ಹುಬ್ಬಳ್ಳಿ: ಕೋವಿಡ್ 19 ನಿಯಂತ್ರಣ ನಿಟ್ಟಿನಲ್ಲಿ ಪ್ಲಾಸ್ಮಾ ಥೆರಪಿ ಪ್ರಯೋಗ-ಅಧ್ಯಯನ ನಿಟ್ಟಿನಲ್ಲಿ ದೇಶದ 21 ವೈದ್ಯಕೀಯ ಕೇಂದ್ರಗಳನ್ನು ಐಸಿಎಂಆರ್ ಗುರುತಿಸಿದ್ದು, ಅದರಲ್ಲಿ ನಗರದ “ಕಿಮ್ಸ್’ ಕೂಡ ಒಂದಾಗಿದೆ. ಒಂದೆರಡು ದಿನಗಳಲ್ಲಿಯೇ ಪ್ಲಾಸ್ಮಾ ಸಂಗ್ರಹಕ್ಕೆ ಸರ್ವ ರೀತಿಯಲ್ಲಿ ಸಜ್ಜಾಗಿದೆ.
ಕೋವಿಡ್ 19 ಸೋಂಕಿತರ ಚಿಕಿತ್ಸೆಗೆ ಯಾವುದೇ ನಿರ್ದಿಷ್ಟ ಔಷಧಿ ಇಲ್ಲವಾಗಿದ್ದು, ವೈದ್ಯಲೋಕ ಸದ್ಯಕ್ಕೆ ಕಂಡುಕೊಂಡಿರುವ ಪರಿಹಾರ ಮಾರ್ಗವೆಂದರೆ, ಪ್ಲಾಸ್ಮಾ ಥೆರಪಿಯಾಗಿದೆ. ಕೋವಿಡ್ 19 ಸೋಂಕಿಗೆ ಒಳಪಟ್ಟು, ಚಿಕಿತ್ಸೆ ಪಡೆದು, ಗುಣಮುಖರಾದವರಿಂದ ರಕ್ತ ಸಂಗ್ರಹಿಸಿ ಅದನ್ನು ವಿಂಗಡಿಸುವ ಮೂಲಕ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ.
ಇಂತಹ ಪ್ಲಾಸ್ಮಾ ಥೆರಪಿಯನ್ನು ಕೇರಳದಲ್ಲಿ ಕೈಗೊಳ್ಳಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ-ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಇದನ್ನು ದೇಶದ ಇತರೆ ಕಡೆಗಳಲ್ಲಿಯೂ ವಿಸ್ತರಿಸಲು, ಪ್ರಯೋಗಾತ್ಮಕ ಅಧ್ಯಯನ ಕೈಗೊಳ್ಳುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ದೇಶದ 21 ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿದ್ದು, ಕರ್ನಾಟಕದಿಂದ ಆಯ್ಕೆಯಾದ ಏಕೈಕ ಸಂಸ್ಥೆ ಎಂದರೆ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆಗಿದೆ. ಉತ್ತರ ಕರ್ನಾಟಕದಲ್ಲೇ ಅತಿ ದೊಡ್ಡ ಆಸ್ಪತ್ರೆಯಾಗಿರುವ “ಕಿಮ್ಸ್ ‘ ಪ್ಲಾಸ್ಮಾ ಥೆರಪಿ ನಿಟ್ಟಿನಲ್ಲಿ ಅಗತ್ಯವಿರುವ ರಕ್ತ ಭಂಡಾರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೊಂದಿದೆ. ಜತೆಗೆ ಇಲ್ಲಿನ ನವನಗರದಲ್ಲಿನ ಕ್ಯಾನ್ಸರ್ ಆಸ್ಪತ್ರೆಯೊಂದಿಗೆ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದ್ದು, ಇದೆಲ್ಲವೂ ಪ್ಲಾಸ್ಮಾ ಥೆರಪಿ ಪ್ರಯೋಗಕ್ಕೆ ಪೂರಕವಾಗಲಿದೆ ಎಂಬುದನ್ನು ಮನಗಂಡು ಐಸಿಎಂಆರ್ “ಕಿಮ್ಸ್ ‘ನ್ನು ಆಯ್ಕೆ ಮಾಡಿದೆ.
