Advertisement
ಅಮ್ಮನ ಒಡವೆ ಮಾರಿ ಬಿಜಿನೆಸ್ ಶುರು ಬಿಗ್ ಕಿಡ್ಸ್ ಕೆಂಪ್ ಮಳಿಗೆಯ ವ್ಯವಸ್ಥಾಪಕ ನಿರ್ದೇಶಕ ಕಂ ಮಾಲೀಕರ ಹೆಸರು ವಶಿ ಮೇಲ್ವಾನಿ. ಇವರು ದಶಕಗಳಿಂದಲೂ ಬೆಂಗಳೂರಿನಲ್ಲಿಯೇ ಇದ್ದವರು. 1948ರಲ್ಲಿ, ತಮ್ಮ ತಾಯಿಯ ಒಡವೆಗಳನ್ನು ಮಾರಿ, ಅದರಿಂದ ಬಂದ ಹಣದಿಂದ ಮಕ್ಕಳ ಬಟ್ಟೆ ಮಾರಾಟದ ಬಿಜಿನೆಸ್ ಆರಂಭಿಸಿದರು. ಹೀಗೆ, ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಆರಂಭವಾದ ಮಳಿಗೆಯ ಹೆಸರು- “ಕಿಡ್ಡೀಸ್ ಕಾರ್ನರ್’.
1985ರ ಕಾಲವನ್ನು ವಿವರಿಸಿ ಹೇಳಬೇಕೆ? ಆಗೆಲ್ಲ ಮನರಂಜನೆಗೆ ಇದ್ದ ಏಕೈಕ ಮಾರ್ಗವೆಂದರೆ ದೂರದರ್ಶನ. ಕಾಟೂìನ್ ನೆಟ್‌ವರ್ಕ್ ಜನಪ್ರಿಯವಾಗಿದ್ದೂ ಆ ಕಾಲದಲ್ಲಿಯೇ. ದೂರದರ್ಶನದಲ್ಲಿ ವಾರಕ್ಕೆರಡು ಬಾರಿ ಕೇವಲ ಅರ್ಧ ಗಂಟೆ ಮಾತ್ರ ಕಾಟೂìನ್ ಪ್ರಸಾರವಾಗುತ್ತಿದ್ದುದನ್ನೂ, ಅದನ್ನು ಮಕ್ಕಳು ಮುಗಿಬಿದ್ದು ನೋಡುತ್ತಿದ್ದುದನ್ನೂ ವಶಿ ಮೇಲ್ವಾನಿ ಗಮನಿಸಿದರು. ಆನಂತರ ಅವರು ತಡಮಾಡಲಿಲ್ಲ. ಒಂದಷ್ಟು ನೌಕರರನ್ನು ಆಯ್ಕೆ ಮಾಡಿಕೊಂಡರು. ಅವರಿಗೆ ವಿಶೇಷವಾಗಿ ತರಬೇತಿ ಕೊಡಿಸಿದರು. ನಂತರ ಕಾಟೂìನ್ ನೆಟ್‌ವರ್ಕ್‌ನಲ್ಲಿ ಕಾಣುವಂಥ ವೇಷವನ್ನೇ ಆ ನೌಕರರಿಗೂ ತೊಡಿಸಿ, ಕಿಡ್ಸ್‌ಕೆಂಪ್‌ನ ಮುಂಭಾಗದಲ್ಲಿ ಡ್ಯಾನ್ಸ್ ಮಾಡಲು ಅವರನ್ನು ನಿಯೋಜಿಸಿಬಿಟ್ಟರು. ಟಿ.ವಿಯಲ್ಲಿ ಈ ಜಾಹೀರಾತು ಪದೇಪದೆ ಪ್ರಸಾರವಾಗುವಂತೆ ನೋಡಿಕೊಂಡರು. ಪರಿಣಾಮವಾಗಿ, ಕಾಟೂìನ್ ನೆಟ್‌ವರ್ಕ್ ವೇಷಧಾರಿಗಳ ಡ್ಯಾನ್ಸ್ ನೋಡಲೆಂದೇ ಕೆಂಪೇಗೌಡ ರಸ್ತೆಗೆ, ಅಲ್ಲಿನ ಕಿಡ್ಸ್ ಕೆಂಪ್ ಮಳಿಗೆಗೆ ಬರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಲೇ ಹೋಯಿತು. ಗ್ರಾಹಕರನ್ನು ನಿಭಾಯಿಸಲು ಆಗದಷ್ಟು “ರಶ್’ ಆದಾಗ, 1990ರಲ್ಲಿ ಎಂ.ಜಿ. ರಸ್ತೆಯ ಕೊನೆಯಲ್ಲಿದ್ದ ಟ್ರಿನಿಟಿ ಸರ್ಕಲ್‌ನಲ್ಲಿ ಬಿಗ್ ಕಿಡ್ಸ್ ಕೆಂಪ್ ಮಳಿಗೆ ಆರಂಭವಾಯಿತು.
