Advertisement
ಮಂಗಳವಾರ ಮಧ್ಯಾಹ್ನ ವೇಳೆ ಸುರತ್ಕಲ್ ಮತ್ತು ಮಂಗಳೂರಿನ ಕಾಲೇಜುಗಳ ಕೆಲವು ಪೋಷಕರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು “ನಿಮ್ಮ ಮಕ್ಕಳನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆದೊಯ್ಯುತ್ತಿದ್ದೇವೆ. ಬಿಡುಗಡೆ ಮಾಡಬೇಕಾದರೆ ಸಹಾಯ ಮಾಡುತ್ತೇವೆ. 5 ಲ.ರೂ. ನೀಡಿ’, “ನಿಮ್ಮ ಮಕ್ಕಳು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಅದರಿಂದ ರಕ್ಷಿಸಲು ಸಹಾಯ ಮಾಡುತ್ತೇವೆ.’ ಎಂಬಿತ್ಯಾದಿಯಾಗಿ ಹೇಳಿ ಕರೆ ಮಾಡಿದ್ದಾರೆ. ಇದನ್ನು ನಂಬಿದ ಕೆಲವು ಪೋಷಕರು ಸ್ವಲ್ಪ ಸಮಯ ಆತಂಕಕ್ಕೆ ಒಳಗಾದರು. ಕೆಲವರು ಕಾಲೇಜಿಗೆ ಕರೆ ಮಾಡಿ ವಿಚಾರಿಸಿದರೆ, ಇನ್ನು ಕೆಲವರು ನೇರವಾಗಿ ಕಾಲೇಜಿಗೆ ಹೋಗಿ ವಿಚಾರಿಸಿದ್ದಾರೆ. ಬಳಿಕ ಇದೊಂದು ನಕಲಿ ಕರೆ ಎಂಬುದು ಗೊತ್ತಾಗಿದೆ.ಈ ರೀತಿ ಕರೆ ಸ್ವೀಕರಿಸಿದವರೆಲ್ಲರೂ ಪ್ರಥಮ ಪಿಯುಸಿ ಮಕ್ಕಳ ಪೋಷಕರು. ಕರೆ ಮಾಡಿದವರು ಹಿಂದಿ ಭಾಷೆಯಲ್ಲಿ ಮಾತನಾಡಿದ್ದರು.
ಓರ್ವ ಪೋಷಕರಿಗೆ ಕರೆ ಮಾಡಿದ ಅಪರಿಚಿತರು “ನಿಮ್ಮ ಮಗನನ್ನು ಅಪಹರಿಸಲಾಗಿದೆ. ಅವನನ್ನು ಬಿಡಿಸಿಕೊಡಬೇಕಾದರೆ 5 ಲಕ್ಷ ರೂ. ಹಣ ನೀಡಿ’ ಎಂಬುದಾಗಿ ಹೇಳಿದ್ದಾರೆ. ಇದನ್ನು ಕೇಳಿ ಆತಂಕಕ್ಕೊಳಗಾದ ಅವರು ಕಾಲೇಜಿಗೆ ತೆರಳಿ ವಿಚಾರಿಸಿದರು. ಇದೇ ರೀತಿ ಇತರ ಕೆಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹೆತ್ತವರಿಗೂ ಇಂತಹ ಕರೆ ಬಂದಿರುವುದು ಅನಂತರ ಗೊತ್ತಾಗಿದೆ.
