Advertisement
ರೇಡಿಯೋ ಪಕ್ಕದಲ್ಲಿಯೇ ಕುಳಿತು ಹಾಡಿಗೆ ತನ್ನದೇ ಧ್ವನಿಯನ್ನು ಸೇರಿಸಿ ತಲೆಯಾಡಿಸುತ್ತಿದ್ದಾರೆ ಪದ್ಮಮ್ಮ. ಪದ್ಮಮ್ಮ ಎಂದರೆ ಪೋಸ್ಟ್ ಮ್ಯಾನ್ ರಂಗಣ್ಣನ ಮುದ್ದಿನ ಮಡದಿ. ಪದ್ದು ಇದು ರಂಗಣ್ಣ ಪ್ರೀತಿಯಿಂದ ಮಡದಿಗಿಟ್ಟ ಹೆಸರು. ಈ ಹೆಸರನ್ನು ರಂಗಣ್ಣ ಮಾತ್ರ ಕರೆಯಬೇಕು, ಬೇರಾರಿಗೂ ಆ ಅಧಿಕಾರ ಇಲ್ಲ. ಆದರೆ ಇಂದಿಗೆ ರಂಗಣ್ಣ ಮನೆಯವರನ್ನು ಅಗಲಿ ಆರೇಳು ವರ್ಷಗಳೇ ಆಗಿದೆ. ರಂಗಣ್ಣ ಮತ್ತು ಪದ್ಮಮ್ಮ ದಂಪತಿಗಳ ಏಕೈಕ ಪುತ್ರ ಧರ್ಮಪ್ಪ, ಆತ ಪಟ್ಟಣದಲ್ಲಿ ಒಳ್ಳೆಯ ನೌಕರಿ ಹಿಡಿದು ಅಲ್ಲಿಯೇ ತನ್ನ ಹೆಂಡತಿ ಮತ್ತು ಮಗಳೊಂದಿಗೆ ಇದ್ದಾನೆ. ಆದರೆ ಪ್ರತೀ ತಿಂಗಳು ನಂದಿಪುರಕ್ಕೆ ಬಂದು ತಾಯಿಯನ್ನು ನೋಡಿಕೊಂಡು, ಅವಳೊಂದಿಗೆ ಒಂದು ದಿನ ಕಳೆಯುವುದನ್ನು ಇಂದಿನವರೆಗೂ ತಪ್ಪಿಸಿರಲಿಲ್ಲ.
Related Articles
Advertisement
ಸಣ್ಣ ಹೊಳೆ ಆದ್ರಿಂದ ಸಂಪರ್ಕಕ್ಕೆ ದೊಡ್ಡ ಮರದ ದಿಮ್ಮಿ ಹಾಕಿ ಪ್ರತಿವರ್ಷ ರಸ್ತೆ ಮಾಡಬೇಕು. ಅಲ್ಲಿದ್ದ ಪೋಸ್ಟ್ ಆಫೀಸಿಗೆ ಒಂದು ದಿನ ಹೊಸ ಮಾಸ್ತರರು ದೂರದ ಊರಿನಿಂದ ವರ್ಗಾವಣೆಯಾಗಿ ಬಂದರು. ಅವರ ಹೆಸರು ರಾಜ ಅಂತ ಇಟ್ಕೊ, ಚಿಗುರು ಮೀಸೆಯ ಯುವಕ, ನೋಡುವುದಕ್ಕೆ ಕಟ್ಟು ಮಸ್ತಾಗಿ ಚೆನ್ನಾಗಿಯೇ ಇದ್ದರು. ಪ್ರತಿದಿನ ಮನೆ ಮನೆಗೆ ಹೋಗಿ ಪೋಸ್ಟ್ ಹಾಕೋದು ಅವರ ಕೆಲಸ. ಹಾಗಾಗಿ ಊರಲ್ಲಿ ಒಳ್ಳೆಯ ಹೆಸರಿತ್ತು ಅವರಿಗೆ.
