ಬೆಂಗಳೂರು: ನಿಯಮಬಾಹಿರ ನೇಮಕಾತಿ ವಜಾಗೊಳಿಸುವಂತೆ ಕಿಮ್ಸ್ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ ಮೂರು ದಿನ ಪೂರೈಸಿದ್ದು, ಹೋರಾಟ ತೀವ್ರಗೊಳಿಸಲು ಪ್ರತಿಭಟನಾ ನಿರತರು ತೀರ್ಮಾನಿಸಿದ್ದಾರೆ.
ಬುಧವಾರದಿಂದ ಸರದಿ ಉಪವಾಸ ಆರಂಭಿಸಿರುವ ಕಿಮ್ಸ್ ಸಿಬ್ಬಂದಿ, ಇನ್ನೆರೆಡು ದಿನದಲ್ಲಿ ಆಡಳಿತ ಮಂಡಳಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಿಬ್ಬಂದಿ ಪ್ರತಿಭಟನೆ ಹಿನ್ನೆಲೆಯಲ್ಲಿ ಬುಧವಾರವೂ ರೋಗಿಗಳು ಪರದಾಡಿದರು.
ಅವಿಶ್ವಾಸ ಮತ: ಈಮಧ್ಯೆ, ಅಧ್ಯಕ್ಷ ಹಾಗೂ ಕಾರ್ಯದರ್ಶಿ ವಿರುದ್ಧ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು ಅವಿಶ್ವಾಸ ಮತ ವ್ಯಕ್ತಪಡಿಸಿ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಬೆಟ್ಟೇಗೌಡ, ಕಾರ್ಯದರ್ಶಿ ಪ್ರೊ.ನಾಗರಾಜ ಮತ್ತು ಖಜಾಂಚಿ ಕಾಳೇಗೌಡ ಅವರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿಗೌಡ ಮಾತನಾಡಿ, ಪ್ರಸ್ತುತ ಇರುವ ಅಧ್ಯಕ್ಷ ಬೆಟ್ಟೇಗೌಡ, ಕಾರ್ಯದರ್ಶಿ ಪ್ರೊ.ನಾಗರಾಜ ಹಾಗೂ ಖಜಾಂಚಿ ಕಾಳೇಗೌಡ ಅವರನ್ನು ವಜಾಗೊಳಿಸಬೇಕು ಎಂದು 19ರಿಂದ 20 ನಿರ್ದೇಶಕರು ಸಹಿ ಹಾಕಿರುವ ಪತ್ರವನ್ನು ಸಂಘಕ್ಕೆ ನೀಡಲಾಗಿದೆ. ಇದಕ್ಕೆ ಸಂಘದ ಖಜಾಂಚಿ ಕಾಳೇಗೌಡ ಕೂಡ ಸಹಿ ಹಾಕಿದ್ದಾರೆ ಎಂದರು.
ಕಳೆದ 6 ತಿಂಗಳ ಹಿಂದೆ 450 ಸಿಬ್ಬಂದಿಯನ್ನು ವಜಾಗೊಳಿಸಿ ಪುನಃ 450 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿತ್ತು. ಈಗ ಅಕ್ರಮವಾಗಿ ಮತ್ತಷ್ಟು ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಇಷ್ಟೊಂದು ಸಿಬ್ಬಂದಿ ನೇಮಿಸುವ ಅಗತ್ಯವಿರಲಿಲ್ಲ. ಸಿಬ್ಬಂದಿ ನೇಮಕಕ್ಕೆ ಸಂಘದ ಸದಸ್ಯರು ಹಣ ಪಡೆದಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಸಂಘದ ಅಧ್ಯಕ್ಷರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ತಾತ್ಕಾಲಿಕ ಒಪಿಡಿಯಲ್ಲಿ ಸೇವೆ ವೈದ್ಯ, ಸಿಬ್ಬಂದಿ ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರ ಕೂಡ ತಾತ್ಕಾಲಿಕ ಒಪಿಡಿಯಲ್ಲೇ
100ಕ್ಕೂ ಅಧಿಕ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿದರು. ಈ ವೇಳೆ 900ಕ್ಕೂ ಅಧಿಕ ರೋಗಿಗಳು ಸೇವೆ ಪಡೆದರು. ದೂರದ ಊರುಗಳಿಂದ ಆಗಮಿಸಿದ ರೋಗಿಗಳು ಮಾಹಿತಿ ಅಭಾವ ದಿಂದ ವೈದ್ಯರನ್ನು ಕಾಣಲು ಪರದಾಡಿದರು.
ಶೋಕಾಸ್ ನೋಟಿಸ್‌ಗೆ ಉತ್ತರ ಮಂಗಳವಾರ ನೀಡಿದ್ದ ಶೋಕಾಸ್ ನೋಟಿಸ್‌ಗೆ ಉತ್ತರಿಸಿರುವ ಒಕ್ಕಲಿಗರ ಸಂಘದ ನೌಕರರ ಸಂಘದ ಅಧ್ಯಕ್ಷ ಡಾ.ವಿನೋದ್ ಕುಮಾರ್, ನಾನು ಪ್ರೇರೇಪಿಸಿದ್ದರಿಂದ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿಲ್ಲ. ಅವರೇ ಸ್ವಇಚ್ಛೆಯಿಂದ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿಭಟನೆ ಬಗ್ಗೆ 20 ದಿನಗಳ ಹಿಂದೆಯೇ ತಿಳಿಸಿದ್ದೆವು ಎಂದು ಹೇಳಿದ್ದಾರೆ.