ಕುಂಬಳೆ: ಜೋಡುಕಲ್ಲಿನಲ್ಲಿ ರಸ್ತೆ ಬದಿಯಲ್ಲಿದ್ದ ಗೂಡಂಗಡಿ ಬೆಂಕಿಗಾಹುತಿಯಾದ ಘಟನೆ ಜು.13ರಂದು ರಾತ್ರಿ ಸಂಭವಿಸಿದೆ. ಇಲ್ಲಿದ್ದ ಎರಡು ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡಿದ್ದು, ಸ್ಥಳೀಯ ನಿವಾಸಿಗಳ ಭೀತಿಗೆ ಕಾರಣವಾಯಿತು. ಆದರೆ ಹೆಚ್ಚಿನ ಅಪಾಯ ಉಂಟಾಗಲಿಲ್ಲ.
ಕುಂಡಚ್ಚಕಟ್ಟೆ ಶಾಂತಿಯೋಡಿಯ ಅಬೂಬಕ್ಕರ್ ಅವರ ಗೂಡಂಗಡಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಗುರುವಾರ ರಾತ್ರಿ ಸುಮಾರು 10 ಗಂಟೆಗೆ ಗೂಡಂಗಡಿ ಮುಚ್ಚಿ ತೆರಳಿದ್ದರು. 10.30ಕ್ಕೆ ಭಾರೀ ಶಬ್ದದೊಂದಿಗೆ ಸ್ಫೋಟ ಕೇಳಿಬಂದಾಗ ಸ್ಥಳೀಯರು ಸ್ಥಳಕ್ಕೆ ತಲುಪಿ ಉಪ್ಪಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.
ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸೇರಿ ಬೆಂಕಿಯನ್ನು ಆರಿಸಿದರು. ಗೂಡಂಗಡಿಯಲ್ಲಿ ಒಟ್ಟು ಮೂರು ಸಿಲಿಂಡರ್ ಇದ್ದುದರಲ್ಲಿ ಎರಡು ಸ್ಫೋಟಗೊಂಡು ಛಿದ್ರಗೊಂಡಿವೆ. ಮತ್ತೊಂದು ಸ್ಫೋಟದ ರಭಸಕ್ಕೆ ಸಮೀಪದ ದೀಪಕ್ ಅವರ ಮನೆಯ ಗೇಟಿಗೆ ಬಡಿದಿದೆ. ಇದರಿಂದ ಗೇಟಿಗೆ ಹಾನಿಯಾಗಿದೆ. ಟರ್ಪಾಲು, ಮಡಲು ಹಾಕಿ ನಿರ್ಮಿಸಿದ ಈ ಗೂಡಂಗಡಿಯು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಸಮೀಪದ ಮರಗಳು ಕೂಡ ಕರಟಿವೆ. ಬೆಂಕಿಗೆ ಕಾರಣ ತಿಳಿದು ಬಂದಿಲ್ಲ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.