Advertisement

ಶ್ರದ್ಧಾಭಕ್ತಿಯ ಕಿಕ್ಕೇರಮ್ಮ ದೇವಿ ಬ್ರಹ್ಮರಥೋತ್ಸವ

03:21 PM Apr 09, 2022 | Team Udayavani |

ಕಿಕ್ಕೇರಿ: ಗ್ರಾಮದ ಕಿಕ್ಕೇರಮ್ಮನವರ ಬ್ರಹ್ಮ ರಥೋತ್ಸವ ಭಕ್ತಸಾಗರದ ಮಧ್ಯೆ ವಿಜೃಂಭಣೆಯಿಂದ ನಡೆಯಿತು.

Advertisement

ಶುಕ್ರವಾರ ಮುಸ್ಸಂಜೆ ಮಹಾಮಾತೆ ಕಿಕ್ಕೇರಮ್ಮನವರ ಬ್ರಹ್ಮ ರಥವನ್ನು ಸಹಸ್ರಾರು ಭಕ್ತರು ಎಳೆದರು. ಉಘೇ.. ಲಕ್ಕಮ್ಮ ಉಘೇ.. ಎಂಬ ಘೋಷಣೆ ಮುಗಿಲು ಮುಟ್ಟಿತ್ತು.

ಸತತ 2 ವರ್ಷದಿಂದ ಕೊರೊನಾದಿಂದ ಸ್ಥಗಿತಗೊಂಡಿದ್ದ ರಥೋತ್ಸವದಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಕಿಕ್ಕೇರಮ್ಮನವರ ಅಡ್ಡೆ ದೇವಿ ಆದ ಚಿಕ್ಕಮ್ಮ ದೇವಿಯನ್ನು ಗುಡಿ ಸುತ್ತ ಪ್ರದಕ್ಷಿಣೆ ಹಾಕಿಸಲಾಯಿತು. ನಂತರ ಹೊಸಬೀದಿ, ರಥಬೀದಿ, ಕೋಟೆ ಗಣಪತಿ, ಕೆ.ಎಸ್‌.ನರಸಿಂಹಸ್ವಾಮಿ ಬೀದಿ, ಬ್ರಹ್ಮೇಶ್ವರ ದೇಗುಲ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮಸ್ಥರು ದೇವಿಗೆ ಹಣ್ಣು, ಕಾಯಿ ಅರ್ಪಿಸಿ, ದೀಪಧಾರತಿ ಬೆಳಗಿದರು.

ನಂತರ ರಥಬೀದಿಗೆ ಸಾಗಿದ ಮೆರವಣಿಗೆ ರಥದ ಸುತ್ತ ಪ್ರದಕ್ಷಿಣೆ ಮಾಡಲಾಯಿತು. ಅಮ್ಮನವರನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ, ಅಗ್ರ ಪೂಜೆ ಸಲ್ಲಿಸಲಾಯಿತು. ರಥೋತ್ಸವಕ್ಕೂ ಮುನ್ನ ಬ್ರಾಹ್ಮಿ ಮುಹೂರ್ತದಲ್ಲಿ ಮೂಲದೇವಿ, ಅಡ್ಡೆದೇವಿ ಚಿಕ್ಕಮ್ಮನವರಿಗೆ ಗಂಗಾಜಲಾ ಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಿ, ವಿವಿಧ ವಸ್ತ್ರ, ಆಭರಣಗಳಿಂದ ಅಲಂಕರಿಸಿ, ವಿವಿಧ ಪರಿಮಳ ಪುಷ್ಪಗಳಿಂದ ಶೃಂಗಾರ ಮಾಡಲಾಗಿತ್ತು.

ರಥೋತ್ಸವ ಸಾಗಲು ಪ್ರಾರ್ಥನೆ: ಗುಡಿಯಿಂದ ಕಳಶವನ್ನು ಹೊತ್ತುಕೊಂಡು ವಿಶ್ವಕರ್ಮ ಪಾರಿಚಾರಕರು ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಗ್ರಾಮ ಸುತ್ತ ಪ್ರದಕ್ಷಿಣೆ, ಬಲಿ ಪೂಜಾ ಮೆರವಣಿಗೆ ಮಾಡಲಾಯಿತು. ರಥಕ್ಕೆ ಸಾರತಿ ದೇವರನ್ನು ಕೂರಿಸಿ ನಿರ್ವಿಘ್ನವಾಗಿ ರಥೋತ್ಸವ ಸಾಗಲು ಪ್ರಾರ್ಥಿಸಲಾಯಿತು. ನಾದಸ್ವರ, ಮಂಗಳವಾದ್ಯದೊಂದಿಗೆ ಸಾಗಿದ ರಥದ ಹಿಂದೆ ಮುಂದೆ ಭಕ್ತರ ದಂಡು ನೆರೆದಿತ್ತು. ಹೊರ ರಾಜ್ಯ ಮಹಾರಾಷ್ಟ್ರ, ಮುಂತಾದ ಕಡೆಯಿಂದ ಸಹಸ್ರಾರು ಭಕ್ತರು ಜಮಾಯಿಸಿದ್ದರು.  ರಥ ಸಾಗುವ ಬೀದಿಯ ಇಕ್ಕೆಲಗಳಲ್ಲಿ ಭಕ್ತರು ಹಣ್ಣು ದವನ ಎಸೆದು ಭಕ್ತಿ ಮೆರೆದರು.

Advertisement

ಪಾನಕ, ಮಜ್ಜಿಗೆ ವಿತರಣೆ: ರಥೋತ್ಸವದ ಅಂಗವಾಗಿ ವಿವಿಧ ಸಂಘ ಸಂಸ್ಥೆಯವರು, ಗ್ರಾಮಸ್ಥರು ಅರವಟ್ಟಿಗೆ, ನೀರು, ಮಜ್ಜಿಗೆ, ಪಾನಕ ನೀಡುವ ಮೂಲಕ ಬಿಸಿಲಿನಿಂದ ಬಸವಳಿದ ಭಕ್ತರ ದಾಹ ನೀಗಿಸಿದರು. ಸಚಿವ ಕೆ.ಸಿ.ನಾರಾಯಣಗೌಡ ಸೇರಿ ವಿವಿಧ ಪಕ್ಷಗಳ ಮುಖಂಡರು, ಲಕ್ಷ್ಮೀಪುರ ಗ್ರಾಮದ ದೇವಿಯ ಒಕ್ಕಲಿನ ಬೂನಾಸಿ, ಕೆಂಚಮ್ಮ, ದೊಡ್ಡಹಟ್ಟಿ, ಮಾರಮ್ಮ ವಠಾರದ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next