ಈ ಭೂಮಿಯ ಮೇಲೆ ಏಕಕೋಶ ಜೀವಿಯಾಗಿರುವ ಅಮೀಬಾ ಆಗಿರಲಿ; ಕೋಟ್ಯಂತರ ಜೀವಕೋಶಗಳನ್ನು ಹೊಂದಿ ರುವ ನಾವಾಗಲಿ- ಜೀವಸ್ವರೂಪವಾಗಿ ಒಂದೇ. ಎಲ್ಲರಲ್ಲೂ ಎಲ್ಲದರಲ್ಲೂ ಇರುವ ಜೀವ ಒಂದೇ. ಅದು ಸಮಾನವಾದುದು. ಅದು ಬದುಕನ್ನು ಮುಂದುವರಿಸುವುದಕ್ಕಾಗಿ ಸದಾ ಹೋರಾಡುತ್ತಿರುತ್ತದೆ. ಅಮೀಬಾ ದಿಂದ ಹಿಡಿದು ಮನುಷ್ಯನ ವರೆಗೆ ಬದುಕು ಸಾಧ್ಯವಿರುವ ಈ ಭೂಗ್ರಹದ ಮೇಲಿನ ಸಜೀವಿಗಳನ್ನೆಲ್ಲ ಇಡಿಯಾಗಿ ಕಲ್ಪಿಸಿಕೊಳ್ಳಿ – ಎಲ್ಲವೂ ಪ್ರಜ್ವಲಿಸುತ್ತಿರುವ ಜೀವದ ವಿವಿಧ ಸ್ವರೂಪಗಳೇ.
ಆದರೆ ಒಂದು ವಿಚಾರವನ್ನು ಗಮನಿಸ ಬಹುದು – ಜೀವಸ್ವರೂಪವು ಸರಳವಾಗಿ ದ್ದಷ್ಟು ಸೃಷ್ಟಿಯ ಜತೆಗೆ ಹೆಚ್ಚು ಸಾಂಗತ್ಯ ದಲ್ಲಿರುತ್ತದೆ. ಅಮೀಬಾವನ್ನೇ ತೆಗೆದು ಕೊಳ್ಳೋಣ. ಅದು ನೀರಿನಲ್ಲಿ ತನ್ನಷ್ಟಕ್ಕೆ ತಾನು ತೇಲಾಡುತ್ತಿರುತ್ತದೆ. “ನಾನು ಅಮೀಬಾ’ ಎಂದು ಹೇಳಿಕೊಳ್ಳುವುದಿಲ್ಲ. ಅದು ನೀರಿನಲ್ಲಿದೆ ಎಂಬುದೂ ಯಾರಿಗೂ ಗೊತ್ತಾಗಲಿಕ್ಕಿಲ್ಲ – ಅಷ್ಟರ ಮಟ್ಟಿಗೆ ಅದು ತನ್ನಷ್ಟಕ್ಕೆ ತಾನಿರುತ್ತದೆ, ಇರುವಷ್ಟು ದಿನ ಅಸ್ತಿತ್ವಕ್ಕಾಗಿ ಹೋರಾಡು ವುದು, ಸಂತಾನ ವೃದ್ಧಿ ಮತ್ತು ಜೀವನಾವಧಿ ಪೂರ್ಣ ಗೊಂಡಾಗ ಸಾವು – ಇಷ್ಟೇ. ಅಮೀಬಾ ಮಾತ್ರ ಅಲ್ಲ; ಅದೇ ನೀರಿನಲ್ಲಿ ಇರುವ ಕೋಟ್ಯಂತರ ಇತರ ಸೂಕ್ಷ್ಮಜೀವಿಗಳ ಕತೆಯೂ ಹೀಗೆಯೇ.
ಆದರೆ ಅವುಗಳಿಗೆ ಅವುಗಳದೇ ಆದ ಅಸ್ತಿತ್ವ ಇಲ್ಲ ಎಂದು ನಾವು ಹೇಳಲಾಗದು. ಅವುಗಳದ್ದೇ ಆದ ಸಮೂಹ ಇರುತ್ತದೆ, ಒಂದು ಇನ್ನೊಂದರೊಂದಿಗೆ ಹೋರಾ ಡುತ್ತದೆ, ಬದುಕುಳಿಯುವುದಕ್ಕಾಗಿ ಕಾದಾ ಡುತ್ತವೆ, ತಮ್ಮ ವಂಶ ಚೆನ್ನಾಗಿ ಬೆಳೆಯಬಲ್ಲ ಇನ್ನೊಂದು ತಾಣವನ್ನು ಹುಡುಕುತ್ತವೆ. ತಮ್ಮ ಬದುಕನ್ನು ಎಷ್ಟು ವ್ಯವಸ್ಥಿತವಾಗಿ, ಎಷ್ಟು ನಿಯಮಬದ್ಧವಾಗಿ, ಎಷ್ಟು ಸುಸೂತ್ರವಾಗಿ ಅವು ನಿಭಾಯಿಸುತ್ತವೆ ಎಂಬುದನ್ನು ಹತ್ತಿರದಿಂದ ಗಮನಿಸಿದರೆ ತಿಳಿದೀತು. ಕೀಟಗಳು, ಹಕ್ಕಿಗಳು, ಪ್ರಾಣಿಗಳು, ಉರಗ ಗಳು… ಎಲ್ಲವುಗಳ ಬಗೆಗೂ ಈ ಮಾತು ನಿಜ.