Related Articles
ಈ ವೇಳೆಗೆ “ಕಿಡ್ಸ್ ಕೆಂಪ್’ ಎಂಬ ಹೆಸರು ರಾಜ್ಯಾದ್ಯಂತ ತಲುಪಿಬಿಟ್ಟಿತ್ತು. 20,000 ಚ.ಮೀ.ವಿಸ್ತಾರದ ಸ್ಥಳದಲ್ಲಿ ಬಿಗ್ ಕಿಡ್ಸ್ ಕೆಂಪ್ ಮಳಿಗೆ ಆರಂಭವಾದಾಗ, “ಓಹ್, ಇದೊಳ್ಳೆ ಫುಟ್‌ಬಾಲ್ ಫೀಲ್ಡ್‌ನಷ್ಟು ದೊಡ್ಡದಿದೆ’ ಎಂದು ಜನ ಉದ್ಗರಿಸಿದ್ದರು. ಈ ಶಾಪ್‌ನಲ್ಲೂ ಪ್ರಮುಖ ಆಕರ್ಷಣೆಯಾಗಿದ್ದುದು ಕಾಟೂìನ್ ನೆಟ್‌ವರ್ಕ್ ವೇಷಧಾರಿಗಳ ನರ್ತನವೇ. ಅಷ್ಟಲ್ಲದೆ, ಬಟ್ಟೆ ಖರೀದಿಗೆ ಬಂದವರಿಗೆಲ್ಲ ಉಚಿತವಾಗಿ ಜ್ಯೂಸ್ ಕೊಡುವ, ಮಕ್ಕಳಿಗೆ ತಪ್ಪದೇ ಐಸ್‌ಕ್ರೀಂ ಕೊಡುವ ಸೌಲಭ್ಯವನ್ನೂ ಕಿಡ್ಸ್ ಕೆಂಪ್‌ನ ಆಡಳಿತ ಮಂಡಳಿ ಒದಗಿಸಿತು. ಅಷ್ಟೇ ಅಲ್ಲ, ಕಿಡ್ಸ್‌ಕೆಂಪ್‌ನಲ್ಲಿ ಬಟ್ಟೆ ಖರೀದಿಸಿದ ಕುಟುಂಬದ ಚಿತ್ರವನ್ನು ಟಿ.ವಿ ಹಾಗೂ ಪತ್ರಿಕಾ ಜಾಹೀರಾತಿನಲ್ಲಿ ಬಳಸಿಕೊಳ್ಳುವುದಕ್ಕೂ ವಶಿ ಮೇಲ್ವಾನಿ ಮುಂದಾದರು. ಪರಿಣಾಮ, ಕಿಡ್ಸ್ ಕೆಂಪ್‌ನಲ್ಲಿ ಶಾಪಿಂಗ್‌ಗೆ ಬಂದವರು, ನಂತರ ಅದನ್ನು ಹತ್ತು ಮಂದಿಗೆ ಹೆಮ್ಮೆಯಿಂದ ಹೇಳಿಕೊಂಡರು. ಆನಂತರದಲ್ಲಿ ಕಿಡ್ಸ್‌ಕೆಂಪ್ ಎಂಬುದು ಬಟ್ಟೆ ಮಾರಾಟದ ಸ್ಥಳ ಮಾತ್ರವಲ್ಲ, ಬೆಸ್ಟ್ ಪಿಕ್‌ನಿಕ್ ಸ್ಪಾಟ್ ಆಗಿಹೋಯಿತು. ಕಾಟೂìನ್ ವೇಷಧಾರಿಗಳೊಂದಿಗೆ ಕುಣಿಯುವುದು, ಅವರ ಕೈ ಕುಲುಕುವುದು ಮಕ್ಕಳ ಪಾಲಿನ ಥ್ರಿಲ್ಲಿಂಗ್ ಮೊಮೆಂಟ್ ಆಗಿಬಿಟ್ಟಿತು. ಇದು ಸಾಲದೆಂಬಂತೆ ಕಿಡ್ಸ್‌ಕೆಂಪ್‌ನ ಬಳಿ ಬರುತ್ತಿದ್ದಂತೆಯೇ ಬಸ್‌ನಲ್ಲಿದ್ದ ಮಕ್ಕಳು, ಕಿಟಕಿಯ ಬಳಿ ಬಂದು, ಕಿಡ್ಸ್ ಕೆಂಪ್ ಅಂಗಳದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವೇಷಧಾರಿಗಳತ್ತ ಕೈ ತೋರಿಸಿ, ಹೋ ಎಂದು ಕೂಗಿ ವಿಷ್ ಮಾಡುತ್ತಿದ್ದವು. ಮಕ್ಳು ಖುಷಿ ಪಡ್ತಿದಾರೆ. ಸ್ವಲ್ಪ ನಿಧಾನಕ್ಕೆ ಬಸ್ ಓಡಿಸಿ ಎಂದು ಪೋಷಕರು ಬಸ್ ಡ್ರೈವರ್‌ಗೆ ಮನವಿ ಮಾಡುತ್ತಿದ್ದರು!
Advertisement
ಆಟ ಮುಗೀತುಈಗ, ಅಂಥ ಎಲ್ಲ ಸಂಭ್ರಮಗಳಿಗೂ ತೆರೆ ಬಿದ್ದಿದೆ. “ಇಷ್ಟು ದಿನ ನಾವು ಬಿಜಿನೆಸ್‌ನ ಮಧ್ಯೆಯೇ ಕಳೆದುಹೋಗಿದ್ದೆವು. ನಮಗೀಗ ವಿಶ್ರಾಂತಿ ಬೇಕು ಅನ್ನಿಸಿದೆ. ಪ್ರವಾಸ ಮಾಡಬೇಕು, ಸಮಾಜಸೇವೆಗೆ ಮುಂದಾಗಬೇಕು, ಕುಟುಂಬದೊಂದಿಗೆ ಸಮಯ ಕಳೆಯಬೇಕು ಅನ್ನಿಸಿದೆ. ಈ ಕಾರಣದಿಂದಲೇ ಕಿಡ್ ಕೆಂಪ್ ಮಳಿಗೆಯನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮ ಸಂಸ್ಥೆಯಲ್ಲಿದ್ದ ಎಲ್ಲ 60 ನೌಕರರಿಗೂ ಬೇರೆ ಕಡೆಯಲ್ಲಿ ಕೆಲಸ ಕೊಡಿಸಿದ್ದೇವೆ. ಆ ಮೂಲಕ, ಕಿಡ್ಸ್ ಕೆಂಪ್ ಮುಚ್ಚಿದ್ದರಿಂದ ಯಾರಿಗೂ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ’ ಅಂದಿದ್ದಾರೆ ವಶಿ ಮೇಲ್ವಾನಿ ಹಾಗೂ ಅವರ ಮಗ ರವಿ ಮೇಲ್ವಾನಿ. ಹೌದು, 30 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ಬೃಹತ್ ಮನರಂಜನೆಯ ಆಟವೊಂದು ಈಗ ನಿಂತು ಹೋಗಿದೆ. ತನ್ನ ಅಚ್ಚುಮೆಚ್ಚಿನ ಆಟಿಕೆಯೊಂದನ್ನು ಕಳೆದುಕೊಂಡ ಕಂದನ ಮೊಗದಂತೆಯೇ ಬೆಂಗಳೂರಿನ, ಬೆಂಗಳೂರಿಗರ ಮನಸ್ಸು ಕಳೆಗುಂದಿದೆ… ಗ್ರಾಹಕರೆಲ್ಲಾ ಶ್ರೀಮಂತರೇ
