ಹೊಸದಿಲ್ಲಿ: ಈ ಬಾರಿಯ IPL ಪಂದ್ಯಾವಳಿಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ ಬಹಳ ಕಟ್ಟುನಿಟ್ಟಿನಿಂದ ನಡೆಸಬೇಕಿದೆ.
ಹಾಗಾಗಿ ದಿನವೂ ಆಟಗಾರರಿಗೆ ಕೋವಿಡ್ 19 ಟೆಸ್ಟ್ ನಡೆಸುವಂತೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲಕ ನೆಸ್ ವಾಡಿಯಾ ಸಲಹೆ ಮಾಡಿದ್ದಾರೆ.
ಬೃಜೇಶ್ ಪಟೇಲ್ ಐಪಿಎಲ್ ದಿನಾಂಕವನ್ನು ಪ್ರಕಟಿಸಿದ ಬಳಿಕ ವಾಡಿಯಾ ಈ ಹೇಳಿಕೆ ನೀಡಿದ್ದಾರೆ.
‘IPL ಪಂದ್ಯಾವಳಿಯ ವೇಳೆ ಅಂಗಳ ಮತ್ತು ಅಂಗಳದಾಚೆ ಆರೋಗ್ಯ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕಾದುದು ಅತ್ಯಗತ್ಯ. ಇದರಿಂದ ಪಂದ್ಯಾವಳಿ ಸುರಕ್ಷಿತ ಹಾಗೂ ಅತ್ಯಂತ ಯಶಸ್ವಿ ಆಗುವುದರಲ್ಲಿ ಅನುಮಾನವಿಲ್ಲ. ಸಂಘಟಕರು ಯಾವ ವಿಷಯದಲ್ಲೂ ರಾಜಿ ಆಗಬಾರದು’ ಎಂದು ನೆಸ್ ವಾಡಿಯಾ ಹೇಳಿದರು.
‘ವೈಯಕ್ತಿಕವಾಗಿ ಹೇಳಬೇಕೆಂದರೆ, ಕ್ರಿಕೆಟಿಗರಿಗೆ ದಿನಂಪ್ರತಿ ಕೋವಿಡ್ 19 ಟೆಸ್ಟ್ ನಡೆಸುವುದು ಒಳ್ಳೆಯದು. ನಾನು ಕ್ರಿಕೆಟಿಗನಾಗಿದ್ದರೆ ಇದಕ್ಕೆ ಖುಷಿಯಿಂದ ಒಪ್ಪುತ್ತಿದ್ದೆ. ಇದರಿಂದ ಹಾನಿಯೇನೂ ಇಲ್ಲ…’ ಎಂದರು.
‘ಇಂಗ್ಲೆಂಡಿನಂತೆ ಯುಎಇಯಲ್ಲಿ ಜೈವಿಕ ಸುರಕ್ಷಾ ತಾಣಗಳಿರುತ್ತವೋ ಇಲ್ಲವೋ ಎಂಬುದು ಇನ್ನೂ ತಿಳಿದು ಬಂದಿಲ್ಲ. ಇಂಥ ಸಂದರ್ಭದಲ್ಲಿ ದಿನವೂ ಕೋವಿಡ್ 19 ಟೆಸ್ಟ್ ನಡೆಸುವುದು ಕ್ಷೇಮ.
ಬಿಸಿಸಿಐ ಪ್ರಮಾಣಿಕೃತ ಕಾರ್ಯಾಚರಣೆ ವ್ಯವಸ್ಥೆಯಲ್ಲಿ (SOS) ಯಾವೆಲ್ಲ ನಿಯಮಗಳಿವೆ ಎಂಬುದನ್ನು ಕಾದು ನೋಡಬೇಕಿದೆ’ ಎಂದು ನೆಸ್ ವಾಡಿಯಾ ಅವರು ಇದೇ ಸಂದರ್ಭದಲ್ಲಿ ಹೇಳಿದರು.