Advertisement

ಪಂಜಾಬ್‌: ಹೆಸರು ಬದಲಾಯಿತು, ಅದೃಷ್ಟ..?

10:37 PM Apr 05, 2021 | Team Udayavani |

ಈ ವರೆಗೆ ಐಪಿಎಲ್‌ ಚಾಂಪಿಯನ್‌ ಆಗದ ಅತ್ಯಂತ ದುರದೃಷ್ಟ ತಂಡಗಳಲ್ಲಿ ಪಂಜಾಬ್‌ ಕೂಡ ಒಂದು. 2014ರಲ್ಲೊಮ್ಮೆ ಫೈನಲ್‌ ತಲುಪಿ ಇನ್ನೇನು ಗೆಲ್ಲಬೇಕೆಂಬ ಹೊತ್ತಿನಲ್ಲಿ ಕೆಕೆಆರ್‌ ಕೈ ಮೇಲಾಯಿತು. ಅದು ಜಾರ್ಜ್‌ ಬೈಲಿ ಪಡೆಗೆ ಬೇಲಿ ಹಾಕಿತು!
ಇದೀಗ ಪಂಜಾಬ್‌ ತಂಡದ ಹೆಸರು ಬದಲಾಗಿದೆ. ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಇದ್ದದ್ದು “ಪಂಜಾಬ್‌ ಕಿಂಗ್ಸ್‌’ ಎಂದಾಗಿದೆ. ಹಾಗಾದರೆ ಅದೃಷ್ಟ ಬದಲಾದೀತೇ? ಇದು ಈ ಐಪಿಎಲ್‌ನ ಕುತೂಹಲಗಳಲ್ಲೊಂದು.

Advertisement

ಕನ್ನಡಿಗರ ತಂಡವಲ್ಲ
ಪಂಜಾಬ್‌ “ಕನ್ನಡಿಗರ ತಂಡ’ ಎಂದೇ ಗುರುತಿಸಲ್ಪಟ್ಟಿತ್ತು. ನಾಯಕ ಕೆ.ಎಲ್‌. ರಾಹುಲ್‌, ಕೋಚ್‌ ಅನಿಲ್‌ ಕುಂಬ್ಳೆ ಸೇರಿದಂತೆ ಕನ್ನಡಿಗರೇ ಇಲ್ಲಿ ಬಹುಸಂಖ್ಯಾಕರಾಗಿದ್ದರು. ಆದರೆ ಈ ಬಾರಿ ಕರುಣ್‌ ನಾಯರ್‌, ಕೆ. ಗೌತಮ್‌, ಜೆ. ಸುಚಿತ್‌ ಬೇರ್ಪಟ್ಟಿದ್ದಾರೆ. ಕಳೆದ ಸಲ ಘೋರ ವೈಫ‌ಲ್ಯ ಕಂಡಿದ್ದ ಮ್ಯಾಕ್ಸ್‌ವೆಲ್‌ ಕೂಡ ಇಲ್ಲ. ಆದರೆ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ಯಾವುದೇ ಧಕ್ಕೆ ಉಂಟಾಗಿಲ್ಲ. ಸಮರ್ಥ ಬದಲಿ ಆಟಗಾರರನ್ನು ಸೆಳೆಯುವಲ್ಲಿ ಪಂಜಾಬ್‌ ಯಶಸ್ವಿಯಾಗಿದೆ.

ಕಳೆದ ವರ್ಷದ “ಆರೇಂಜ್‌ ಕ್ಯಾಪ್‌’ ವಿಜೇತ ರಾಹುಲ್‌, ಗೇಲ್‌, ಅಗರ್ವಾಲ್‌, ಪೂರಣ್‌ ಜತೆಗೆ ಈ ಬಾರಿ ಹೆಚ್ಚುವರಿಯಾಗಿ ಟಿ20ಯ ನಂ.1 ಬ್ಯಾಟ್ಸ್‌ಮನ್‌ ಡೇವಿಡ್‌ ಮಲಾನ್‌, ಆಲ್‌ರೌಂಡರ್‌ಗಳಾದ ಫ್ಯಾಬಿಯನ್‌ ಅಲನ್‌, ಮೊಸೆಸ್‌ ಹೆನ್ರಿಕ್ಸ್‌, ತಮಿಳುನಾಡು ಬ್ಯಾಟ್ಸ್‌ಮನ್‌ ಶಾರೂಖ್‌ ಖಾನ್‌ ಇದ್ದಾರೆ. ಹೀಗಾಗಿ ಪಂಜಾಬ್‌ ಬ್ಯಾಟಿಂಗ್‌ ಲೈನ್‌ಅಪ್‌ ಹಿಂದಿಗಿಂತ ಹೆಚ್ಚು ಬಲಿಷ್ಠ ಎಂಬುದರಲ್ಲಿ ಅನುಮಾನವಿಲ್ಲ.