ಬಿಗ್ ಕಿಡ್ಸ್ ಕೆಂಪ್‌ನಲ್ಲಿ ಎಲ್ಲ ವಯೋಮಾನದವರಿಗೂ ಹೊಂದುವಂಥ ರೆಡಿಮೇಡ್ ಬಟ್ಟೆಗಳು ದೊರೆಯುತ್ತಿದ್ದವು. ಆದರೆ, ಅವುಗಳ ಬೆಲೆ ದುಬಾರಿಯಾಗಿರುತ್ತಿತ್ತು. ಹೆಚ್ಚಾಗಿ, ಶ್ರೀಮಂತರು, ಉದ್ಯಮಿಗಳು ಹಾಗೂ ಅನಿವಾಸಿ ಭಾರತೀಯರೇ ಈ ಮಳಿಗೆಯ ಗ್ರಾಹಕರಾಗಿದ್ದರು. ಅವತ್ತಿನ ದಿನಗಳಲ್ಲಿ ಕಿಡ್ಸ್ ಕೆಂಪ್‌ನಲ್ಲಿ ಶಾಪಿಂಗ್ ಮಾಡುವುದೇ ಪ್ರತಿಷ್ಠೆಯ ವಿಷಯವಾಗಿತ್ತು. ಹಾಗಾಗಿ, ಮಧ್ಯಮ ವರ್ಗದ ಕುಟುಂಬದವರೂ ಕೆಲವೊಮ್ಮೆ ಅಲ್ಲಿ ಶಾಪಿಂಗ್ ಮಾಡುವ ರಿಸ್ಕ್ ತೆಗೆದುಕೊಂಡು, ಅದನ್ನು ತಿಂಗಳುಗಳ ಕಾಲ ನೆರೆಹೊರೆಯವರು ಹಾಗೂ ಬಂಧುಗಳೊಂದಿಗೆ ಹೇಳಿಕೊಂಡು ಸ್ಕೋಪ್ ತೆಗೆದುಕೊಳ್ಳುತ್ತಿದ್ದರು! ಅಲ್ಲಿದ್ದೆ ಅಂತ ಹೇಳ್ಕೊಳ್ಳೋಕೆ ಹೆಮ್ಮೆ
“ನಮ್ಮ ಎಂ.ಡಿ.ಗೆ ಈಗ 80 ವರ್ಷ. ಬಿಜಿನಸ್‌ಮನ್ ಆಗಿ ಅವರು ಯಶಸ್ಸಿನ ಉತ್ತುಂಗ ತಲುಪಿದ್ರು ಈಗ ವಿಶ್ರಾಂತಿ ಬಯಸಿದ್ದಾರೆ. ಎಂ.ಡಿ. ಸಾಹೇಬರ ಮಗ ರವಿ ಮೇಲ್ವಾನಿಯವರೇ ನಮ್ಮ ಸೆಕೆಂಡ್ ಬಾಸ್. ಅವರೀಗ ಅಧ್ಯಾತ್ಮದತ್ತ ಒಲವು ಹೊಂದಿದ್ದಾರೆ. ಸಮಾಜಸೇವೆಯಲ್ಲಿ ಅವರಿಗೆ ಹೆಚ್ಚಿನ ಆಸಕ್ತಿ. ಉಚಿತ ಸೇವೆ ನೀಡುವ ಆಸ್ಪತ್ರೆ ಆರಂಭಿಸಿದ್ದಾರೆ. ಮೋಟಿವೇಶನಲ್ ಸ್ಪೀಕರ್ ಆಗಿ ಹೆಸರು ಮಾಡಿದ್ದಾರೆ. ಅವರ ಮಕ್ಕಳು ಚಿಕ್ಕವರು, ಅವರೆಲ್ಲಾ ಓದುತ್ತಿದ್ದಾರೆ. ಇವೆಲ್ಲಾ ಕಾರಣದಿಂದ ಮಳಿಗೆಯನ್ನು ಮುಚ್ಚಲಾಗಿದೆ. ಎಲ್ಲ ವೈಭವವೂ ಒಂದು ದಿನ ಕೊನೆಯಾಗಲೇಬೇಕಲ್ವಾ? ಇಷ್ಟು ದಿನ, ಈ ಮಳಿಗೆಯ ನೌಕರರಲ್ಲಿ ನಾನೂ ಒಬ್ಬನಾಗಿದ್ದೆ ಅಂತ ಹೇಳಿಕೊಳ್ಳಲು ಹೆಮ್ಮೆ ಇದೆ…’ – ಕಿಡ್ಸ್ ಕೆಂಪ್ ಮಳಿಗೆಯ ನೌಕರರೊಬ್ಬರ ಮಾತು – ಮಣಿಕಾಂತ್