ಅವುಗಳ ಮೆದುಳು ನಮ್ಮ ಮೆದುಳಿಗಿಂತ ಲಕ್ಷ-ನೂರು ಪಟ್ಟು ಸಣ್ಣದಿರಬಹುದು. ಆದರೆ ತಮ್ಮ ಮಟ್ಟಿಗೆ ಅವು ಸಂಕೀರ್ಣವಾದ ಬುದ್ಧಿಮತ್ತೆ, ದೇಹ- ಎಲ್ಲವನ್ನೂ ಹೊಂದಿ ರುತ್ತವೆ. ಒಂದು ಇರುವೆ ಒಂದು ಸಂಪೂರ್ಣ ಇರುವೆಯಾಗಿರಲು ಏನೆಲ್ಲ ಬೇಕೋ ಅವೆಲ್ಲವನ್ನೂ ಹೊಂದಿರುತ್ತದೆ.
ನಮಗೂ ಸೃಷ್ಟಿಯ ಉಳಿದೆಲ್ಲ ಜೀವ ಸಂಕುಲಕ್ಕೂ ಇರುವ ಒಂದೇ ಒಂದು ವ್ಯತ್ಯಾಸ ಎಂದರೆ ಅವೆಲ್ಲವುಗಳ ಅರಿವು ಮತ್ತು ಬುದ್ಧಿಮತ್ತೆ ಅಲ್ಲಲ್ಲಿಗೆ ಸ್ಥಾವರವಾಗಿದೆ. ಜೀವ ವಿಕಾಸದ ಯಾವುದೋ ಒಂದು ಕೊರತೆಯಿಂದ ಅವುಗಳಿಗೆ ಉಂಟಾಗಿರುವ ನಷ್ಟವದು. ಆದರೆ ನಮ್ಮ ಅರಿವು ಸ್ಥಾವರ ಸ್ಥಿತಿಯಿಂದ ಬಿಡುಗಡೆ ಪಡೆದು ಚಲನ ಶೀಲವಾಗಿದೆ. ಹಾಗಾಗಿಯೇ ನಾವು ಅಂದರೆ, ಮನುಷ್ಯರು ನಮ್ಮ ಸೃಷ್ಟಿಯ ಅಗತ್ಯಗಳನ್ನು ಮೀರಿ ಇನ್ನೂ ಮುಂದಕ್ಕೆ ಸಾಗುವಷ್ಟು ಆಲೋಚನ ಶಕ್ತಿಯನ್ನು ಹೊಂದಿದ್ದೇವೆ. ಇದುವೇ ನಮ್ಮ ಶಕ್ತಿ. ನಮ್ಮ ದೈಹಿಕ ಮತ್ತು ಮಾನಸಿಕ ಸಂರಚನೆಯನ್ನು ಮೀರಿದ ಅರಿವೇ ನಮ್ಮ ಶಕ್ತಿ. ಜೀವವಿಕಾಸದ ಇತಿಮಿತಿಗಳನ್ನು ಹಿಂದಿಕ್ಕುವಂತಹ ಅರಿವೇ ಮನುಷ್ಯನ ಸಾಧ್ಯತೆ.
ಈ ಸಾಧ್ಯತೆ ಮತ್ತು ಶಕ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಲು ಸಾಧ್ಯವಾದರೆ ನಮ್ಮ ಬದುಕು ಹೊಸ ಆಯಾಮಕ್ಕೆ ಹೊರಳಲು ಸಾಧ್ಯ. ಲೌಕಿಕ ಬದುಕಿನಲ್ಲೂ ಆಧ್ಯಾತ್ಮಿಕ ಬದುಕಿನಲ್ಲೂ ಹೊಸ ಹೊಸ ಎತ್ತರದ ಸಾಧನೆಗಳನ್ನು ಕೈಗೊಳ್ಳಲು ಸಾಧ್ಯ. ಅದಕ್ಕಾಗಿ ನಮ್ಮ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಮೊತ್ತಮೊದಲಾಗಿ ಪ್ರಯತ್ನಿಸಬೇಕು.
( ಸದ್ಗುರು ಉಪದೇಶದ ಸಾರ ಸಂಗ್ರಹ)