Advertisement

ಕಿಂಡಿ ಅಣೆಕಟ್ಟುಗಳು: ಜಲ ಸಂರಕ್ಷಣೆಯ ಹೊಸ ಅಧ್ಯಾಯ

04:18 PM Jan 30, 2018 | Team Udayavani |

ಸುಬ್ರಹ್ಮಣ್ಯ : ಬೇಸಗೆ ನಿಧಾನಕ್ಕೆ ಕಾವೇರುತ್ತಿರುವಂತೆ ಸುಳ್ಯ ತಾಲೂಕಿನ ಬಹುತೇಕ ಕಿಂಡಿ ಅಣೆ ಕಟ್ಟುಗಳಿಗೆ ಹಲಗೆ ಜೋಡಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಬೇಸಗೆಯ ದಿನಗಳಲ್ಲಿ ನದಿ, ತೊರೆ, ಕೆರೆ, ತೋಡುಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತದೆ. ಕುಡಿಯುವ ನೀರು ಮತ್ತು ಕೃಷಿಗೆ ಆತಂಕದ ದಿನಗಳು ಹತ್ತಿರದಲ್ಲಿವೆ. ಇದನ್ನು ಗಮನಿಸಿದ ಸರಕಾರ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಆದ್ಯತೆ ನೀಡಿದೆ.

Advertisement

ಫ‌ಲಾನುಭವಿಗಳಿಂದಲೇ ನಿರ್ವಹಣೆ
ಡಿಸೆಂಬರ್‌ ಕೊನೆಯ ಮತ್ತು ಜನವರಿ ಆರಂಭದ ದಿನಗಳಲ್ಲಿ ನೀರಿನ ಹರಿವು ಗಮನಿಸಿ ಅಣೆಕಟ್ಟುಗಳಿಗೆ ಹಲಗೆ ಹಾಕುವ ಪ್ರಕ್ರಿಯೆ ನಡೆಯುತ್ತದೆ. ಜಲಾನಯನ ಇಲಾಖೆ ಕಿಂಡಿ ಅಣೆಕಟ್ಟು ನಿರ್ಮಿಸಿದ ಬಳಿಕ ಫ‌ಲಾನುಭವಿಗಳೇ ಅದರ ನಿರ್ವಹಣೆ ಮಾಡಬೇಕಿದೆ.

ಜಲಾನಯನ ಇಲಾಖೆ, ಸಣ್ಣ ನೀರಾವರಿ ಇಲಾಖೆಯ ಸಹಭಾಗಿತ್ವ ಮೂಲಕ ನಿರ್ಮಾಣವಾಗುವ ಕಿಂಡಿ ಅಣೆಕಟ್ಟಿನಲ್ಲಿ ಐದು ವರ್ಷದ ನಂತರ ಸಣ್ಣ ಪುಟ್ಟ ದುರಸ್ತಿಗಷ್ಟೆ ಅನುದಾನ ನೀಡಲಾಗುತ್ತದೆ. ಹಲಗೆ ಹಾಕುವ ಮತ್ತು ತೆಗೆಯುವ ಕೆಲಸವನ್ನು ಕಿಂಡಿ ಅಣೆಕಟ್ಟಯ ವ್ಯಾಪ್ತಿಯ ಫ‌ಲಾನುಭವಿಗಳೇ ಮಾಡಬೇಕು. ಹಲಗೆಗೆ ಹಾನಿ ಆದರೆ ಅವರೇ ಹೊಸ ಹಲಗೆ ತರಬೇಕು.

ಪ್ರತಿ ಗ್ರಾ.ಪಂ.ಗಳು ಕಿಂಡಿ ಅಣೆಕಟ್ಟು ನಿರ್ಮಾಣಕ್ಕಾಗಿ ಅಭಿಯಾನ ನಡೆಸಬೇಕಿದೆ. ತಮ್ಮ ವ್ಯಾಪ್ತಿಯಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣವನ್ನು ಪ್ರೋತ್ಸಾಹಿಸಬೇಕಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಜಲ ಸಂರಕ್ಷಣೆಯ ಸ್ವಯಂ ಜಾಗೃತಿ ಎಲ್ಲರಲ್ಲೂ ಮೂಡದಿದ್ದರೆ ಫ‌ಲವತ್ತಾದ ಭೂಮಿ ಮುಂದೆ ಬರಡಾಗುವುದರಲ್ಲಿ ಸಂಶಯವಿಲ್ಲ.