Related Articles
Advertisement
ಪಿಯುಸಿಗೆ ಸೇರ್ಪಡೆಯಾದವರಿಗೆ ಕರೆಫೋನ್ ಕರೆ ಸ್ವೀಕರಿಸಿದವರಲ್ಲಿ ಬಹುತೇಕರು ಪ್ರಥಮ ಪಿಯುಸಿ ಮಕ್ಕಳ ಹೆತ್ತವರು. ಶಾಲೆಯಲ್ಲಿ ಯಾವ ಮೊಬೈಲ್ ಸಂಖ್ಯೆ ನೀಡಲಾಗಿದೆಯೋ ಅದೇ ಸಂಖ್ಯೆಗೆ ಫೋನ್ ಮಾಡಿದ್ದಾರೆ. ಮಾತ್ರವಲ್ಲದೆ ಶಾಲೆಯ ದಾಖಲೆ ಪತ್ರಗಳಲ್ಲಿ ಯಾವ ರೀತಿ ವಿದ್ಯಾರ್ಥಿಗಳ ಮತ್ತು ತಂದೆ-ತಾಯಿಯ ಹೆಸರು ನೀಡಲಾಗಿದೆಯೋ ಅದೇ ರೀತಿ ಕರೆ ಮಾಡಿದಾಗಲೂ ತಿಳಿಸಿದ್ದಾರೆ. ಆದುದರಿಂದ ಇವರಿಗೆ ಈ ಎಲ್ಲ ಮಾಹಿತಿಗಳು ಎಲ್ಲಿ ಸೋರಿಕೆಯಾಗಿದೆ ಎಂಬುದೇ ಮಕ್ಕಳ ಪೋಷಕರ ಪ್ರಶ್ನೆಯಾಗಿದೆ. ಎಸೆಸೆಲ್ಸಿ ಪ್ರಮಾಣ ಪತ್ರವನ್ನು ನೋಡಿಕೊಂಡೇ ಅವರು ಫೋನ್ ಮಾಡಿದಂತಿದೆ. ನಾನು ಮಗಳ ಎಲ್ಲ ದಾಖಲೆಗಳಲ್ಲಿ ನನ್ನ ದೂರವಾಣಿ ಸಂಖ್ಯೆ ನೀಡಿದ್ದೇನೆ. ಕರೆ ಮಾಡಿದ ವ್ಯಕ್ತಿ ನನ್ನ ಪತಿಯ ಹೆಸರು ಹೇಳಿ ಮಾತು ಮುಂದುವರೆಸಿ ಮಗಳ ಹೆಸರು ಹೇಳಿ ಅಪರಾಧ ಪ್ರಕರಣದಲ್ಲಿ ಸಿಲುಕಿಕೊಂಡಿರುವುದಾಗಿ ತಿಳಿಸಿ ಕೂಡಲೇ ಸ್ಟೇಶನ್‌ಗೆ ಬರುವಂತೆ ತಿಳಿಸಿದ. ಆದರೆ ನನಗೆ ಮೊದಲೇ ಇಂತಹ ಕರೆಗಳ ಬಗ್ಗೆ ಸಂಶಯ ಇದ್ದುದರಿಂದ ಮಗಳು ನನ್ನ ಬಳಿಯೇ ಇರುವುದಾಗಿ ಹೇಳಿ ಜೋರು ಮಾಡಿದಾಗ ಆತ ಫೋನ್ ಕರೆ ಕಡಿತ ಮಾಡಿದ ಎಂದು ವಿದ್ಯಾರ್ಥಿನಿಯೋರ್ವರ ತಾಯಿ ಘಟನೆಯ ಕುರಿತಂತೆ ವಿವರವಾದ ಮಾಹಿತಿ ನೀಡಿದರು. ಯೋಜನಾಬದ್ಧವಾಗಿ ಕರೆ!
