Advertisement

ಅಜೇಯ ಸನ್‌ರೈಸರ್ ಹೈದರಾಬಾದ್‌ಗೆ ಕಿಂಗ್ಸ್‌  ಪಂಜಾಬ್‌ ಸವಾಲು

06:00 AM Apr 19, 2018 | Team Udayavani |

ಮೊಹಾಲಿ: ಬೌಲರ್‌ಗಳ ಉತ್ಕೃಷ್ಟ ನಿರ್ವಹಣೆಯಿಂದಾಗಿ ಕೇನ್‌ ವಿಲಿಯಮ್ಸನ್‌ ನೇತೃತ್ವದ ಸನ್‌ರೈಸರ್ ಹೈದರಾಬಾದ್‌ ತಂಡವು ಈ ಐಪಿಎಲ್‌ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಹೈದರಾಬಾದ್‌ ತಂಡವು ಗುರುವಾರದ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಎದುರಿಸಲಿದ್ದು ಗೆಲುವಿನ ಓಟ ಮುಂದುವರಿಸಲು ಬಯಸಿದೆ. 

Advertisement

ಆರ್‌. ಅಶ್ವಿ‌ನ್‌ ನಾಯಕತ್ವದ ಹೊಸತನದಿಂದ ಕೂಡಿದ ಪಂಜಾಬ್‌ ತಂಡ ಬ್ಯಾಟಿಂಗ್‌ನಲ್ಲಿ ಆಕ್ರಮಣಕಾರಿ ಆಡುತ್ತಿದ್ದು ಗೆಲುವಿಗಾಗಿ ಹೋರಾಡುತ್ತಿದೆ. ತವರಿನ ತಂಡವಾಗಿರುವ ಪಂಜಾಬ್‌ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದ ಸಾಧನೆ ಮಾಡಿದೆ. ಇದೇ ಮೈದಾನದಲ್ಲಿ ನಡೆದ ಈ ಹಿಂದಿನ ಪಂದ್ಯದಲ್ಲಿ ಪಂಜಾಬ್‌ ತಂಡವು ಚೆನ್ನೈ ತಂಡವನ್ನು ರೋಚಕವಾಗಿ ಕೆಡಹಿತ್ತು.

ಹೈದರಾಬಾದ್‌ ತಂಡದಲ್ಲಿ ಹೇಳಿಕೊಳ್ಳುವ ಶ್ರೇಷ್ಠ ಬೌಲರ್‌ಗಳಿಲ್ಲ. ಆದರೂ ಭುವನೇಶ್ವರ್‌ ಕುಮಾರ್‌, ರಶೀದ್‌ ಖಾನ್‌, ಬಿಲ್ಲಿ ಸ್ಟಾನಿಲೇಕ್‌, ಸಿದ್ಧಾರ್ಥ್ ಕೌಲ್‌, ಶಕಿಬ್‌ ಅಲ್‌ ಹಸನ್‌ ಮತ್ತು ಸಂದೀಪ್‌ ಶರ್ಮ ಈ ಹಿಂದಿನ ಪಂದ್ಯಗಳಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್‌ ನಡೆಸಿ ವಿಕೆಟ್‌ ಉರುಳಿಸಿದ್ದಾರಲ್ಲದೇ ಎದುರಾಳಿ ತಂಡಗಳ ಆಟಗಾರರ ರನ್‌ವೇಗಕ್ಕೆ ಕಡಿವಾಣ ಹಾಕಲು ಯಶಸ್ವಿಯಾಗಿದ್ದಾರೆ. 

ಅನುಭವಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಹೈದರಾಬಾದ್‌ ಯಾವುದೇ ಸವಾಲನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಹೊಂದಿದೆ. ವೃದ್ದಿಮಾನ್‌ ಸಾಹಾ, ಕೇನ್‌ ವಿಲಿಯಮ್ಸನ್‌, ಶಿಖರ್‌ ಧವನ್‌ ಮತ್ತು ಮನೀಷ್‌ ಪಾಂಡೆ ಆರಂಭದಲ್ಲಿ ಸಿಡಿದರೆ ಶಕಿಬ್‌, ದೀಪಕ್‌ ಹೂಡ ಮತ್ತು ಯೂಸುಫ್ ಪಠಾಣ್‌ ಅವರಿಂದಲೂ ಉತ್ತಮ ಬ್ಯಾಟಿಂಗ್‌ ನಿರೀಕ್ಷಿಸಬಹುದು. ಆದರೆ ಹೈದರಾಬಾದ್‌ನ ನಿಜವಾದ ಬ್ಯಾಟಿಂಗ್‌ ವೈಭವ ಇನ್ನಷ್ಟೇ ಬರಬೇಕಾಗಿದೆ. 

