Advertisement

“ಕಿಂಗ್‌ ಮೇಕರ್‌’ಕನಸಿಗೆ ಹಿನ್ನಡೆ!

10:23 AM Dec 08, 2019 | mahesh |

ಬೆಂಗಳೂರು: ಮತದಾನೋತ್ತರ ಸಮೀಕ್ಷೆಯಂತೆ ಬಿಜೆಪಿಗೆ ಸುಭದ್ರ ಸರ್ಕಾರದ ಭರವಸೆ ಮೂಡಿಸಿದ್ದು, ಜೆಡಿಎಸ್‌ ನಿರೀಕ್ಷಿತ ಸ್ಥಾನ ಗೆಲ್ಲದಿದ್ದರೆ ಮುಂದಿನ ದಿನಗಳಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸವಾಲು ಎದುರಾಗಬಹುದು. ಜೆಡಿಎಸ್‌ನಲ್ಲಿದ್ದರೆ ಮುಂದಿನ ಮೂರೂವರೆ ವರ್ಷಗಳು ವೈಯಕ್ತಿಕವಾಗಿ ಯಾವುದೇ ರಾಜಕೀಯ ಬೆಳವಣಿಗೆ ಸಾಧ್ಯವಿಲ್ಲ. ಪಕ್ಷ ಕುಟುಂಬಕ್ಕೆ ಸೀಮಿತವಾಗಿದೆ. ಇನ್ನು ಅತ್ತ ಕಾಂಗ್ರೆಸ್‌, ಬಣಗಳಿಂದ ಒಡೆದ ಮನೆಯಾಗಿದೆ. ಯಾರೊಂದಿಗೆ ಗುರುತಿಸಿಕೊಂಡರೂ ಉಳಿದವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಆದರೆ, ಬಿಜೆಪಿಯಲ್ಲಿ ಪರಿಸ್ಥಿತಿ ಹಾಗಿಲ್ಲ. ಪ್ರಸ್ತುತ ಹೊರಗಿನಿಂದ ಬಂದವರಿಗೇ ಹೆಚ್ಚು ಮಣೆ ಹಾಕಲಾಗುತ್ತಿದೆ. ಜತೆಗೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಗುರುತಿಸಿಕೊಂಡಲ್ಲಿ ಯಾವುದೇ ಹುದ್ದೆ ಸಿಗದಿದ್ದರೂ ಕೊನೇಪಕ್ಷ ಮುಂದಿನ ದಿನಗಳಲ್ಲಿ ವೀರಶೈವ-ಲಿಂಗಾಯತ ಮತಗಳನ್ನಾದರೂ ಸೆಳೆಯಬಹುದು ಎಂಬುದು ಬಿಜೆಪಿ ಸಂಪರ್ಕದಲ್ಲಿರುವವರ ಲೆಕ್ಕಾಚಾರ ಎಂದು ಹೇಳಲಾಗಿದೆ.

