Advertisement

ಕಿಲ್ಲಿಂಗ್‌ ಸ್ಟೋರಿಗೊಂದು ಥ್ರಿಲ್ಲಿಂಗ್‌ ಟ್ವಿಸ್ಟ್‌

09:38 AM Aug 25, 2019 | Team Udayavani |

ವಿಸ್ಮಯ ಸಾವಿನ ಹಿಂದಿನ ಸತ್ಯವೇನು? ಅದು ಕೊಲೆನಾ, ಆ್ಯಕ್ಸಿಡೆಂಟಾ ಅಥವಾ ಅದಕ್ಕೂ ಮಿಗಿಲಾದ ರಹಸ್ಯವಿದೆಯಾ? ಇನ್ಸ್‌ಪೆಕ್ಟರ್‌ ಅಶೋಕ್‌ ಬೇರೆ ಬೇರೆ ಆಯಾಮದಿಂದ ತನಿಖೆ ನಡೆಸುತ್ತಿರುತ್ತಾರೆ. ಹೇಗೆ ತನಿಖೆ ನಡೆಸಿದರೂ, ಎಲ್ಲೋ ಒಂದು ಕಡೆ ತನಿಖೆಯ ಮೂಲ ಅಂಶ ಮಿಸ್‌ ಆಗುತ್ತಿರುತ್ತದೆ. ಹಾಗಾದರೆ, ವಿಸ್ಮಯ ಸಾವಿನ ಹಿಂದಿನ ರಹಸ್ಯವೇನು? ಪದೇ ಪದೇ ತನಿಖೆಯ ವ್ಯಾಪ್ತಿಗೆ ಸಿಗದೇ “ಆಟ’ವಾಡಿಸುತ್ತಿದ್ದ ಆ ಅಂಶ ಯಾವುದು ಎಂಬ ಕುತೂಹಲ ನಿಮಗಿದ್ದರೆ ನೀವು “ನನ್ನ ಪ್ರಕಾರ’ ಸಿನಿಮಾ ನೋಡಬಹುದು.

Advertisement

ಚಿತ್ರರಂಗಕ್ಕೆ ಬರುತ್ತಿರುವ ಒಂದಷ್ಟು ಹೊಸಬರು, ಹೊಸ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಒಂದಷ್ಟು ಹೊಸದಾಗಿ ಯೋಚಿಸಿ, ಅದನ್ನು ಪ್ರೇಕ್ಷಕರಿಗೆ ನೀಡುತ್ತಾರೆ. “ನನ್ನ ಪ್ರಕಾರ’ ಕೂಡಾ ಅದೇ ಸಾಲಿನಲ್ಲಿ ಸಿಗುವ ಸಿನಿಮಾ. ಒಂದು ಥ್ರಿಲ್ಲರ್‌ ಜಾನರ್‌ ಸಿನಿಮಾವನ್ನು ಎಷ್ಟು ಕುತೂಹಲಭರಿತವಾಗಿ ಮಾಡಬಹುದೋ, ಆ ಕೆಲಸವನ್ನು ನೀಟಾಗಿ ಮಾಡಿದ್ದಾರೆ ನಿರ್ದೇಶಕ ವಿನಯ್‌ ಬಾಲಾಜಿ. ಇದು ಗಟ್ಟಿ ಚಿತ್ರಕಥೆಯನ್ನು ಆಧರಿಸಿರುವ ಸಿನಿಮಾ.

