Advertisement

ಕಿದು: ಕೃಷಿ ಮೇಳ ಉದ್ಘಾಟನೆ

11:34 AM Nov 11, 2018 | Team Udayavani |

ಕಡಬ: ಬಿಳಿನೆಲೆ ಗ್ರಾಮದ ನೆಟ್ಟಣ ಸಿಪಿಸಿಆರ್‌ಐ (ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆ) ಕಿದು ಫಾರಂ ನಲ್ಲಿ 2 ದಿನಗಳ ಕಾಲ ಜರಗುವ ಕೃಷಿ ಮೇಳ ಹಾಗೂ ಕೃಷಿ ವಸ್ತುಪ್ರದರ್ಶನಕ್ಕೆ ಶನಿವಾರ ಬೆಳಗ್ಗೆ ಸಂಭ್ರಮದ ಚಾಲನೆ ದೊರಕಿತು.

Advertisement

ಅತಿಥಿಗಳನ್ನು ಆಕರ್ಷಕ ಚಂಡೆ ವಾದನದೊಂದಿಗೆ ಪೂರ್ಣಕುಂಭ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಯಿತು. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಕೃಷಿಮೇಳವನ್ನು 
ಉದ್ಘಾಟಿಸಿದರೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮುಖ್ಯ ಅತಿಥಿಯಾಗಿ ಆಗಮಿಸಿ ಕೃಷಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.

ಉದ್ಘಾಟನ ಸಮಾರಂಭಕ್ಕಾಗಿ ನಿರ್ಮಿಸಲಾಗಿದ್ದ ಆಕರ್ಷಕ ಪೆಂಡಾಲ್‌ನಲ್ಲಿ ಕಿಕ್ಕಿರಿದು ನೆರೆದಿದ್ದ ಜನರು ಸಭಾ ಕಾರ್ಯಕ್ರಮದಲ್ಲಿ ಪೂರ್ತಿಯಾಗಿ ಪಾಲ್ಗೊಂಡರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾ|ಗಳಿಂದ ದೊಡ್ಡ ಸಂಖ್ಯೆಯಲ್ಲಿ ಕೃಷಿಕರು ಆಗಮಿಸಿದ್ದರೆ, ರಾಜ್ಯದ ಇತರೆಡೆಯಿಂದಲೂ ಕೃಷಿಕರು ಆಗಮಿಸಿ ಕೃಷಿ ಮೇಳದಲ್ಲಿ ಪಾಲ್ಗೊಂಡರು. ಕೇರಳ, ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಿಂದಲೂ ಕೃಷಿಕರು ಭಾಗವಹಿಸಿರುವುದು ವಿಶೇಷವಾಗಿತ್ತು.

ಅಡಿಕೆ ಆರೋಗ್ಯಕರ
ಇತ್ತೀಚಿನ ದಿನಗಳಲ್ಲಿ ಅಡಿಕೆ ಆರೋಗ್ಯಕ್ಕೆ ಹಾನಿಕರ ಎನ್ನುವ ಸುದ್ದಿಯಿಂದಾಗಿ ಅಡಿಕೆ ಬೆಳೆಗಾರರು ಆತಂಕಿತರಾಗಿದ್ದಾರೆ. ಆದರೆ ಅಡಿಕೆ ಹಾನಿಕಾರಕವಲ್ಲ, ಬದಲಾಗಿ ಆರೋಗ್ಯಕ್ಕೆ ಪೂರಕ ಎನ್ನುವ ಅಂಶ ಅಧ್ಯಯನಗಳಿಂದ ರುಜುವಾತಾಗಿದೆ. ಅಡಿಕೆ ಬೆಳೆಗಾರರ ಪರವಾಗಿ ಕೇಂದ್ರ ಸರಕಾರ ಬೆಂಬಲವಾಗಿ ನಿಲ್ಲಲಿದೆ. ಅಡಿಕೆ ಬೆಳೆಗಾರರು ಹೆದರಬೇಕಿಲ್ಲ ಎಂದು ತಮ್ಮ ಉದ್ಘಾಟನ ಭಾಷಣದಲ್ಲಿ ಹೇಳಿದಾಗ ಸಭಿಕರ ಕರತಾಡನದ ಮೂಲಕ ಹರ್ಷ ವ್ಯಕ್ತಪಡಿಸಿದರು. 