Advertisement

ಉಪ ಚುನಾವಣೆ ನಂತರವೂ ರಾಜ್ಯದಲ್ಲಿ ರಾಜಕೀಯ ಅತಂತ್ರ ಸ್ಥಿತಿ ಉಂಟಾಗಲಿದೆ. ಆಗ
ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮೈತ್ರಿ ಅನಿವಾರ್ಯ ಆಗಲಿದ್ದು, ತಾವು ಮತ್ತೆ ನಿರ್ಣಾಯಕ ಪಾತ್ರ
ವಹಿಸಲಿದೇವೆ. ಆ ಮೂಲಕ ಮತ್ತೆ ಪಕ್ಷದ ಅಸ್ತಿತ್ವ ಗಟ್ಟಿಗೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿ ಜೆಡಿಎಸ್‌ ಇತ್ತು. ಆದರೆ, ಮತಗಟ್ಟೆ ಸಮೀಕ್ಷೆ ಆ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಆಸೆಗೆ ತಣ್ಣೀರೆರಚಿದಂತಾಗಿದೆ.
ಈ ಮೊದಲೇ ಕೆಲ ಶಾಸಕರು ಜೆಡಿಎಸ್‌ ತೊರೆಯಲು ತುದಿಗಾಲಲ್ಲಿ ನಿಂತಿದ್ದರು. ಆದರೆ, ಬಿಜೆಪಿ ಸರ್ಕಾರ
ಬೀಳಲು ಬಿಡುವುದಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಆ “ಆಪರೇಷನ್‌’ಗೆ ತಾತ್ಕಾಲಿಕ ಬ್ರೇಕ್‌ ಹಾಕಿತ್ತು. ಅಲ್ಲದೆ, ಅವರೆಲ್ಲ ಇದೀಗ ಉಪಚುನಾವಣೆ ಫ‌ಲಿತಾಂಶದತ್ತ ಚಿತ್ತ ಹರಿಸಿದ್ದಾರೆ. ಉಪ ಸಮರದಲ್ಲಿ ಜೆಡಿಎಸ್‌ನಿಂದ ಹೊರ ಬಂದು ಬಿಜೆಪಿಯಿಂದ ಸ್ಪರ್ಧಿಸಿದ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಜೆಡಿಎಸ್‌ “ತೆನೆ’ಯಿಂದ ಇನ್ನಷ್ಟು ಶಾಸಕರು ಪಕ್ಷ ಬಿಡಲು ಯೋಚಿಸಬಹುದು. ಆದರೆ, ಅದಕ್ಕೆ ಬಿಜೆಪಿಯ ಸ್ಪಂದನೆ ಹೇಗಿರಲಿದೆ. ಅಗತ್ಯ ಬಹುಮತ ಸಿಕ್ಕರೆ ಮತ್ತೆ “ಆಪರೇಷನ್‌ ಕಮಲ’ಕ್ಕೆ ಕೈ ಹಾಕುತ್ತಾ ಎಂಬುದರ ಮೇಲೆ ಅವರ ಮುಂದಿನ ನಡೆ ತೀರ್ಮಾನವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಉಪ ಚುನಾವಣೆಯಲ್ಲಿ ಜೆಡಿಎಸ್‌ ಬಿಟ್ಟು ಬಿಜೆಪಿಯಿಂದ ಸ್ಪರ್ಧಿಸಿದವರು ಸೋತರೆ ಬಿಜೆಪಿ ಸಂಪರ್ಕದಲ್ಲಿರುವವರು ಹಿಂದೇಟು ಹಾಕಬಹುದು. ಸರ್ಕಾರವೇ ನಿಂತರೂ ಅವರು ಗೆಲ್ಲಲು ಸಾಧ್ಯವಾಗದಿದ್ದರೆ ಅಲ್ಲಿಗೆ ಹೋಗಿ ಏನು ಮಾಡುವುದು ಎಂದು ಯೋಚಿಸಬಹುದು ಎಂದು ಹೇಳಲಾಗುತ್ತಿದೆ.  ಒಂದೊಮ್ಮೆ, ಕೆ.ಆರ್‌.ಪೇಟೆಯಲ್ಲಿ ಬಿಜೆಪಿ ಜಯ ಸಾಧಿಸಿದರೆ, ಜೆಡಿಎಸ್‌ ಪಾಲಿಗೆ ಅದು
ದೊಡ್ಡ ಪೆಟ್ಟಾಗಲಿದೆ. ಆ ಪಕ್ಷದ ಪ್ರಾಬಲ್ಯ ಇರುವ ಕ್ಷೇತ್ರವದು. ಅಲ್ಲಿ ಕಮಲ ಅರಳಿದರೆ, ಜೆಡಿಎಸ್‌
ಅಸ್ತಿತ್ವ ಅಲುಗಾಡಲಿದೆ.

