ಬಜಪೆ: ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರದ ಮುಚ್ಚಾರು ಕಾನ ಕಿಂಡಿ ಅಣೆಕಟ್ಟು ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ. ಈ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಮುಚ್ಚಾರು, ನಿಡ್ಡೋಡಿ, ತೆಂಕ ಮಿಜಾರು ಗ್ರಾಮದ ಸುಮಾರು 2 ಸಾವಿರ ಎಕರೆ ಕೃಷಿ ಜಮೀನಿಗೆ ಇದು ಪ್ರಯೋಜನವಾಗಲಿದೆ. ಜತೆಗೆ ಗ್ರಾ.ಪಂ. ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಹಾಗೂ ಸುತ್ತಮುತ್ತ ಬಾವಿಗಳಿಗೆ ಅಂತರ್ಜಲ ವೃದ್ಧಿಗೂ ಸಹ ಅನುಕೂಲವಾಗಲಿದೆ.
ಜಿ.ಪಂ. ಮಾಜಿ ಸದಸ್ಯ ಜನಾರ್ದನ ಗೌಡ ಪ್ರಸ್ತಾವನೆಯ ಮೇರೆಗೆ ಶಾಸಕ ಡಾ|ಭರತ್ ಶೆಟ್ಟಿ ವೈ. ಅವರು ಸಣ್ಣ ನೀರಾವರಿ ಯೋಜನೆಗೆ ಅನುದಾನ ನೀಡಿದ್ದರು. ಫೆ. 15ಕ್ಕೆ ಈ ಕಾಮಗಾರಿಯ ಕಾರ್ಯ ಆರಂಭ ಗೊಂಡಿತ್ತು. ಮೇ 15ರಂದು ಅಣೆಕಟ್ಟಿನ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಗುತ್ತಿಗೆದಾರ ಉದಯ ಕುಮಾರ್ ಶೆಟ್ಟಿ ಕುಂದಾಪುರ ತಿಳಿಸಿದ್ದಾರೆ.
ಕಿಂಡಿ ಅಣೆಕಟ್ಟು ಸುಮಾರು 32 ಮೀ. ಉದ್ದ ಹಾಗೂ 4 ಮೀ. ಎತ್ತರವಿದೆ. ಕಂಬದಿಂದ ಕಂಬಕ್ಕೆ ಸುಮಾರು 2 ಮೀಟರ್ ಅಂತರವಿದೆ. 4 ವರ್ಷಗಳ ಹಿಂದೆ ಮುಚ್ಚಾರು ಕಾನದ ಹಳೆಯ ಕಿಂಡಿ ಅಣೆಕಟ್ಟು ಶಿಥಿಲ ಗೊಂಡ ಕಾರಣ ಮುಚ್ಚಾರು ಗ್ರಾ.ಪಂ. ವಾಪ್ತಿಯಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ, ಕೃಷಿಕರಿಗೆ ಬಹಳ ಸಮಸ್ಯೆಯಾಗಿತ್ತು. ಈ ಯೋಜನೆಯಿಂದ ಕೃಷಿಕರಿಗೆ ಹಾಗೂ ಕೊಳವೆ ಬಾವಿಗಳಿಗೆ ಬಹಳ ಉಪಯೋಗವಾಗಲಿದೆ. ನಾವು ಸಲ್ಲಿಸಿದ ಬೇಡಿಕೆಗೆ ನಮ್ಮ ಶಾಸಕ ಡಾ| ಭರತ್ ಶೆಟ್ಟಿ ವೈ. ಯೋಜನೆಗೆ ಅನುದಾನ ಒದಗಿಸಿ ಸಹಕರಿಸಿದ್ದಾರೆ ಎಂದು ಮುಚ್ಚಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಎ.ಎಸ್. ಹೇಳಿದ್ದಾರೆ.
ಜಲಜೀವನ ಮಿಷನ್ ಮೂಲಕ ಗ್ರಾಮ ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್‌ಗಳು, ಅದಕ್ಕೆ ಸಂಪರ್ಕಿಸುವ ಪೈಪ್‌ಲೈನ್‌ಗಳು ನಿರ್ಮಾಣವಾಗುತ್ತಿದೆ. ಇನ್ನೊಂದೆಡೆ ಪಶ್ಚಿಮ ವಾಹಿನಿ ಹಾಗೂ ಸಣ್ಣ ನೀರಾವರಿ ಯೋಜನೆಯಡಿ ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗುತ್ತಿದೆ. ಕಿಂಡಿ ಅಣೆಕಟ್ಟುಗಳು ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ. ಒವರ್ ಹೆಡ್ ಟ್ಯಾಂಕ್‌ಗಳು ನೀರು ಸರಬರಾಜುಗಳ ಸಂಪರ್ಕ ವ್ಯವಸ್ಥೆಗೆ ಸಹಕಾರಿಯಾಗಲಿದೆ.