ಫಾಸ್ಟ್‌ ಬೌಲಿಂಗ್‌ ಪರ್ವಾಗಿಲ್ಲ
ಇಷ್ಟು ಕಾಲ ಪಂಜಾಬ್‌ನ ಬೌಲಿಂಗ್‌ ಹೆಚ್ಚು ದುರ್ಬಲ ಎಂಬ ಅಪವಾದ ಹೊತ್ತಿತ್ತು. ಮೊಹಮ್ಮದ್‌ ಶಮಿಗೆ ಸೂಕ್ತ ಬೆಂಬಲಿಗರಿಲ್ಲ, ಪರಿಣಾಮಕಾರಿ ಸ್ಪಿನ್ನರ್‌ಗಳಿಲ್ಲ ಎಂಬ ದೂರುಗಳಿದ್ದವು. ಈ ಬಾರಿ ವೇಗದ ಬೌಲಿಂಗ್‌ಗೆ ಹೆಚ್ಚಿನ ಬಲ ಬಂದಿದೆ. ಇದಕ್ಕೆ ಕಾರಣ ಆಸೀಸ್‌ ಸ್ಪೀಡ್‌ಸ್ಟರ್‌ಗಳಾದ ಜೇ ರಿಚರ್ಡ್‌ಸನ್‌, ರಿಲೀ ಮೆರಿಡಿತ್‌ ಸೇರ್ಪಡೆ. ಜತೆಗೆ ಇಂಗ್ಲೆಂಡಿನ ಕ್ರಿಸ್‌ ಜೋರ್ಡನ್‌ ಇದ್ದಾರೆ. ಆದರೆ ಎಲ್ಲರೂ ವಿದೇಶಿ ವೇಗಿಗಳೇ ಆಗಿರುವುದೊಂದು ಸಮಸ್ಯೆ!

ಸ್ಪಿನ್‌ ವಿಭಾಗಕ್ಕೆ ಹೆಚ್ಚುವರಿ ಸೇರ್ಪಡೆಯೆಂದರೆ ಆಲ್‌ರೌಂಡರ್‌ ಫ್ಯಾಬಿಯನ್‌ ಅಲನ್‌. ಉಳಿದಂತೆ ಮುರುಗನ್‌ ಅಶ್ವಿ‌ನ್‌, ರವಿ ಬಿಶ್ನೋಯ್‌ ಎಷ್ಟರ ಮಟ್ಟಿಗೆ ಯಶಸ್ಸು ಕಂಡಾರು ಎಂಬುದೊಂದು ಪ್ರಶ್ನೆ. ಒಟ್ಟಾರೆ ಹೇಳುವುದಾದರೆ, ಪಂಜಾಬ್‌ಗ ಚೊಚ್ಚಲ ಐಪಿಎಲ್‌ ಟ್ರೋಫಿ ಎತ್ತಲು ಈ ಬಾರಿ ಹೆಚ್ಚು ಅವಕಾಶವಿದೆ.

Advertisement

ತಂಡ: ಕೆ.ಎಲ್‌. ರಾಹುಲ್‌ (ನಾಯಕ), ಮಾಯಾಂಕ್‌ ಅಗರ್ವಾಲ್‌, ಕ್ರಿಸ್‌ ಗೇಲ್‌, ಮನ್‌ದೀಪ್‌ ಸಿಂಗ್‌, ಪ್ರಭ್‌ಸಿಮ್ರಾನ್‌ ಸಿಂಗ್‌, ನಿಕೋಲಸ್‌ ಪೂರಣ್‌, ಸಫ‌ìರಾಜ್‌ ಖಾನ್‌, ದೀಪಕ್‌ ಹೂಡಾ, ಮುರುಗನ್‌ ಅಶ್ವಿ‌ನ್‌, ರವಿ ಬಿಶ್ನೋಯ್‌, ಹರ್‌ಪ್ರೀತ್‌ ಬ್ರಾರ್‌, ಮೊಹಮ್ಮದ ಶಮಿ, ಆರ್ಷದೀಪ್‌ ಸಿಂಗ್‌, ಇಶಾನ್‌ ಪೊರೆಲ್‌, ದರ್ಶನ್‌ ನಲ್ಕಂಡೆ, ಕ್ರಿಸ್‌ ಜೋರ್ಡನ್‌, ಡೇವಿಡ್‌ ಮಲಾನ್‌, ಜೇ ರಿಚರ್ಡ್‌ಸನ್‌, ಶಾರೂಖ್‌ ಖಾನ್‌, ರಿಲೀ ಮೆರಿಡಿತ್‌, ಮೊಸಸ್‌ ಹೆನ್ರಿಕ್ಸ್‌, ಜಲಜ್‌ ಸಕ್ಸೇನಾ, ಉತ್ಕರ್ಷ್‌ ಸಿಂಗ್‌, ಫ್ಯಾಬಿಯನ್‌ ಅಲನ್‌, ಸೌರಭ್‌ ಕುಮಾರ್‌.

ರನ್ನರ್ ಅಪ್‌: 01
2014: ಕೆಕೆಆರ್‌ ವಿರುದ್ಧ 3 ವಿಕೆಟ್‌ ಸೋಲು

Advertisement

Udayavani is now on Telegram. Click here to join our channel and stay updated with the latest news.

Next