ಮುಂಬೈ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್‌ ಗೆಲುವಿನ 148 ರನ್‌ ಗಳಿಸುವ ಗುರಿ ಪಡೆದಿದ್ದರೂ ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ಒಂದು ವಿಕೆಟ್‌ ಅಂತರದ ಜಯ ಸಾಧಿಸಿತ್ತು. ಈ ಋತುವಿನ ಆರಂಭಿಕ ಪಂದ್ಯದಲ್ಲಿ ಹೈದರಾಬಾದ್‌ ಬೌಲರ್‌ಗಳು ರಾಜಸ್ಥಾನದ ಮೊತ್ತವನ್ನು 125ಕ್ಕೆ ನಿಯಂತ್ರಿಸಲು ಯಶಸ್ವಿಯಾಗಿದ್ದರು. ಆಬಳಿಕ ಶಿಖರ್‌ ಧವನ್‌ (78) ಮತ್ತು ವಿಲಿಯಮ್ಸನ್‌ (36) ಅವರ ಅಜೇಯ ಆಟದಿಂದಾಗಿ ಹೈದರಾಬಾದ್‌ ಕೇವಲ ಒಂದು ವಿಕೆಟ್‌ ನಷ್ಟದಲ್ಲಿ ಜಯಭೇರಿ ಬಾರಿಸಿತ್ತು. ಕೆಕೆಆರ್‌ ವಿರುದ್ಧದ ಪಂದ್ಯದಲ್ಲೂ ಹೈದರಾಬಾದ್‌ ಬೌಲರ್‌ಗಳು ಮಿಂಚಿದ್ದರು. ಇಲ್ಲಿ ಕೆಕೆಆರ್‌ ಮೊತ್ತವನ್ನು 138ಕ್ಕೆ ನಿಯಂತ್ರಿಸಿತ್ತು. 

Advertisement

ಪಂಜಾಬ್‌ಗೆ ಕ್ರಿಸ್‌ ಗೇಲ್‌ ಬಲ
ತವರಿನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ತಂಡವನ್ನು ನಾಲ್ಕು ರನ್ನಿನಿಂದ ಸೋಲಿಸಿದ್ದರಿಂದ ಪಂಚಾಬ್‌ ಕೂಡ ಗೆಲುವಿನ ಹುಮ್ಮಸ್ಸಿನಲ್ಲಿದೆ. ಕ್ರಿಸ್‌ ಗೇಲ್‌ ಅವರ ಉಪಸ್ಥಿತಿಯಿಂದ ಪಂಜಾಬ್‌ಗ ಆನೆ ಬಲ ಬಂದಂತಾಗಿದೆ. ಚೆನ್ನೈ ವಿರುದ್ಧ ಅವರು 33 ಎಸೆತಗಳಿಂದ 63 ರನ್‌ ಸಿಡಿಸಿದ್ದರಿಂದ ಪಂಜಾಬ್‌ 197 ರನ್‌ ಗಳಿಸಿತ್ತು. ಆರಂಭಿಕರಾಗಿ ಕೆಎಲ್‌ ರಾಹುಲ್‌ ಕೂಡ ಸಿಡಿಯುತ್ತಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ ರಾಹುಲ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಮಯಾಂಕ್‌ ಅಗರ್ವಾಲ್‌, ಕರುಣ್‌ ನಾಯರ್‌ ಮತ್ತು ಅಶ್ವಿ‌ನ್‌ ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ. ಯುವರಾಜ್‌ ಅವರ ಬ್ಯಾಟಿಂಗ್‌ ವೈಫ‌ಲ್ಯ ಚಿಂತೆಯಾಗಿದೆ. 

ಡೆಲ್ಲಿ ತಂಡವನ್ನು ಸೋಲಿಸುವ ಮೂಲಕ ಪಂಜಾಬ್‌ ಗೆಲುವಿನ ಅಭಿಯಾನ ಆರಂಭಿಸಿತ್ತು. ಆದರೆ ಬೆಂಗಳೂರು ವಿರುದ್ಧ ಸೋತು ನಿರಾಶೆ  ಅನುಭವಿಸಿತು. ಪಂಜಾಬ್‌ನ 17ರ ಹರೆಯದ ಸ್ಪಿನ್ನರ್‌ ಮುಜೀಬ್‌ ಉರ್‌ ರೆಹಮಾನ್‌ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ವಿರಾಟ್‌ ಕೊಹ್ಲಿ ವಿಕೆಟನ್ನು ಪಡೆದು ಸಂಭ್ರಮಿಸಿದ್ದಾರೆ. ಪಂಜಾಬ್‌ನ ಬೌಲಿಂಗ್‌ ಕೂಡ ಬಲಿಷ್ಠವಾಗಿದೆ. ಅಶ್ವಿ‌ನ್‌ ಅವರಲ್ಲದೇ ಮೋಹಿತ್‌ ಶರ್ಮ, ಮುಜೀಬ್‌, ಅಕ್ಷರ್‌ ಪಟೇಲ್‌ ಮತ್ತು ಆ್ಯಂಡ್ರೊ ಟೈ ತಂಡದಲ್ಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next