ಡಾ| ಹೆಗ್ಗಡೆ ಮನವಿಗೆ ಸಚಿವ ಡಿ.ವಿ. ಸ್ಪಂದನೆ
ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಸಂಶೋಧನ ಕೇಂದ್ರದ ಜಮೀನಿನ ಲೀಸ್‌ ಅವಧಿ ಮುಗಿದಿರುವುದರಿಂದ ಕೇಂದ್ರವನ್ನು ಮುಚ್ಚಿಸಿ ಜಮೀನನ್ನು ಮತ್ತೆ ಅರಣ್ಯ ಇಲಾಖೆಯ ಸುಪರ್ಧಿಗೆ ನೀಡಬೇಕು ಎನ್ನುವ ಅಧಿಕಾರಿಗಳನ್ನು ಇಲ್ಲಿಗೆ ಕರೆತಂದು ವಾಸ್ತವವನ್ನು ಅವರಿಗೆ ಅರ್ಥ ಮಾಡಿಸಬೇಕು ಎಂದು ಹೇಳಿದರು.

Advertisement

ಡಾ| ಹೆಗ್ಗಡೆಯವರ ಮಾತಿಗೆ ತನ್ನ ಭಾಷಣದಲ್ಲಿ ಪ್ರತಿಕ್ರಿಯಿಸಿದ ಸಚಿವ ಸದಾನಂದ ಗೌಡರು ಖಾವಂದರ ಸೂಚನೆಯನ್ನು ಅದೇಶ ಎಂದು ಪರಿಗಣಿಸಿದ್ದೇನೆ. ಈಗಾಗಲೇ ಕೇಂದ್ರದ ಅರಣ್ಯ ಸಚಿವರೊಂದಿಗೆ ಸಿಪಿಸಿಆರ್‌ಐ ನಿದೇರ್ಶಕ ಡಾ| ಚೌಡಪ್ಪ ಅವರ ಉಪಸ್ಥಿತಿಯಲ್ಲಿ ಮಾತುಕತೆ ನಡೆಸಲಾಗಿದ್ದು, ಅವರ ಸಕಾರಾತ್ಮಕವಾಗಿ ಸ್ಪಂದಿಸಿ ದ್ದಾರೆ. ಯಾವುದೇ ಕಾರಣಕ್ಕೂ ಕಿದು ಸಂಶೋಧನ  ಕೇಂದ್ರ ಸ್ಥಳಾಂತರ ಅಥವಾ ಮುಚ್ಚುಗಡೆಯಾಗಲು ಬಿಡಲಾರೆ ಎಂದು ಹೆಗ್ಗಡೆಯವರ ಮುಂದೆ ಪ್ರಮಾಣ ಮಾಡುತ್ತಿದ್ದೇನೆ ಎಂದು ಅವರು ಹೇಳಿದಾಗ ಸೇರಿದ್ದ ಕೃಷಿಕರು ಹರ್ಷೋದ್ಘಾರದೊಂದಿಗೆ ಅವರ ಮಾತನ್ನು ಸ್ವಾಗತಿಸಿದರು.