ಪೋಸ್ಟ್ ಮ್ಯಾನ್ ರಾಜ ಅಂದ್ರೆ ಸಾಕು ಎಲ್ಲರಿಗೂ ಆತ್ಮೀಯರೇ. ಹೊಳೆಯ ಇನ್ನೊಂದು ಬದಿಯಲ್ಲಿ ಊರ ಗೌಡರ ಸಹಾಯದಿಂದ ಒಂದು ಮನೆ ಬಾಡಿಗೆ ಪಡೆದುಕೊಂಡಿದ್ದರು. ಪ್ರತಿದಿನ ಕೆಲಸ ಮುಗಿಸಿ ಗೌಡರ ಮನೆಗೆ ಬರದೆ ಹೋದ ಇತಿಹಾಸವೇ ಇಲ್ಲ. ಗೌಡ್ರು ಊರಿನಲ್ಲಿ ಹಿರಿಯರು ಮತ್ತು ಗೌರವಸ್ಥರು, ಅವರ ಏಕೈಕ ಪುತ್ರಿಯೇ ಈ ಕಥೆಯ ನಾಯಕಿ ಹೆಸರು ರಾಣಿ ಅಂತ ಇರ್ಲಿ.
ರಾಣಿಯೂ ಅಷ್ಟೇ ನಿಜವಾದ ಮಹಾರಾಣಿಯ ಹಾಗೆ ತುಂಬಾ ಸುಂದರಳೂ, ಗಾಂಭೀರ್ಯಳೂ ಆಗಿ ಹೆಸರಿಗೆ ಅನುರೂಪವಾಗಿದ್ದಳು. ಪಿಯುಸಿ ಮುಗಿಸಿ ತಮ್ಮ ಊರಿನ ಶಾಲೆಯಲ್ಲಿಯೇ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಆಕೆಯ ಗುಣ ನಡತೆ ಎಲ್ಲರೂ ಮೆಚ್ಚುವಂಥದ್ದು.
ಆಕೆಯೆಂದರೆ ಶಾಲೆಯ ಮಕ್ಕಳಿಗೂ ಅತ್ಯಂತ ಅಚ್ಚುಮೆಚ್ಚು, ಒಂದು ವೇಳೆ ಶಾಲೆಗೆ ರಜೆ ಇದ್ದಾಗ್ಯೂ ಮನೆಗೆ ಬಂದು ಪಾಠ ಹೇಳಿಸಿಕೊಳ್ಳುತ್ತಿದ್ದರು. ಮಕ್ಕಳ ಜತೆಗೆ ಮಗುವಂತೆ ಬೆರೆತುಹೋಗುವ ಮುಗ್ಧ ಮನಸ್ಸು ಆಕೆಯದು. ಮನೆಗೆ ಯಾರಾದರೂ ಬಂದರೆ ಅವರನ್ನು ಸತ್ಕರಿಸಿಯೇ ತೀರಬೇಕು. ಅಂತೆಯೇ ಪ್ರತಿನಿತ್ಯ ಬರುವ ಪೋಸ್ಟ್ ಮ್ಯಾನ್ ರಾಜನಿಗೂ ಒಂದು ಲೋಟ ಗಟ್ಟಿ ಹಾಲಿನ ಚಹಾ ಮತ್ತು ತಿನ್ನಲು ಏನಾದರೂ ಕೊಡುವುದು ವಾಡಿಕೆ, ಇದು ಹೀಗೆ ಮುಂದುವರೆಯುತ್ತಾ ಇತ್ತು.
ತಾಯಿಯನ್ನು ಕಳೆದುಕೊಂಡು ತಂದೆಯ ಆಶ್ರಯದಲ್ಲಿಯೇ ಬೆಳೆದವಳು ರಾಣಿ. ಹೀಗಿರುವಾಗ ಒಂದು ದಿನ ದಿಢೀರನೆ ಗೌಡರು ಉಸಿರು ಚೆಲ್ಲಿದರು. ರಾಣಿ ಒಬ್ಬಂಟಿಯಾದಳು, ಪೋಸ್ಟ್ ಮ್ಯಾನ್ ರಾಜ ಸಾವಿನ ಅನಂತರದ ಕಾರ್ಯಗಳೆಲ್ಲ ಮುಗಿಯುವ ತನಕ ಜತೆಗೇ ಇದ್ದು, ಅನಂತರ ಒಂಟಿ ಹೆಣ್ಣಿರುವ ಮನೆಗೆ ದಿನಾ ಹೋಗುವುದು ಸರಿಯಲ್ಲ ಎಂದು ಹೋಗುವುದನ್ನು ನಿಲ್ಲಿಸಿದ.