ನಾಳೆ-ನಾಡಿದ್ದು ಸಂಗ್ರಹ?: ಧಾರವಾಡ ಜಿಲ್ಲೆಯ ಮೊದಲ ಕೊರೊನಾ ಸೋಂಕಿತ ವ್ಯಕ್ತಿ ಪೂರ್ಣ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ಲಾಸ್ಮಾ ಥೆರಪಿಗೆ ರಕ್ತ ನೀಡಿಕೆಗೆ ಅವರು ಸಹಮತ ವ್ಯಕ್ತಪಡಿಸಿದ್ದು, ಒಂದೆರಡು ದಿನಗಳಲ್ಲಿಯೇ ಅವರಿಂದ ರಕ್ತ ಸಂಗ್ರಹಕ್ಕೆ “ಕಿಮ್ಸ್ ‘ ಎಲ್ಲ ರೀತಿಯಿಂದ ಸಜ್ಜಾಗಿದೆ. ಸದ್ಯಕ್ಕೆ ಅವರೊಬ್ಬರೇ ರಕ್ತ ನೀಡಿಕೆಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಕೋವಿಡ್ 19 ಸೋಂಕಿಗೆ ಸಿಲುಕಿ, ಗುಣಮುಖರಾದವರಿಂದ ಸಂಗ್ರಹಿಸುವ ರಕ್ತವನ್ನು ಪ್ಲಾಸ್ಮಾ ಥೆರಪಿಗೆ ಅಗತ್ಯವಿರುವ ರೀತಿಯಲ್ಲಿ ವಿಂಗಡಿಸಬೇಕಾಗಿದ್ದು, ಈ ರೀತಿ ವಿಂಗಡಿಸಿದ ಮಾದರಿಗಳನ್ನು ಆರು ತಿಂಗಳಿಂದ ಒಂದು ವರ್ಷದವರೆಗೆ ಸಂಗ್ರಹಿಡಬಹುದಾಗಿದೆ. ಕೋವಿಡ್-19 ಸೋಂಕಿತರಿಗೆ ತುರ್ತು ಸಂದರ್ಭ ಪ್ಲಾಸ್ಮಾ ಥೆರಪಿಗೆ ಇದನ್ನು ಬಳಸಬಹುದಾಗಿದೆ ಎಂಬುದು “ಕಿಮ್ಸ್ ‘ ನಿರ್ದೇಶಕ ಡಾ|ರಾಮಲಿಂಗಪ್ಪ ಅಂಟರತಾನಿ ಅವರ ಅನಿಸಿಕೆ.
ಐಸಿಎಂಆರ್ ಒಪ್ಪಿಗೆ ನಂತರವೇ ಚಿಕಿತ್ಸಾ ಪ್ರಯೋಗ: ಕೋವಿಡ್ 19 ಸೋಂಕಿತರಾಗಿ, ಗುಣಮುಖರಾದವರಿಂದ ರಕ್ತ ಸಂಗ್ರಹಿಸಿ ಅದನ್ನು ವಿಂಗಡಿಸಿ ಪ್ಲಾಸ್ಮಾ ಥೆರಪಿಗೆ ಎಲ್ಲ ರೀತಿಯಿಂದ ಸನ್ನದ್ಧ ರೀತಿಯಲ್ಲಿ ಇರಿಸಿಕೊಂಡಿದ್ದರೂ ಐಸಿಎಂಆರ್ ಒಪ್ಪಿಗೆ ನಂತವಷ್ಟೇ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನೀಡಬಹುದಾಗಿದೆ. ಪ್ಲಾಸ್ಮಾ ಥೆರಪಿ ಪಡೆದ ರಕ್ತಕ್ಕೂ ಹಾಗೂ ಸೋಂಕಿತನ ರಕ್ತದ ಗುಂಪು ಹೊಂದಾಣಿಕೆಯಾಗಬೇಕು. ಸೋಂಕಿತನು ಥೆರಪಿಗೆ ಒಪ್ಪಬೇಕಾಗಿದೆ. ದೇಶದ 21 ಕೇಂದ್ರಗಳಲ್ಲಿ ಪ್ಲಾಸ್ಮಾ ಥೆರಪಿ ಪ್ರಯೋಗಕ್ಕೆ ಐಸಿಎಂಆರ್ ಒಪ್ಪಿಗೆ ನೀಡಿದ್ದು, ಇದು ಪ್ರಯೋಗಾತ್ಮಕ ಅಧ್ಯಯನವಾಗಿರುವುದರಿಂದ, ಪ್ಲಾಸ್ಮಾ ಥೆರಪಿ ನೀಡುವ ಪೂರ್ವದಲ್ಲಿ, ಥೆರಪಿ ಸಂದರ್ಭ ಏನೆಲ್ಲಾ ನಿಯಮ, ಅಂಶಗಳ ಪಾಲನೆ ಮಾಡಬೇಕು ಎಂಬುದರ ಬಗ್ಗೆ ಐಸಿಎಂಆರ್ ಪೂರ್ಣ ಪ್ರಮಾಣದ ಮಾಹಿತಿಯ ಮಾರ್ಗಸೂಚಿಯನ್ನು “ಕಿಮ್ಸ್ ‘ಗೆ ರವಾನಿಸಿದೆ. ಆಯಾ ಪ್ರಾದೇಶಿಕ ಭಾಷೆಯಲ್ಲಿಯೇ ಹಲವು ದಾಖಲಾತಿಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದೆ.
