Advertisement

ರೈತರ ಗಮನ ಸೆಳೆದ ಕಿದು ಕೃಷಿ ಮೇಳ; ವಸ್ತು ಪ್ರದರ್ಶನ

10:10 PM Oct 12, 2019 | mahesh |

ಸುಬ್ರಹ್ಮಣ್ಯ: ಕೃಷಿ ತಂತ್ರಜ್ಞಾನ, ಆಧುನಿಕ ಕೃಷಿ, ಯಂತ್ರೋಪಕರಣಗಳ ಜತೆಗೆ ತೆಂಗು, ಅಡಿಕೆ ಮತ್ತು ಕೊಕ್ಕೋ ಬೆಳೆಗಳ ಸಂಶೋಧನೆಗಳ ಮೂಲಕ ವಿಶೇಷ ವೈವಿಧ್ಯವನ್ನು ತೆರೆದಿಟ್ಟಿದೆ ನೆಟ್ಟಣದ ಕಿದುವಿನ ಅಂತಾರಾಷ್ಟ್ರೀಯ ಕೇಂದ್ರಿಯ ತೋಟದ ಬೆಳೆಗಳ ಸಂಶೋಧನ ಕೇಂದ್ರದಲ್ಲಿ ಶನಿವಾರ ಆರಂಭಗೊಂಡ ಕೃಷಿ ಮೇಳ. ಕೃಷಿ ಮತ್ತು ಪೂರಕ ವಸ್ತು ಪ್ರದರ್ಶನ ರೈತರು, ಉದ್ಯಮಿಗಳು, ನಾಗರಿಕರನ್ನು ಆಕರ್ಷಿಸುತ್ತಿವೆ.

Advertisement

ಮೇಳದಲ್ಲಿ ಕೃಷಿಗೆ ಪೂರಕವಾಗಿರುವ ಹಲವು ಯಂತ್ರಗಳು ಪ್ರದರ್ಶನ ಮತ್ತು ಮಾರಾಟಕ್ಕಿವೆ. 82 ವಸ್ತು ಪ್ರದರ್ಶನ ಮಳಿಗೆಗಳಿವೆ. ಅಡಿಕೆ, ತೆಂಗು ಬೆಳೆಯುವ ಕೃಷಿಕರಿಗೆ ಬೇಕಾಗಿರುವ ಕೃಷಿ ಯಂತ್ರ, ಕಬ್ಬಿನ ಹಾಲು ತೆಗೆಯುವ ಯಂತ್ರ, ಗೃಹಪಯೋಗಿ ವಸ್ತುಗಳು ರೈತರು ಬೆಳೆಯುವ ಸಾವಯವ ಪ್ಲಾಸ್ಟಿಕ್‌ ಚೀಲ ಸಹಿತ ವಿವಿಧ ಬಗೆಯ ವಸ್ತುಗಳು ಆಕರ್ಷಿಸುತ್ತಿವೆ. ಹನಿ, ತುಂತುರು ನೀರಾವರಿ, ಸಬ್‌ ಮರ್ಸಿಬಲ್‌ ಪಂಪ್‌, ಬೋರ್‌ವೆಲ್‌ಗೆ ಅಳವಡಿಸುವ ಉಪಕರಣ, ವಿದ್ಯುತ್‌ ಉಳಿತಾಯ ಉಪಕರಣ, ಗ್ಯಾಸ್‌ನಿಂದ ಆಗುವ ತೊಂದರೆ ನೀಗಿಸುವ ಉಪಕರಣಗಳ ಪ್ರದರ್ಶನ, ಮಾರಾಟ ಉತ್ತಮವಾಗಿ ನಡೆಯುತ್ತಿದೆ. ಕೇರಳ ಹಾಗೂ ರಾಜ್ಯದ ವಿವಿಧ ತಳಿಯ ಸಸಿಗಳು, ಫಲಪುಷ್ಪಗಳು ಆಕರ್ಷಿಸುತ್ತಿವೆ.

ಇಂದು ಸಂಜೆಯ ವರೆಗೂ ಪ್ರದರ್ಶನ
ಮಳಿಗೆಗಳಲ್ಲಿ ರವಿವಾರವೂ ಬೆಳಗ್ಗೆ 7ರಿಂದ ಸಂಜೆ 7ರ ತನಕ ಕೃಷಿ ಪ್ರದರ್ಶನ ನಡೆಯಲಿದೆ. ಪ್ರದರ್ಶನದಲ್ಲಿ ಕೃಷಿ ಬೆಳೆಗಳು, ಯಂತ್ರೋಪಕರಣ, ಕೃಷಿ ಸಂರಕ್ಷಣೆ, ರಸಗೊಬ್ಬರಗಳು ಮತ್ತು ಕೀಟನಾಶಕಗಳ ಪ್ರದರ್ಶನ, ತೋಟಗಾರಿಕೆ, ನಗರ ಕೃಷಿ, ಹೈಡ್ರೋಫೋನಿಕ್ಸ್‌, ಪ್ಯಾಕೇಜಿಂಗ್‌, ಬೀಜಗಳು ಮತ್ತು ಸಸಿಗಳು, ಮೌಲ್ಯವರ್ಧನೆ, ರೈತರ ಅಭಿವೃದ್ಧಿಗಾಗಿ ಇರುವ ಸರಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರದರ್ಶನಗಳೂ ಇವೆ.

