ನವದೆಹಲಿ:ರಾಮ ಮಂದಿರ ನಿರ್ಮಾಣಕ್ಕಾಗಿ ಸುಮಾರು ಮೂರು ದಶಕಗಳ ಹಿಂದೆ ನಡೆದಿದ್ದ ರಾಮಜನ್ಮಭೂಮಿ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದ ರಾಮ್ ಕೊಠಾರಿ ಮತ್ಉ ಶಾರದ್ ಕುಮಾರ್ ಸಹೋದರರ ಕುಟುಂಬದ ಸದಸ್ಯರಿಗೆ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭೂಮಿ ಪೂಜೆಯ ಕಾರ್ಯಕ್ರಮಕ್ಕೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನಿಸಿರುವುದಾಗಿ ತಿಳಿಸಿದೆ.
ವರದಿಯ ಪ್ರಕಾರ, ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರಕ್ಕಾಗಿ ಅ.5ರಂದು ನಡೆಯಲಿರುವ ಭೂಮಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 175 ವಿಐಪಿಗಳನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಕೊಠಾರಿ ಕುಟುಂಬದ ಇಬ್ಬರು ಸದಸ್ಯರು ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ ಎಂದು ವರದಿ ಹೇಳಿದೆ.
ಅಂದು ರಾಮಜನ್ಮಭೂಮಿ ಹೋರಾಟದಲ್ಲಿ ಕರಸೇವಕರಾಗಿದ್ದ ಸಹೋದರರಾದ ರಾಮ್ ಕುಮಾರ್ ಕೊಠಾರಿ ಮತ್ತು ಶಾರದ್ ಕುಮಾರ್ ಕೊಠಾರಿ ಪೊಲೀಸರ ಗುಂಡಿನ ದಾಳಿಗೆ ಸಾವನ್ನಪ್ಪಿದ್ದರು. ಈ ಘಟನೆ ನಡೆದು 30 ವರ್ಷಗಳು ಕಳೆದುಹೋಗಿದೆ. ಆದರೆ ಕೊಠಾರಿ ಕುಟುಂಬ ಇಂತಹ ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದ್ದು, ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರಿಂದ ಕನಸು ನನಸಾದಂತಾಗಿದೆ ಎಂದು ಕೊಠಾರಿ ಕುಟುಂಬ ಸದಸ್ಯರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಕರಸೇವಕರು ಜನಿಸಿದ್ದ ಸ್ಥಳದ ಮಣ್ಣನ್ನು ಕೊಠಾರಿ ಕುಟುಂಬ ಸದಸ್ಯರು ಸಂಗ್ರಹಿಸಿದ್ದಾರೆ. ಅಷ್ಟೇ ಅಲ್ಲ ಇತರರು ಕೂಡಾ ಪ್ರಸಿದ್ಧ ಬೇಲೂರು ಮಠ ದೇವಸ್ಥಾನ, ಅಂಡಮಾನ್, ನಿಕೋಬಾರ್ ದ್ವೀಪದಲ್ಲಿರುವ ದೇವಾಲಯಗಳ ಮಣ್ಣನ್ನು ಸಂಗ್ರಹಿಸಿದ್ದು, ಅಯೋಧ್ಯೆಯಲ್ಲಿ ನಡೆಯಲಿರುವ ಭೂಮಿ ಪೂಜೆಗೆ ಉಪಯೋಗಿಸಲಾಗುವುದು ಎಂದು ವರದಿ ವಿವರಿಸಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಆಗಸ್ಟ್ 5ರಂದು ಪಶ್ಚಿಮಬಂಗಾಳದಲ್ಲಿ ಲಾಕ್ ಡೌನ್ ಘೋಷಿಸಿರುವುದು ರಾಜಕೀಯ ವಲಯದಲ್ಲಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಒಂದು ನಿರ್ದಿಷ್ಟ ಧರ್ಮವನ್ನು ಒಲೈಸಿಕೊಂಡು, ಹಿಂದುಗಳ ಭಾವನೆಗೆ ಧಕ್ಕೆ ತರುವ ನಿರ್ಧಾರ ಮಮತಾ ಬ್ಯಾನರ್ಜಿ ತೆಗೆದುಕೊಂಡಿರುವುದಾಗಿ ಬಿಜೆಪಿ ಆರೋಪಿಸಿದೆ.