ಕ್ವೆಟ್ಟಾ: ಬಲೂಚಿಸ್ತಾನ್ ನಲ್ಲಿರುವ ಪಾಕಿಸ್ತಾನದ ಎರಡು ಸೇನಾ ನೆಲೆಯ ಮೇಲೆ ದಾಳಿ ಮಾಡಿ ನೂರಕ್ಕೂ ಅಧಿಕ ಸೈನಿಕರನ್ನು ಹತ್ಯೆಗೈದಿರುವುದಾಗಿ ಉಗ್ರ ಸಂಘಟನೆಯಾದ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಗುರುವಾರ (ಫೆ-03) ತಿಳಿಸಿದೆ.
ಇದನ್ನೂ ಓದಿ:ರಾಹುಲ್ ನಿಮ್ಮ ಸ್ಕ್ರಿಫ್ಟ್ ರೈಟರ್ ಚೀನಾದವರೋ ಅಥವಾ ಪಾಕಿಸ್ತಾನದವರೋ: ಬಿಜೆಪಿ ಸಂಸದ ರಾಥೋಡ್
ಪಾಕಿಸ್ತಾನದ ಪಂಜ್ ಗುರ್ ಮತ್ತು ನೌಷ್ಕಿ ಮಿಲಿಟರಿ ನೆಲೆಗಳ ಹೆಚ್ಚಿನ ಭಾಗ ತಮ್ಮ ನಿಯಂತ್ರಣದಲ್ಲಿಯೇ ಇದ್ದಿರುವುದಾಗಿ ಉಗ್ರಗಾಮಿ ಸಂಘಟನೆ ಬಿಎಲ್ ಎ ಇಂದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಎರಡೂ ಸೇನಾ ನೆಲೆಯ ಬಹುತೇಕ ಭಾಗ ಸಂಪೂರ್ಣವಾಗಿ ನಾಶವಾಗಿ ಹೋಗಿವೆ. ಪಾಕಿಸ್ತಾನದ ಸೇನೆಗೆ ಶಿಬಿರದೊಳಗೆ ನುಗ್ಗಿದ ಆತ್ಮಾಹುತಿ ಬಾಂಬ್ ದಾಳಿಕೋರರನ್ನು ತಡೆಯಲು ಸಾಧ್ಯವಾಗಿಲ್ಲ ಎಂದು ವಿವರಿಸಿದೆ.
ದಾಳಿಯ ಸುದ್ದಿಯ ಪ್ರಸಾರವನ್ನು ತಡೆ ಹಿಡಿಯುವ ನಿಟ್ಟಿನಲ್ಲಿ ಮಾಧ್ಯಮ ಮತ್ತು ದೃಶ್ಯಮಾಧ್ಯಮಗಳ ನೆಟ್ ವರ್ಕ್ ಸಂಪರ್ಕಗಳನ್ನು ಪಾಕಿಸ್ತಾನ ಕಡಿತಗೊಳಿಸಿರುವುದಾಗಿ ಬಲೂಚ್ ಲಿಬರೇಷನ್ ಆರ್ಮಿ ಆರೋಪಿಸಿದೆ.
ಬಲೂಚಿ ಲಿಬರೇಷನ್ ಆರ್ಮಿಯ ಆತ್ಮಾಹತ್ಯಾ ಬಾಂಬ್ ದಾಳಿಕೋರರನ್ನು ಪಾಕ್ ಸೇನೆ ಸಮರ್ಥವಾಗಿ ಎದುರಿಸಿ, ಹೆಚ್ಚಿನ ಅನಾಹುತ ತಪ್ಪಿಸಿದೆ ಎಂಬ ಹೇಳಿಕೆ ಸುಳ್ಳು ಎಂದು ಬಿಎಲ್ ಎ ದೂರಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇಂದು ಚೀನಾಕ್ಕೆ ತೆರಳುವ ಮುನ್ನ ಬಲೂಚಿಸ್ತಾನದಲ್ಲಿ ಪಾಕ್ ನ ಎರಡು ಸೇನಾ ನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಪಾಕ್ ಯೋಧ ಹಾಗೂ ನಾಲ್ವರು ಉಗ್ರರು ಸಾವನ್ನಪ್ಪಿರುವುದಾಗಿ ಈ ಮೊದಲು ಪಾಕಿಸ್ತಾನ ಸೇನೆ ಮಾಧ್ಯಮಗಳಿಗೆ ತಿಳಿಸಿತ್ತು.