ಮಕ್ಕಳ ಪೋಷಕರಿಗೆ ಕರೆ ಮಾಡಿದವರು ಅತ್ಯಂತ ಯೋಜನಾಬದ್ಧವಾಗಿ ತಂತ್ರಗಾರಿಕೆ ಹೆಣೆದಿದ್ದರು. ಹಿಂದಿ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿ ತಾನೋರ್ವ ಪೊಲೀಸ್ ಅಧಿಕಾರಿ ಎಂದು ಹೇಳಿ, ಮೊದಲು ಮಕ್ಕಳ ಪೋಷಕರು ಹೌದೇ ಎಂಬುದನ್ನು ತಿಳಿದುಕೊಂಡು ಅನಂತರ ಮಕ್ಕಳ ಹೆಸರು ಹೇಳಿ ಅಪರಾಧ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿ ಹಿರಿಯ ಅಧಿಕಾರಿಗಳಲ್ಲಿ ಮಾತನಾಡುವಂತೆ ಸಂಪರ್ಕ ಕಲ್ಪಿಸುತ್ತಾರೆ. ಅಲ್ಲಿಂದ ಹಿರಿಯ ಅಧಿಕಾರಿಯ ಸೋಗಿನಲ್ಲಿ ವ್ಯಕ್ತಿಯೋರ್ವ ಮಾತನಾಡಿ, ಪ್ರಕರಣದಿಂದ ಮುಕ್ತರನ್ನಾಗಿಸಲು ಹಣ ನೀಡುವಂತೆ ಬೇಡಿಕೆ ಮಂಡಿಸುತ್ತಾನೆ. ಮಾತ್ರವಲ್ಲದೆ ಅವರ ಹೆಸರು ಕೂಡ ಉನ್ನತ ತನಿಖಾ ಇಲಾಖೆಯೊಂದಿಗೆ ಸಂಪರ್ಕ ಹೊಂದಿರುವಂತೆ ಬಿಂಬಿಸುವ ವ್ಯವಸ್ಥೆ ಮಾಡಿರುತ್ತಾರೆ. ಒಟ್ಟಾರೆಯಾಗಿ ಫೋನ್ ಕರೆ ಸ್ವೀಕರಿಸಿದವರು ಅದನ್ನು ನಂಬುವ ಸನ್ನಿವೇಶ ಸೃಷ್ಟಿಸುತ್ತಾರೆ. 1930ಕ್ಕೆ ದೂರು ನೀಡಿ
ಇಂತಹ ಕರೆಗಳು ಬಂದಾಗ ಪೋಷಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಪೊಲೀಸರು ಈ ರೀತಿಯಾಗಿ ಕರೆ ಮಾಡುವುದಿಲ್ಲ. ಮುಖ್ಯವಾಗಿ ಇವರೆಲ್ಲ ವಿದೇಶದಿಂದ ಕರೆ ಮಾಡುತ್ತಾರೆ. ಭಾರತದ ಹೊರಗಿನ ಕರೆಗಳು ಬಂದಾಗ ಮೊಬೈಲ್‌ನಲ್ಲಿ ಗೊತ್ತಾಗುತ್ತದೆ. ವಿದೇಶದಿಂದ ಬರುವ ಅಪರಿಚಿತ ಕರೆಗಳನ್ನು ಸ್ವೀಕರಿಸಬಾರದು. ಒಂದು ವೇಳೆ ಇಂತಹ ಕರೆಗಳು ಬಂದ ಕೂಡಲೇ ಹತ್ತಿರದ ಸೆನ್ ಠಾಣೆಗೆ ಅಥವಾ ಮೊಬೈಲ್‌ನಲ್ಲಿ ನೇರವಾಗಿ 1930 ಸಂಖ್ಯೆಗೆ ಫೋನ್ ಮಾಡಿ ದೂರು ನೀಡಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆತಂಕ ಬೇಡ, ನಕಲಿ ಕರೆ
ನಕಲಿ ಅಧಿಕಾರಿಗಳು ಕರೆ ಮಾಡಿ ಬೆದರಿಸಿರುವ ಬಗ್ಗೆ ಕೆಲವರು ದೂರಿದ್ದಾರೆ. ಪ್ರಕರಣ ದಾಖಲಾಗಿಲ್ಲ. ಸೆನ್ ಪೊಲೀಸರು ತನಿಖೆ ನಡಸುತ್ತಿದ್ದಾರೆ. ಈ ರೀತಿಯ ಕರೆಗಳಿಂದ ಯಾರೂ ಆತಂಕಗೊಳ್ಳಬೇಕಿಲ್ಲ. ಇದು ನಕಲಿ ಕರೆ. ಇಂತಹ ಕರೆ ಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ.
– ಅನುಪಮ್ ಅಗರ್‌ವಾಲ್, ಪೊಲೀಸ್ ಆಯುಕ್ತರು, ಮಂಗಳೂರು