ ಪಟ್ಟ ಇಲಾಖೆಗೆ ತಿಳಿಸಲಾಗಿದೆ
ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 8 ಕಡೆಗಳಲ್ಲಿ ಅಪಾಯಕಾರಿ ಒಣಗಿದ ಮರಗಳು ಇರುವ ಬಗ್ಗೆ ಗುರುತು ಮಾಡಲಾಗಿದೆ. ಅರಣ್ಯ ಹಾಗೂ ರಾಜ್ಯ ಹೆದ್ದಾರಿ, ಮೆಸ್ಕಾಂ ಇಲಾಖೆಗೆ ಪತ್ರ ಬರೆದು ತಿಳಿಸಲಾಗಿದೆ. ಈ ಹಿಂದೆ ಪುನರೂರು ಹಾಗೂ ಇನ್ನಿತರ ಕಡೆಗಳಲ್ಲಿ ಒಣಗಿದ ಮರ ತೆರವು ಮಾಡಲಾಗಿದೆ.
– ನಾಗರಾಜ್, ಮುಖ್ಯಾಧಿಕಾರಿ ಕಿನ್ನಿಗೋಳಿ ಪಟ್ಟಣ ಪಂಚಾಯತ್