ಶಿವಮೊಗ್ಗ: ಭದ್ರಾವತಿಯಲ್ಲಿ ನಡೆದ ಗಲಾಟೆ ವಿಚಾರವಾಗಿ ಬಿಜೆಪಿ ಮುಖಂಡರು ನೀಡುತ್ತಿರುವ ಪಟ್ಟಿಯ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಪೊಲೀಸರು ಬಿಜೆಪಿ ಕಾರ್ಯಕರ್ತರ ರೀತಿ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನೀಡುತ್ತಿರುವ ಪಟ್ಟಿಯ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಶಾಸಕ ಸಂಗಮೇಶ್ ಮತ್ತು ಅವರ ಕುಟುಂಬದ ಮೇಲೆ ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಸಂಗಮೇಶ್ ಬೆಂಗಳೂರಿನಲ್ಲಿರುವ ಕಾರಣ ಏನು ಬೇಕಾದರೂ ನಡೆಸಬಹುದು ಎಂದಿದ್ದರೆ ಇಂದೇ ಇದಕ್ಕೆಲ್ಲಾ ಅಂತ್ಯ ಹಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರಿಗೆ ಭದ್ರಾವತಿಯಲ್ಲಿ ಬೆಳೆ ತೆಗೆಯಲು ಸಾಧ್ಯವಾಗುತ್ತಿಲ್ಲ. ಗ್ರಾಪಂ, ತಾಪಂ, ಜಿಪಂ ಸದಸ್ಯರಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಠೇವಣಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನ ಪಡುತ್ತಿದ್ದಾರೆ.ಇದಕ್ಕೆ ಪೊಲೀಸ್ ಇಲಾಖೆ ಸಹಕಾರ ಕೊಡುತ್ತಿದೆ ಎಂದು ದೂರಿದರು. ಭದ್ರಾವತಿಯಲ್ಲಿ ಕಾಂಗ್ರೆಸ್‌ನವರು ಏರ್ಪಡಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಬಿಜೆಪಿಯವರು ಯಾಕೆ ಭಾಗವಹಿಸಬೇಕಿತ್ತು. ಗಲಾಟೆ ಮಾಡಿಸುವುದಕ್ಕಾಗಿಯೇ ಅವರು ಭಾಗಿಯಾಗಿದ್ದಾರೆ. ಈಗಾಗಲೇ ಹಲವರನ್ನು ಬಂಧಿ ಸಿ ಕರೆದುಕೊಂಡು ಹೋಗಿದ್ದಾರೆ. ಬಿಜೆಪಿಯವರು ಕೊಟ್ಟ ಪಟ್ಟಿಯ ಮೇಲೆ ಪೊಲೀಸರು ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದರು.
ಭದ್ರಾವತಿಯಲ್ಲಿ ಜೆಡಿಎಸ್, ಕಾಂಗ್ರೆಸ್, ಪಕ್ಷೇತರಗಳ ನಡುವೆ ಸ್ಪರ್ಧೆ ಇದೆಯೇ ಹೊರತು ಬಿಜೆಪಿಯ ಹೆಸರೇ ಅಲ್ಲಿಲ್ಲ. ಭದ್ರಾವತಿಯ ಚುನಾವಣೆಯ ಇತಿಹಾಸದಲ್ಲಿ ಬಿಜೆಪಿಯ ಒಬ್ಬನೇ ಒಬ್ಬ ಗ್ರಾಪಂ, ತಾಪಂ, ಜಿಪಂ, ಶಾಸಕರೂ ಗೆದ್ದಿಲ್ಲ. ಅಷ್ಟೇಕೆ ಮಾಜಿ ಸಂಸದ ಆಯನೂರು ಮಂಜುನಾಥ್ ಅವರಿಗೂ ಕೂಡ ಭದ್ರಾವತಿ ಕ್ಷೇತ್ರದಲ್ಲಿ ಮತಗಳು ಸಿಕ್ಕಿಲ್ಲ ಎಂದು ಟೀಕಿಸಿದರು. ಶಾಸಕ ಸಂಗಮೇಶ್ ಹಾಗೂ ಅವರ ಕುಟುಂಬದವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದನ್ನು ಹಿಂಪಡೆಯಬೇಕು. ಮಾಜಿ ಶಾಸಕ ಅಪ್ಪಾಜಿ ಗೌಡ ಅವರು ಇಲ್ಲ, ಈಗ ಸಂಗಮೇಶ್ ಒಬ್ಬರೇ ಆಗಿದ್ದಾರೆ. ಹಾಗಾಗಿ ಅವರನ್ನು ಮಣಿಸಬಹುದು ಎಂದು ಅಂದುಕೊಂಡಿದ್ದರೆ ಅದು ತಪ್ಪು ಎಂದು ಕಿಮ್ಮನೆ ಎಚ್ಚರಿಕೆ ನೀಡಿದರು.
ಭದ್ರಾವತಿಯಲ್ಲಿ ಪೊಲೀಸರು ಸುಳ್ಳು ಕೇಸ್ ದಾಖಲಿಸುತ್ತಿರುವುದನ್ನು ವಿರೋಧಿ ಸಿ ಮಾ.9 ರಂದು ಜಿಲ್ಲಾ ಕಾಂಗ್ರೆಸ್‌ನಿಂದ ಶಿವಮೊಗ್ಗ ಜಿಲ್ಲಾ ಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಪಂ ಸದಸ್ಯ ಕಲಗೋಡು ರತ್ನಾಕರ್, ಕಾಂಗ್ರೆಸ್ ಮುಖಂಡರಾದ ಚಂದ್ರೇಗೌಡ, ವಿಜಯ್ ಕುಮಾರ್, ಪಾಲಿಕೆ ಸದಸ್ಯ ಎಚ್.ಸಿ. ಯೋಗೇಶ್ ಮತ್ತಿತರರು ಇದ್ದರು.