ಆದರೆ ಈ ನಡುವೆ ಗೌಡರ ಸಾವಿನ ಸುದ್ದಿ ತಿಳಿದು ಈ ಕುಟುಂಬವನ್ನು ತ್ಯಜಿಸಿದ್ದ ರಾಣಿಯ ಸ್ವಂತ ಚಿಕ್ಕಪ್ಪ ಮರಳಿ ಮನೆಗೆ ಬಂದ. ಬಂದವನೇ ಆಸ್ತಿಯ ಆಸೆಗಾಗಿ ಮಗಳ ಸಮಾನಳಾದ ರಾಣಿಯನ್ನು ಮದುವೆಯಾಗಬೇಕೆಂದು ಪೀಡಿಸಿದ, ಆದರೆ ರಾಣಿ ಇದಕ್ಕೆ ಒಪ್ಪದಾಗ ಆಕೆಗೆ ಹಿಂಸಿಸತೊಡಗಿದ. ಈ ವಿಷಯ ತಿಳಿದ ರಾಜ ರಾಣಿಯನ್ನು ಚಿಕ್ಕಪ್ಪನ ಮುಷ್ಟಿಯಿಂದ ಹೇಗೋ ತಪ್ಪಿಸಿದ. ಆ ಬಳಿಕ ಇವರಿಬ್ಬರೂ ಪ್ರತಿದಿನ ಭೇಟಿ ಮಾಡುತ್ತಿದ್ದರು.
ಪೋಸ್ಟ್ ಮ್ಯಾನ್ ರಾಜನ ಬಗ್ಗೆ ಆಕೆಗೆ ಅಪಾರ ಅಭಿಮಾನವಿತ್ತು, ಆತನಿಗೂ ಅಷ್ಟೇ ಆಕೆಯ ಮೇಲೆ ಅಷ್ಟೇ ಗೌರವವಿತ್ತು. ನಿರಂತರ ಭೇಟಿಯಿಂದ ಅವರು ಪರಸ್ಪರ ಹತ್ತಿರವಾಗತೊಡಗಿದರು. ರಾಜ ತನ್ನ ಕೆಲಸ ಮುಗಿಸಿ ಶಾಲೆಗೆ ಹೋಗಿ ಅಲ್ಲಿಂದ ಜತೆಗೆ ಮನೆಗೆ ಹೋಗತೊಡಗಿದರು, ಅಷ್ಟರಲ್ಲಿ ಊರಿನಲ್ಲಿ ಎಲ್ಲ ಇವರ ಬಗ್ಗೆ ಗುಸು ಗುಸು ಮಾತುಗಳು ಆರಂಭವಾದವು.
ಇವರಿಬ್ಬರ ಪರಿಚಯ ಸ್ನೇಹವಾಗಿ ಈಗ ಪರಸ್ಪರ ಬಿಟ್ಟಿರಲಾರದಷ್ಟು ಜತೆಗಿದ್ದಾರೆ. ಇಬ್ಬರೂ ಮನಸ್ಸಿನಲ್ಲಿಯೇ ಪರಸ್ಪರ ಮದುವೆಯಾಗಬೇಕೆಂದು ತೀರ್ಮಾನಿಸಿದ್ದರೂ, ಹೇಗೆ ಹೇಳುವುದು? ಹೇಳಿದರೆ ತಪ್ಪಾಗುತ್ತದೆಯೇನೋ? ಎಂದು ಚಡಪಡಿಸುತ್ತಿದ್ದರು. ಕೊನೆಗೆ ಧೈರ್ಯ ಮಾಡಿ ರಾಜಣ್ಣ ಒಂದು ದಿನ ಸಂಜೆ ಹೇಳಿಯೇ ಬಿಟ್ಟ, ರಾಣಿಯೂ ಮೊದಲೇ ನಿರ್ಧರಿಸಿದ್ದರಿಂದ ತಡ ಮಾಡದೆ ತನ್ನ ಸಮ್ಮತಿಯನ್ನು ಸೂಚಿಸಿದಳು.