ಸುಳ್ಯವನ್ನೇ ಗಮನಿಸಿ. ಇದು ಕೃಷಿ ಪ್ರಧಾನ ತಾಲೂಕು. ಬಹುತೇಕರು ಕೃಷಿ ಅವಲಂಬಿತರು. ಇಲ್ಲಿ ಕೃಷಿಗೆ ಬೇಕಾದ
ನೀರನ್ನು ಕೆರೆ, ಬಾವಿ ಹಾಗೂ ನದಿಗಳಿಂದ ಬಳಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಿರೀಕ್ಷೆಯಂತೆ ಮಳೆಯಾಗದೆ, ಜನವರಿ- ಫೆಬ್ರವರಿ ತಿಂಗಳಿಗೇ ಜಲ ಮೂಲಗಳು ಬತ್ತುತ್ತಿವೆ. ನೀರಿನ ಕೊರತೆ ನೀಗಿಸಲು ಭೂಮಿಯಲ್ಲಿ ಕನ್ನ ಕೊರೆತು ಅಂತರ್ಜಲವನ್ನು ಹಾಯಿಸಲಾಗುತ್ತಿದೆ. ಆದರೆ, ಅಂತರ್ಜಲ ಹೆಚ್ಚಳಕ್ಕೆ ಪೂರಕವಾದ ಕಿಂಡಿ ಅಣೆಕಟ್ಟು ಇತ್ಯಾದಿಗಳನ್ನು ಮರೆಯದಿದ್ದರೆ ಲೇಸು ಎನ್ನುತ್ತಾರೆ ಕೃಷಿ ತಜ್ಞರು.

Advertisement

ಮಳೆಕೊಯ್ಲು ಏಕಿಲ್ಲ?
ಕೃಷಿ ಸಮೃದ್ಧ ತಾಲೂಕಿನಲ್ಲಿ ಈಗ ಬೃಹತ್‌ ಗಾತ್ರದ ಕಟ್ಟಡಗಳು ತಲೆ ಎತ್ತಿವೆ. ಕಾಂಕ್ರೀಟ್‌ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಎಲ್ಲಿಯೂ ಇಲ್ಲ. ಸರಕಾರಿ ಕಚೇರಿಗಳಲ್ಲಿ ಕೂಡ ಅಳವಡಿಸುತ್ತಿಲ್ಲ. ಬಹುತೇಕ ಮಳೆ ನೀರಿ ಚರಂಡಿಯಲ್ಲಿಯೇ ಹರಿಯುವುದರಿಂದ ಅಂತರ್ಜಲ ಬೇಗನೆ ಬರಿದಾಗುತ್ತಿದೆ.

110 ಕಿಂಡಿ ಅಣೆಕಟ್ಟು
ಸುಳ್ಯ ತಾಲೂಕಿನಲ್ಲಿ ಕಿಂಡಿ ಅಣೆಕಟ್ಟುಗಳು 110ರಷ್ಟಿವೆ. ಇದು ಜಲ ಸಂರಕ್ಷಣೆ ಜತೆಗೆ ಕೃಷಿ ತೋಟಗಳಿಗೆ ನೀರೊದಗಿಸಲು ಸಹಕಾರಿಯಾಗಿದೆ. ಜಲಾನಯನ ಇಲಾಖೆ ಮೂಲಕ ಅಣೆಕಟ್ಟು ಇದ್ದು ಸಣ್ಣ ನೀರಾವರಿ ಇಲಾಖೆಯ ಮೂಲಕ ಕೂಡ ಕಿಂಡಿ ಅಣೆಕಟ್ಟುಗಳು ತಾಲೂಕಿನ ಹಲವೆಡೆ ನಿರ್ಮಾಣಗೊಂಡಿವೆ. ಹಳೆಯ ಅಣೆಕಟ್ಟಿನಲ್ಲಿ ಹಲಗೆಗಳ ನಡುವೆ ಅಂತರ ಇರುವುದರಿಂದ ಸೋರಿಕೆಯಾಗುತ್ತಿದ್ದು, ಪೂರ್ಣಪ್ರಮಾಣದಲ್ಲಿ ನೀರಿನ ಸಂಗ್ರಹ ಸಾಧ್ಯವಾಗುತ್ತಿಲ್ಲ. ಉಳಿದಂತೆ ಸುಳ್ಯ ತಾಲೂಕಿನಲ್ಲಿ ಬಹುತೇಕ ಕಿಂಡಿ ಅಣೆಕಟ್ಟುಗಳು ಸುಸ್ಥಿತಿಯಲ್ಲಿವೆ.

ಹಲಗೆ ಜೋಡಣೆ ಪೂರ್ಣ
ತಾಲೂಕಿನಲ್ಲಿ ಇರುವ ಕಿಂಡಿ ಅಣೆಕಟ್ಟುಗಳಿಗೆ ಪೈಕಿ ಬಹುತೇಕ ಅಣೆಕಟ್ಟುಗಳಿಗೆ ಹಲಗೆ ಜೋಡಿಸುವ ಕಾರ್ಯ ಮುಕ್ತಾಯವಾಗಿದೆ. ನೀರು ಸಂರಕ್ಷಣೆಗೊಂಡು ಬಳಕೆಗೆ ಸಿಗುತ್ತಿದೆ.
ಮೋಹನ್‌ ನಂಗಾರು,
  ಕೃಷಿ ಅಧಿಕಾರಿ, ಸುಳ್ಯ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next