Advertisement

ಮೂತ್ರಪಿಂಡ ಕಾಯಿಲೆ: ಶೀಘ್ರ ಪತ್ತೆ ಹೇಗೆ?

03:34 PM Dec 25, 2022 | Team Udayavani |

ಈ ವರ್ಷದ ಮೂತ್ರಪಿಂಡ ದಿನವನ್ನು “ಎಲ್ಲರಿಗೂ ಮೂತ್ರಪಿಂಡಗಳ ಆರೋಗ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಯಿತು.

Advertisement

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಇರುವವರ ಜತೆಗೆ ಜನಸಾಮಾನ್ಯರಲ್ಲಿಯೂ ಮೂತ್ರಪಿಂಡದ ಆರೋಗ್ಯ, ಮೂತ್ರಪಿಂಡದ ಕಾಯಿಲೆಗಳ ಬಗ್ಗೆ ಜ್ಞಾನವನ್ನು ಹೆಚ್ಚಿಸುವ ಮೂಲಕ ಅರಿವನ್ನು ಹೆಚ್ಚಿಸುವತ್ತ ನಾವೆಲ್ಲರೂ ಜತೆಗೂಡಿ ಕೆಲಸ ಮಾಡಬೇಕು ಎಂಬುದು ಇದರ ಅರ್ಥ.

ಮೂತ್ರಪಿಂಡ ಕಾಯಿಲೆಗಳ ಬಗ್ಗೆ ಅರಿವು ಹೆಚ್ಚಾದರೆ ಅದರಿಂದಾಗಿ ಈ ಕಾಯಿಲೆಗಳ ಬಗ್ಗೆ ಹೆಚ್ಚು ಗಮನ ಹರಿಸಲು, ಬೇಗನೆ ಪತ್ತೆ ಹಚ್ಚಲು ಮತ್ತು ಬೇಗನೆ ಚಿಕಿತ್ಸೆ ಒದಗಿಸಲು, ಚೆನ್ನಾಗಿ ಆರೈಕೆ ಮಾಡಲು ಮತ್ತು ಅವುಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಬಹುಹಿಂದಿನಿಂದಲೂ ಪ್ರಚಲಿತದಲ್ಲಿರುವ “ರೋಗ ಬಂದ ಮೇಲೆ ಗುಣಪಡಿಸುವುದಕ್ಕಿಂತ ರೋಗ ಬಾರದಂತೆ ತಡೆಗಟ್ಟುವುದು ಮೇಲು’ ಎಂಬ ನೀತಿವಾಕ್ಯ ಮೂತ್ರಪಿಂಡಗಳ ಕಾಯಿಲೆಗಳ ವಿಚಾರದಲ್ಲಿಯೂ ಪ್ರಸ್ತುತವಾಗಿದೆ.

ಮೂತ್ರಪಿಂಡ ಕಾಯಿಲೆಗಳನ್ನು ಬೇಗನೆ ಪತ್ತೆ ಹಚ್ಚಿದರೆ ಅವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸಲು, ಗುಣಪಡಿಸಲು, ಅವು ಉಲ್ಬಣಿಸುವುದನ್ನು ನಿಧಾನಗೊಳಿಸಲು ಮಾತ್ರವಲ್ಲದೆ ಮೂತ್ರಪಿಂಡದ ಕಾಯಿಲೆಗಳ ಕೊನೆಯ ಹಂತವನ್ನು ಹೆಚ್ಚು ಚೆನ್ನಾಗಿ ನಿಭಾಯಿಸಲು ಕ್ರಮಗಳಿಗೆ ಸಿದ್ಧರಾಗಿರುವುದು ಸಾಧ್ಯವಾಗುತ್ತದೆ.

ದುರದೃಷ್ಟವಶಾತ್‌ ನಮ್ಮ ದೇಶದಲ್ಲಿ ಮೂತ್ರಪಿಂಡ ಕಾಯಿಲೆಗಳು ತುಂಬ ವಿಳಂಬವಾಗಿ ಪತ್ತೆಯಾಗುತ್ತಿರುವುದು ಅಂಕಿಅಂಶಗಳಿಂದ ತಿಳಿದುಬರುತ್ತದೆ.

Advertisement

ಆದ್ದರಿಂದ ಜನಸಾಮಾನ್ಯರಲ್ಲಿ ಮೂತ್ರಪಿಂಡ ಕಾಯಿಲೆಗಳ ಲಕ್ಷಣಗಳು ಮತ್ತು ಅವುಗಳನ್ನು ಬೇಗನೆ ಪತ್ತೆ ಮಾಡುವುದರ ಪ್ರಾಮುಖ್ಯದ ಬಗ್ಗೆ ತಿಳಿವಳಿಕೆಯನ್ನು ಮೂಡಿಸಿದರೆ ಹೆಚ್ಚು ಉತ್ತಮ ಫ‌ಲಿತಾಂಶವನ್ನು ಪಡೆಯಲು ಸಾಧ್ಯ.