ಸಾಂಪ್ರದಾಯಿಕ ಸಿಂಗಾರ
ಕೃಷಿ ಮೇಳ ಮತ್ತು ಪ್ರದರ್ಶನದಲ್ಲಿ ರೈತರು, ಸಂಶೋಧಕರು, ವ್ಯಾಪಾರ ಮಳಿಗೆಗಳು, ವಿತರಕರು, ಕೃಷಿ ವ್ಯವಸ್ಥಾಪಕರು, ಕೃಷಿ ಉತ್ಪಾದಕ ಸಂಸ್ಥೆ, ಸರಕಾರಿ ಇಲಾಖೆ ಸಿಬಂದಿ, ಸ್ವಸಹಾಯ ಸಂಘಗಳು, ಎನ್‌ಜಿಒಗಳು, ಎಂಎಸ್‌ಎಂಇ ಹಾಗೂ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಕೃಷಿ ಮೇಳ ಹಾಗೂ ಕೃಷಿ ವಸ್ತು ಪ್ರದರ್ಶನದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಂಶೋಧಕರು, ಕೃಷಿ ತಂತ್ರಜ್ಞರು ಆಗಮಿಸುತಿದ್ದು, ಕೃಷಿ ಸಂಬಂಧಿಸಿ ಮಾಹಿತಿಗಳನ್ನು ತಜ್ಞರಿಂದ ಪಡೆದುಕೊಳ್ಳುತ್ತಿದ್ದಾರೆ. ಕೇಂದ್ರದ ಸುತ್ತ ಅಡಿಕೆ, ಸೀಯಾಳ ಪೋಣಿಸಿ ಸಾಂಪ್ರದಾಯಿಕ ರೀತಿಯಲ್ಲಿ ಸಿಂಗರಿಸಲಾಗಿದೆ.

ವಿಚಾರಗೋಷ್ಠಿಗೂ ಆದ್ಯತೆ
ಕೃಷಿ ಚಟುವಟಿಕೆ ಪೂರಕ ಉಪಕರಣಗಳು, ನಿತ್ಯೋಪಯೋಗಿ ವಸ್ತುಗಳು, ಆಯುರ್ವೇದಿಕ್‌ ಔಷಧ, ಗೃಹಪಯೋಗಿ ವಸ್ತುಗಳ ಪ್ರದರ್ಶನ, ಮಾರಾಟ ನಡೆಯುತ್ತಿದೆ. ಮೇಳದಲ್ಲಿ ವಿಚಾರ ಸಂಕಿರಣ, ಕೃಷಿ, ತೋಟಗಾರಿಕೆ, ಪುಷೊದ್ಯಮ ವಿಚಾರವಾಗಿ ಗೋಷ್ಠಿ ನಡೆಯಲಿದೆ. ಶನಿವಾರ ಮಳೆಕೊಯ್ಲು ಪದ್ಧತಿ, ಮಣ್ಣು ಸಂರಕ್ಷಣೆ ವಿಚಾರಗೋಷ್ಠಿಗಳು ನಡೆದವು. ವಿಜ್ಞಾನಿಗಳಾದ ಡಾ| ರಾಜೇಂದ್ರ ಪ್ರಸಾದ್‌, ಮೋಹನ್‌ ವಿಚಾರಗೋಷ್ಠಿ ನಡೆಸಿಕೊಟ್ಟರು. ಕೃಷಿಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಯುವ ಕೃಷಿಕರಿಗಾಗಿ ರಶಪ್ರಶ್ನೆ, ಪ್ರಬಂಧ ಸ್ಪರ್ಧೆಗಳು ನಡೆದಿರುವುದು ವಿಶೇಷ.

Advertisement

ಪರಿಹಾರಕ್ಕೆ ಶ್ರಮ
ಯುವ ಕೃಷಿಕರನ್ನು ಉತ್ತೇಜಿಸಲು ಈ ಬಾರಿ ವಿದ್ಯಾರ್ಥಿಗಳನ್ನು ಹೆಚ್ಚು ತೊಡಗಿಸಿಕೊಳ್ಳಲಾಗಿದೆ. ಯುವಕರು ಕೃಷಿ ಕ್ಷೇತ್ರದ ಕಡೆಗೆ ಬರುವಂತೆ ಕಾರ್ಯಕ್ರಮ ರೂಪಿಸಲಾಗಿದ್ದು, ಹಲವು ಸೂತ್ರಗಳ ಕುರಿತು ಮೇಳದಲ್ಲಿ ಚರ್ಚೆ ನಡೆದು ಪರಿಹಾರಕ್ಕೆ ಶ್ರಮಿಸಲಾಗುವುದು.
– ಡಾ| ಅನಿತಾ ಕರೂರ್‌, ಐಸಿಎಆರ್‌ ನಿರ್ದೇಶಕಿ

 ಕೃಷಿ ಪದ್ಧತಿ ಸಂತಸದಾಯಕ
ಕೃಷಿ ಮೇಳದಲ್ಲಿ ಭಾಗವಹಿಸಿ ಹಲವು ವಿಚಾರಗಳನ್ನು ಅರಿತುಕೊಂಡೆ. ಹಳ್ಳಿ ಬದುಕಿನ ಚಿತ್ರಣವು ಕಣ್ಣ ಮುಂದೆ ಬಂತು. ಕೃಷಿ ಜವನ ಪದ್ಧತಿ ನಿಜಕ್ಕೂ ಸಂತಸದಾಯಕ.
– ಹರಿಚಂದನ್‌, ಸುಬ್ರಹ್ಮಣ್ಯ ಕಾಲೇಜು ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next