ಇಲ್ಲಿ ಸಾಕಷ್ಟು ಘಟನೆಗಳು, ಸನ್ನಿವೇಶಗಳು ಬರುತ್ತವೆ. ಒಂದು ದೃಶ್ಯದ ಲಿಂಕ್‌ ತಪ್ಪಿದರೂ ಸಿನಿಮಾದ ಮಜಾ ಹೊರಟು ಹೋಗುತ್ತದೆಂಬ ಎಚ್ಚರಿಕೆಯೊಂದಿಗೆ ನಿರ್ದೇಶಕರು ಸಿನಿಮಾ ಮಾಡಿರುವುದರಿಂದ ಯಾವುದೇ ಗೊಂದಲವಿಲ್ಲದೇ, “ನನ್ನ ಪ್ರಕಾರ’ ನೋಡಿಸಿಕೊಂಡು ಹೋಗುತ್ತದೆ. ತನಿಖೆಯ ಮೂಲ ಅಂಶ ಬಿಚ್ಚಿಕೊಳ್ಳುವವರೆಗೆ ಪ್ರೇಕ್ಷಕರು ಬೇರೆ ಬೇರೆ ಲೆಕ್ಕಾಚಾರದೊಂದಿಗೆ ಈ ಸಿನಿಮಾವನ್ನು ನೋಡುತ್ತಿರುತ್ತಾರೆ. ಪ್ರೇಕ್ಷಕರ ಪ್ರಕಾರ ಒಂದ ಟ್ರ್ಯಾಕ್‌ನಲ್ಲಿ ಕಥೆ ನಡೆದರೆ, ನಿರ್ದೇಶಕರು ತಮ್ಮದೇ ಪ್ರಕಾರ ಕಥೆಗೊಂದು ಅಂತ್ಯ ಕೊಟ್ಟಿದ್ದಾರೆ.

ಒಂದು ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ, ಲೆಕ್ಕಾಚಾರ, ಪ್ರಶ್ನೆಗಳನ್ನು ಮೂಡಿಸಬೇಕು. ಆ ಕೆಲಸವನ್ನು “ನನ್ನ ಪ್ರಕಾರ’ ಮಾಡಿದೆ. ಇಡೀ ಸಿನಿಮಾವನ್ನು ತುಂಬಾ ಸೀರಿಯಸ್‌ ಆಗಿ ಕಟ್ಟಿಕೊಡಲಾಗಿದೆ. ಆರಂಭದಲ್ಲಿ ಸಣ್ಣ ಗೊಂದಲವಾದರೂ, ಅದನ್ನು ಬೆಳೆಯಲು ಬಿಡದೇ ಕೂಡಲೇ ಬಗೆಹರಿಸಿ, ಮತ್ತೂಂದು ಥ್ರಿಲ್ಲರ್‌ ಅಂಶವನ್ನು ಬಿಚ್ಚಿಡುತ್ತಾರೆ. ಚಿತ್ರದ ದ್ವಿತೀಯಾರ್ಧದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಚಿತ್ರದ ವೇಗ ಇನ್ನಷ್ಟು ಹೆಚ್ಚುತ್ತಿತ್ತು.

ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಕಿಶೋರ್‌, ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಖಡಕ್‌ ಲುಕ್‌ನಲ್ಲೇ ಇಷ್ಟವಾಗುತ್ತಾರೆ. ಡಾಕ್ಟರ್‌ ಆಗಿ ಪ್ರಿಯಾಮಣಿ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಮಯೂರಿಗೆ ಇಲ್ಲಿ ಎರಡು ಶೇಡ್‌ ಇರುವ ಪಾತ್ರ ಸಿಕ್ಕಿದ್ದು, ಮತ್ತೂಮ್ಮೆ ತಾನು ಪ್ರತಿಭಾನ್ವಿತ ನಟಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಉಳಿದಂತೆ ನಿರಂಜನ್‌ ದೇಶಪಾಂಡೆ, ಪ್ರಮೋದ್‌ ಶೆಟ್ಟಿ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.

Advertisement

ಚಿತ್ರ: ನನ್ನ ಪ್ರಕಾರ
ನಿರ್ಮಾಣ: ಗುರುರಾಜ್‌ ಎಸ್‌
ನಿರ್ದೇಶನ: ವಿನಯ್‌ ಬಾಲಾಜಿ
ತಾರಾಗಣ: ಕಿಶೋರ್‌, ಪ್ರಿಯಾಮಣಿ, ಮಯೂರಿ, ಪ್ರಮೋದ್‌ ಶೆಟ್ಟಿ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next