ಬಿಜೆಪಿ ಲೆಕ್ಕಾಚಾರ: ಮಿನಿ ಸಮರದಲ್ಲಿ ಬಿಜೆಪಿ ಎಂಟು ಸೀಟು ಗೆದ್ದರೂ ಅದು ಸರಳ ಬಹುಮತ ಆಗಲಿದೆ. ಆದ್ದರಿಂದ ಈಗಿನಂತೆಯೇ ಆಗಲೂ ಸರ್ಕಾರದ್ದು “ತಂತಿ ಮೇಲಿನ ನಡಿಗೆ’ ಆಗಿರಲಿದೆ. ಇದಕ್ಕಾಗಿ ಬಿಜೆಪಿ ಸ್ಪಷ್ಟ ಬಹುಮತದ ಕಡೆಗೆ ದೃಷ್ಟಿ ಹರಿಸಲಿದೆ. ಈ ನಿಟ್ಟಿನಲ್ಲಿ ಫ‌ಲಿತಾಂಶದ ನಂತರವೂ ಅನ್ಯಪಕ್ಷದ ಇನ್ನಷ್ಟು ಶಾಸಕರಿಗೆ ಅದು ಗಾಳ ಹಾಕುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದರಿಂದ ಸರ್ಕಾರದಲ್ಲಿದ್ದವರಿಗೂ ಪರೋಕ್ಷವಾಗಿ ಸಂದೇಶ ರವಾನಿಸಿದಂತಾಗಲಿದೆ. ಮುಂದಿನ ದಿನಗಳಲ್ಲಿ ಅಕಸ್ಮಾತ್‌ ಎದುರಾಗಬಹುದಾದ ಬಂಡಾಯದ ಬಿಸಿಯೂ ಅಷ್ಟಾಗಿ ತಟ್ಟುವುದಿಲ್ಲ ಎಂಬ ಲೆಕ್ಕಾಚಾರ ಬಿಜೆಪಿಯದ್ದಾಗಿದೆ. 2008ರ ಘಟನೆ ಇದಕ್ಕೆ ಪುಷ್ಠಿ ನೀಡುತ್ತದೆ. ಅಂದು 110 ಸೀಟುಗಳನ್ನು ಗೆದ್ದಿದ್ದ
ಯಡಿಯೂರಪ್ಪ ಅವರಿಗೆ ಸರಳ ಬಹುಮತಕ್ಕೆ ಬೇಕಾಗಿದ್ದು ಕೇವಲ ಮೂರು ಸೀಟುಗಳು. ಆದರೆ,
ಹೆಚ್ಚುವರಿಯಾಗಿ ಆರು ಶಾಸಕರನ್ನು ತಮ್ಮತ್ತ ಸೆಳೆದಿದ್ದರು. ಈಗಲೂ ಅಂತಹದ್ದೇ ಸಾಹಸಕ್ಕೆ
ಬಿಜೆಪಿ ಕೈಹಾಕಿದರೆ, ಜೆಡಿಎಸ್‌ಗೆ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಸವಾಲಾಗಲಿದೆ.

ಮತ್ತೂಂದು ಸುತ್ತಿನ ಸರ್ಕಸ್‌
15 ಜನ ಅನರ್ಹರಲ್ಲಿ 8-9 ಸೀಟು ಗೆದ್ದರೆ ಸರ್ಕಾರವೇನೋ ಸೇಫ್ ಆಗುತ್ತೆ. ಆದರೆ, ಉಳಿದ 6-7 ಜನರ ಹೊಣೆಯೂ ಸರ್ಕಾರದ ಮೇಲಿದೆ. ಸೋತವರಿಗೂ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ, ಸೂಕ್ತ ಸ್ಥಾನಮಾನ ನೀಡಿ ತೃಪ್ತಿಪಡಿಸಬೇಕಾಗುತ್ತದೆ. ಇದಕ್ಕಾಗಿ ಈಗಾಗಲೇ ಇರುವವರಿಂದ ರಾಜೀನಾಮೆ ಕೊಡಿಸಬೇಕಾಗುತ್ತದೆ. ಇದಕ್ಕಾಗಿ ಬಿಜೆಪಿ ಮತ್ತೂಂದು ಸುತ್ತಿನ ಸರ್ಕಸ್‌ ಮಾಡಬೇಕಾಗುತ್ತದೆ.

Advertisement

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next