ಆದರೆ ಇಬ್ಬರೂ ಈಗ ಅನಾಥರು ಮದುವೆ ಮಾಡಿಸುವವರಾರು? ಎಂದು ಯೋಚಿಸಿ, ಶಾಲೆಯ ಹೆಡ್ ಮಾಸ್ಟರ್ ಉಪಸ್ಥಿತಿಯಲ್ಲಿ ಮದುವೆಯಾದರು. ಮದುವೆಯಾದ ಅನಂತರ ಊರಿನ ಗಡಿಯಲ್ಲಿ ಹೊಸದಾದ ಮನೆಯೊಂದನ್ನು ನಿರ್ಮಿಸಿ ಸುಖವಾಗಿ ಜೀವನ ಸಾಗಿಸಿದರು. ಅವರವರ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಾ ಪರಸ್ಪರ ಅನ್ಯೋನ್ಯವಾಗಿದ್ದ ಈ ಜೋಡಿ ಎಲ್ಲರಿಗೂ ಆದರ್ಶವಾಗಿತ್ತು.
ಪರಸ್ಪರ ಜತೆಯಾಗಿ ಐವತ್ತು ವರ್ಷಗಳು ಸಂತೋಷವಾಗಿ ಕಳೆದಿದ್ದಾರೆ ರಾಜ ರಾಣಿ ಎನ್ನುತ್ತಾ ಪದ್ಮಮ್ಮ ಗೋಡೆಯಲ್ಲಿ ನೇತು ಹಾಕಿರುವ ರಂಗಣ್ಣನ ಭಾವಚಿತ್ರವನ್ನು ತದೇಕ ಚಿತ್ತದಿಂದ ಕಣ್ಣಲ್ಲಿ ನೀರು ತುಂಬಿಕೊಂಡು ನೋಡುತ್ತಿದ್ದಾಳೆ.
ಸುಮನಾಳಿಗೆ ಅರ್ಥವಾದಂತೆ ಕಾಣಲಿಲ್ಲ, ಅಜ್ಜಿ ಆಮೇಲೆ ಎಂದು ಪದ್ಮಮ್ಮಳ ಕೈ ಹಿಡಿದು ಅದುಮಿದಳು. ಮತ್ತೆ ಪ್ರಸ್ತುತಕ್ಕೆ ಬಂದ ಪದ್ಮಮ್ಮ ಮತ್ತೂಮ್ಮೆ ರಂಗಣ್ಣನ ಫೋಟೋವನ್ನು ದಿಟ್ಟಿಸಿ, ಸುಮನಾ, ಈಗ ರಾಜ ನೋಡು ನನ್ನನ್ನೇ ನೋಡುತ್ತಿದ್ದಾನೆ, ಆ ರಾಣಿ ನಿನಗೆ ಕಥೆ ಹೇಳುತ್ತಿದ್ದಾಳೆ ಎಂದು ಕಣ್ತುಂಬಿಕೊಂಡು ನಕ್ಕಳು.
ಸುಮನಾಳಿಗೆ ಈಗ ಎಲ್ಲವೂ ತಿಳಿಯಿತು ಪದ್ದು ನಿನ್ನ ಲವ್ ಸ್ಟೋರಿ ಬಹಳ ಚೆನ್ನಾಗಿದೆ, ನೀನು ಬಿಡು ರಾಣಿನೇ ಎನ್ನುತ್ತಾ ಗಟ್ಟಿಯಾಗಿ ತಬ್ಬಿಕೊಂಡಳು. ಅಪ್ಪಿಕೊಂಡ ಮೊಮ್ಮಗಳ ಗಟ್ಟಿಯಾಗಿ ಬಾಚಿಕೊಂಡು ತನ್ನ ಮುದ್ದಿನ ರಾಜನನ್ನು ಕೊನೆಯ ಬಾರಿಗೆ ಗಟ್ಟಿಯಾಗಿ ಬಿಗಿದಪ್ಪಿಕೊಂಡದ್ದನ್ನು ನೆನೆದುಕೊಂಡು ಒಂದೆರಡು ಹನಿ ಕಣ್ಣೀರು ನೆಲಕ್ಕೆ ಸುರಿಸಿ, ನಿಟ್ಟುಸಿರೆಳೆದಲು ಪದ್ದು.
-ಸಾರ್ಥಕ್
ತುಂಡುಬೈಲು