ಬೆಂಗಳೂರು: “ನನ್ನ ಕ್ರಿಕೆಟ್ ಬದುಕಿನಲ್ಲೇ ಇದು ಸ್ಮರಣೀಯ ದಿನ. ಕನಸೊಂದು ನನಸಾದ ಸುದಿನ. ಈ 3 ಬಿಗ್ ವಿಕೆಟ್‌ಗಳನ್ನು ಒಟ್ಟಿಗೇ ಬುಟ್ಟಿಗೆ ಹಾಕಿಕೊಳ್ಳಬೇಕೆಂಬ ಕನಸು ಕಾಣುತ್ತಿದ್ದೆ. ಇದು ಸಾಕಾರಗೊಂಡಿದೆ…’ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪ್ರಧಾನ ಬೌಲರ್ ಸಂದೀಪ್ ಶರ್ಮ ಹೇಳಿದ್ದಾರೆ.
ಶುಕ್ರವಾರ ರಾತ್ರಿ ಆರ್‌ಸಿಬಿಯನ್ನು ಮಣಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸಿದ ಅವರು ಮಾಧ್ಯಮದವರೊಂದಿಗೆ ಖುಷಿಯನ್ನು ಹಂಚಿಕೊಂಡರು.
“ಈ ಪಂದ್ಯಕ್ಕೂ ಮೊದಲೇ ನಾನು ಕೋಚ್‌ಗಳ ಜತೆ ಹಾಗೂ ಮೆಂಟರ್ ವೀರೂ ಪಾಜಿ (ಸೆಹವಾಗ್) ಜತೆ ಚರ್ಚಿಸಿದ್ದೆ. ಚೆಂಡನ್ನು ಎರಡೂ ಕಡೆಯಿಂದ ಸ್ವಿಂಗ್ ಮಾಡು, ಅದೇ ನಿನ್ನ ಬಲ, ಈ ಪಿಚ್‌ನಲ್ಲಿ ಈ ಪ್ರಯೋಗ ಯಶಸ್ವಿಯಾಗಲಿದೆ ಎಂದು ವೀರೂ ಪಾಜಿ ಸಲಹೆಯಿತ್ತರು. ಆದರೆ ಇದು ಟಿಪಿಕಲ್ ಬೆಂಗಳೂರು ಪಿಚ್ ಆಗಿರಲಿಲ್ಲ. ಆದರೂ ಚೆಂಡನ್ನು ಸ್ವಿಂಗ್ ಮಾಡುವಲ್ಲಿ ಯಶಸ್ವಿಯಾದೆ. ಇದು ಬ್ಯಾಟ್ಸ್‌ಮನ್‌ಗಳಿಗೆ ಸಂಕಟ ತಂದೊಡ್ಡಿತು’ ಎಂದು 22 ರನ್ನಿಗೆ 3 ವಿಕೆಟ್ ಉಡಾಯಿಸಿದ ಸಂದೀಪ್ ಶರ್ಮ ಹೇಳಿದರು.
ಸಂದೀಪ್ ಉಡಾಯಿಸಿದ ಮೂರೂ ವಿಕೆಟ್‌ಗಳು ಬಹಳ ಬೆಲೆ ಬಾಳುವಂಥದ್ದಾಗಿದ್ದವು. ವಿಶ್ವ ಕ್ರಿಕೆಟಿನ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್ ಗೇಲ್, ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ ಅವರನ್ನು ಸಂದೀಪ್ ಸತತ 3 ಓವರ್‌ಗಳಲ್ಲಿ ಪೆವಿಲಿಯನ್ನಿಗೆ ಓಡಿಸಿದ್ದರು. ಇದರೊಂದಿಗೆ ಒಂದೇ ಪಂದ್ಯದಲ್ಲಿ ಈ ಮೂವರನ್ನು ಔಟ್ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆ ಈ ಪಂಜಾಬ್ ಬೌಲರ್‌ನದ್ದಾಯಿತು.