ಥೆರಪಿ ಪೂರ್ವದಲ್ಲಿಯೇ ಪ್ಲಾಸ್ಮಾ ಥೆರಪಿಗೆ ರಕ್ತ ನೀಡಿದ ವ್ಯಕ್ತಿ, ಥೆರಪಿಗೆ ಒಳಗಾಗುವ ಸೋಂಕಿತನ ಮಾಹಿತಿ, ಥೆರಪಿಯ ಪ್ರತಿ ಹಂತದ ಮಾಹಿತಿಯನ್ನು ದಾಖಲಿಸಬೇಕಾಗುತ್ತದೆ. ಆ ಎಲ್ಲ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ ನೀಡಲಾಗಿದೆ. ಐಸಿಎಂಆರ್ ಸೂಚನೆಗೆ ತಕ್ಕ ರೀತಿಯಲ್ಲಿ ಪ್ಲಾಸ್ಮಾ ಥೆರಪಿಗೆ “ಕಿಮ್ಸ್ ‘ ಸಜ್ಜಾಗಿದೆಯಾದರೂ ಸದ್ಯದ ಸ್ಥಿತಿಯಲ್ಲಿ ಪ್ಲಾಸ್ಮಾ ಥೆರಪಿಗೆ ಮುಂದಾಗುವಂತಹ ಗಂಭೀರ ಸ್ಥಿತಿಯ ಸೋಂಕಿತರು ಇಲ್ಲಿಲ್ಲ ಎಂದು ಹೇಳಲಾಗುತ್ತಿದೆ.
“ಕಿಮ್ಸ್’ ಆಯ್ಕೆ ಹೆಮ್ಮೆಯ ಸಂಗತಿ ಪ್ಲಾಸ್ಮಾ ಥೆರಪಿ ಪ್ರಯೋಗ ಅಧ್ಯಯನಕ್ಕೆ ಐಸಿಎಂಆರ್ ದೇಶದ 21 ಕೇಂದ್ರಗಳನ್ನು ಆಯ್ಕೆ ಮಾಡಿದೆ. ಅದರಲ್ಲಿ “ಕಿಮ್ಸ್ ‘ ಸಹ ಒಂದಾಗಿರುವುದು ಹೆಮ್ಮೆಯ ಸಂಗತಿ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದಲ್ಲಿ ಇನ್ನು ನಾಲ್ಕೈದು ಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ನೀಡಬಹುದು. ಸದ್ಯಕ್ಕಂತೂ ಪ್ಲಾಸ್ಮಾ ಥೆರಪಿಗೆ “ಕಿಮ್ಸ್ ‘ ಸಜ್ಜಾಗಿದೆ. ಇಲ್ಲೇ ಚಿಕಿತ್ಸೆ ಪಡೆದು ಸೋಂಕಿನಿಂದ ಗುಣಮುಖರಾಗಿರುವ ವ್ಯಕ್ತಿಯೊಬ್ಬರು ಪ್ಲಾಸ್ಮಾ ಥೆರಪಿಗೆ ರಕ್ತ ನೀಡಲು ಒಪ್ಪಿದ್ದು, ನಾಳೆ ಇಲ್ಲವೇ ನಾಡಿದ್ದು ರಕ್ತ ಪಡೆಯಲಾಗುವುದು. ಸದ್ಯದ ಸ್ಥಿತಿಯಲ್ಲಿ ಪ್ಲಾಸ್ಮಾ ಥೆರಪಿಗೆ ಮುಂದಾಗುವಂತಹ ಗಂಭೀರ ಸ್ವರೂಪದ ಸೋಂಕಿತರು ಇಲ್ಲ. ಮುಂದೆ ಅಂತಹ ಸ್ಥಿತಿ ನಿರ್ಮಾಣಗೊಂಡರೂ ಅದಕ್ಕೆ ತಕ್ಕ ರೀತಿಯಲ್ಲಿ “ಕಿಮ್ಸ್ ‘ ಸಜ್ಜಾಗಲಿದೆ. -ಡಾ| ರಾಮಲಿಂಗಪ್ಪ ಅಂಟರತಾನಿ, ಕಿಮ್ಸ್ ನಿರ್ದೇಶಕರು