ಬಹುತೇಕ ಮೂತ್ರಪಿಂಡ ಕಾಯಿಲೆಗಳಲ್ಲಿ ಆರಂಭಿಕ ಹಂತಗಳಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ ಅಥವಾ ತುಂಬಾ ಕನಿಷ್ಠವಾಗಿರುತ್ತವೆ. ಕೆಲವು ಆರಂಭಿಕ ಲಕ್ಷಣಗಳನ್ನು ಹೇಳುವುದಾದರೆ:

  1. ಕಾಲು ಮತ್ತು ಪಾದಗಳು ಊದಿಕೊಳ್ಳುವುದು (ಪಾದದ ಗಂಟುಗಳ ಸುತ್ತ, ಪಾದ ಮತ್ತು ಮೇಲ್ಭಾಗ). ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಎಡೇಮಾ ಎಂದು ಕರೆಯುತ್ತಾರೆ. ಪ್ರೊಟೀನೂರಿಯಾ (ಮೂತ್ರಪಿಂಡ ಕಾಯಿಲೆಗಳ ಪರಿಣಾಮವಾಗಿ ಮೂತ್ರದ ಮೂಲಕ ಹೆಚ್ಚು ಪ್ರಮಾಣದಲ್ಲಿ ಪ್ರೊಟೀನ್‌ ಸೋರಿಹೋಗುವುದು) ಹೊಂದಿರುವ ರೋಗಿಗಳಲ್ಲಿ ಈ ಲಕ್ಷಣ ಕಂಡುಬರುವುದು ಹೆಚ್ಚು. ಇದು ತೀವ್ರವಾದಾಗ ಹೊಟ್ಟೆ (ಅಸಿಟಿಸ್‌), ಶ್ವಾಸಕೋಶಗಳಲ್ಲಿ (ಪಲ್ಮನರಿ ಎಡೇಮಾ) ಕೂಡ ಊತ ಕಾಣಿಸಿಕೊಳ್ಳುತ್ತದೆ, ಇದರಿಂದ ಉಸಿರಾಟ ಕಷ್ಟವಾಗುತ್ತದೆ.
  2. ರಕ್ತಹೀನತೆ ಅಥವಾ ರಕ್ತದಲ್ಲಿ ಹಿಮೊಗ್ಲೋಬಿನ್‌ ಅಂಶ ಕಡಿಮೆಯಾಗುವುದು. ಮೂತ್ರಪಿಂಡ ಕಾಯಿಲೆಯಿಂದಾಗಿ ಎರಿತ್ರೊಪೊಯೆಟಿನ್‌ (ಹಿಮೊಗ್ಲೊಬಿನ್‌ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಪ್ರಧಾನ ಹಾರ್ಮೋನ್‌) ಉತ್ಪಾದನೆ ಕಡಿಮೆಯಾಗುವುದರಿಂದ ಹೀಗಾಗುತ್ತದೆ.
  3. ಹೊಟ್ಟೆ ತೊಳೆಸುವಿಕೆ, ವಾಂತಿ ಮತ್ತು ಆಹಾರ ರುಚಿಸದಿರುವುದು.
  4. ಅಧಿಕ ರಕ್ತದೊತ್ತಡ: ಇದು ಈಗಾಗಲೇ ಇರುವ ಅಧಿಕ ರಕ್ತದೊತ್ತಡ ಉಲ್ಬಣಿಸುವುದಾಗಿರಬಹುದು ಅಥವಾ ಹೊಸದಾಗಿ ಆರಂಭವಾದುದು ಆಗಿರಬಹುದು.
  5. ಮೂತ್ರದ ಲಕ್ಷಣಗಳು: ಇದು ಹಲವು ವಿಧಗಳಲ್ಲಿ ಕಾಣಿಸಿಕೊಳ್ಳಬಹುದು. ನೊಕೂrರಿಯಾ (ರಾತ್ರಿ ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆ) ಉಂಟಾಗಬಹುದು. ಇನ್ನೊಂದು ಸಾಮಾನ್ಯ ಲಕ್ಷಣವೆಂದರೆ ಮೂತ್ರ ನೊರೆ ಅಥವಾ ಬುರುಗು ಬರುವುದು (ಸಾಬೂನು ನೀರಿನಂತೆ). ಸೋಂಕಿನಿಂದಾಗಿ ಮೂತ್ರದಲ್ಲಿ ಹೆಚ್ಚು ಪ್ರೊಟೀನ್‌, ರಕ್ತದ ಅಂಶ ಅಥವಾ ಬಿಳಿ ರಕ್ತ ಕಣಗಳು/ಕೀವು ಇರುವುದರಿಂದ ಹೀಗಾಗುತ್ತದೆ.
  6. ಚರ್ಮ ಒಣಗುವುದು, ತುರಿಕೆಯಂತಹ ಚರ್ಮದ ಲಕ್ಷಣಗಳು.
  7. ದಣಿವು, ಶಕ್ತಿಗುಂದಿದಂತಿರುವುದು. ಮೂತ್ರಪಿಂಡ ಕಾಯಿಲೆಗಳ ಈ ಲಕ್ಷಣಗಳ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದರೆ ಬೇಗನೆ ವೈದ್ಯಕೀಯ ಸಹಾಯ ಪಡೆಯಲು ಸಾಧ್ಯವಾಗುತ್ತದೆ, ಈ ಮೂಲಕ ದೀರ್ಘ‌ಕಾಲೀನವಾಗಿ ರೋಗ ಉಲ್ಬಣಿಸುವುದನ್ನು ತಡೆಯುವುದು ಅಥವಾ ವಿಳಂಬಿಸುವುದಕ್ಕೆ ಸಹಾಯವಾಗುತ್ತದೆ.

-ಡಾ| ಮಯೂರ್‌ ವಿ. ಪ್ರಭು, ಕನ್ಸಲ್ಟಂಟ್‌ ನೆಫ್ರಾಲಜಿಸ್ಟ್‌, ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ನೆಫ್ರಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next