ಮಾಹಿತಿ ಪೂರ್ಣ ವಿಚಾರ ಸಂಕಿರಣಗಳು
ಉದ್ಘಾಟನ ಸಮಾರಂಭದ ಬಳಿಕ ಜರಗಿದ ಕೃಷಿ ವಿಚಾರ ಸಂಕಿರಣಗಳಲ್ಲಿ ಆಸಕ್ತ ಕೃಷಿಕರು ಉತ್ಸಾಹದಿಂದ ಭಾಗವಹಿಸಿದರು. ಪ್ರಥಮ ಅವಧಿಯಲ್ಲಿ ಸಂಪನ್ಮೂಲವ್ಯಕ್ತಿಗಳಾಗಿ ಆಗಮಿಸಿದ ಕೃಷಿ ವಿಜ್ಞಾನಿಗಳಾದ ಡಾ| ವಿ. ನಿರಾಲ್‌ ಹಾಗೂ ಡಾ| ಕೆ.ಸಂಶುದ್ದೀನ್‌ ಅವರು ಜೀವ ವೈವಿಧ್ಯತೆಯ ಸಂರಕ್ಷಣೆ ಹಾಗೂ ಬಳೆಗಳ ವೈವಿಧ್ಯತೆಯ ಪ್ರದರ್ಶನ ಎನ್ನುವ ವಿಷಯದ ಕುರಿತು ಕಾರ್ಯಾಗಾರವನ್ನು ನಡೆಸಿಕೊಟ್ಟರು. ದ್ವಿತೀಯ ಅವಧಿಯಲ್ಲಿ ಸಂಪನ್ಮೂಲವ್ಯಕ್ತಿಗಳಾಗಿದ್ದ ಡಾ| ಕೆ.ಬಿ.ಹೆಬ್ಟಾರ್‌ ಹಾಗೂ ಡಾ| ಎಂ.ಆರ್‌. ಮಣಿಕಂಠನ್‌ ಅವರು ತೋಟದ ಬೆಳೆಗಳಲ್ಲಿ ಮೌಲ್ಯ ವರ್ಧನೆ ಹಾಗೂ ಉದ್ಯಮಗಳ ಅಭಿವೃದ್ಧಿ ಎನ್ನುವ ವಿಷಯದಲ್ಲಿ ವಿಚಾರ ಸಂಕಿರಣ ನಡೆಸಿಕೊಟ್ಟರು.

ಶ್ಲಾಘನೆ 
ಈ ನಿಟ್ಟಿನಲ್ಲಿ ಸಿಪಿಸಿಆರ್‌ಐ ವೈದ್ಯರು, ವಿಜ್ಞಾನಿಗಳು, ಬೆಳೆಗಾರರು, ಬಳಕೆ ದಾರರು, ಮಾರಾಟಗಾರರು ಹಾಗೂ ನ್ಯಾಯವಾದಿ ಗಳನ್ನು ಸೇರಿಸಿ ‘ಅಡಿಕೆ ಮತ್ತು ಮಾನವನ ಆರೋಗ್ಯ’ ಎನ್ನುವ ವಿಚಾರ ಸಂಕಿರಣ ಏರ್ಪಡಿಸಿ ಅಡಿಕೆ ಬಳಕೆಯಿಂದ ಮನುಷ್ಯ ಆಸೋಗ್ಯ ಮೇಲಾಗುವ ಲಾಭಗಳನ್ನು ಪ್ರಕಟಿಸಿ ಅಡಿಕೆಯ ಮೇಲಿದ್ದ ಅಪವಾದವನ್ನು ದೂರ ಮಾಡಿರುವುದು ಮಾತ್ರವಲ್ಲದೇ ಅಡಿಕೆಯ ಮೌಲ್ಯವರ್ಧನೆ ಮತ್ತು ಉತ್ಪನ್ನಗಳ ವೈವಿಧ್ಯತೆಗಳ ಬಗ್ಗೆ ಸಂಶೋಧನೆಗಳನ್ನು ಪ್ರಾರಂಭಿಸಿರುವುದು ಉತ್ತಮ ಬೆಳವಣಿಗೆ ಎಂದು ಸಚಿವ ಡಿವಿಎಸ್‌ ಶ್ಲಾಘಿಸಿದರು.

ಈ ಕೇಂದ್ರ ಉಳಿಯಬೇಕು
ಬಿಳಿನೆಲೆಯ ಕಿದು ಸಿಪಿಸಿಆರ್‌ಐ ಕೇಂದ್ರವನ್ನು ಯಾವ ಬೆಲೆ ತೆತ್ತಾದರೂ ಉಳಿಸಿಕೊಳ್ಳಬೇಕಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಜಿಲ್ಲೆಯ ಮುಖವಾಣಿಯಾಗಿ ಕೇಂದ್ರ ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಗೆ ಬಿಳಿನೆಲೆ ಸಿಪಿಸಿಆರ್‌ಐ ಕೇಂದ್ರದ ಮಹತ್ವವನ್ನು ಮನವರಿಕೆ ಮಾಡಬೇಕು.
– ಡಾ| ಡಿ.ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next