ಬೆಂಗಳೂರು: ಒಂದೂವರೆ ವರ್ಷದ ಹಿಂದೆ ಖಾಸಗಿ ಕಂಪನಿ ಉದ್ಯೋಗಿಯನ್ನು ಅಪಹರಿಸಿ ಸುಲಿಗೆ ಮಾಡಲು ಆರೋಪಿಗಳಿಗೆ ಸಹಕಾರ ನೀಡಿದ ಆರೋಪದಲ್ಲಿ ಪ್ರೊಬೇಷನರಿ ಪಿಎಸ್‌ಐ, ಕಾನ್ ಸ್ಟೇಬಲ್ ಸೇರಿ ನಾಲ್ವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಮಡಿವಾಳ ಪೊಲೀಸ್ ಠಾಣೆಯ ಪ್ರೊಬೇಷನರಿ ಪಿಎಸ್‌ಐ ಸಿದ್ಧಾರೂಢ ಬಿಜ್ಜಣ್ಣನವರ, ಕಾನ್‌ಸ್ಟೆàಬಲ್ ಅಲ್ಲಾಭಕ್ಷ್ ಕರಜಗಿ, ಗೃಹ ರಕ್ಷಕ ದಳದ ಮಾಜಿ ಸಿಬ್ಬಂದಿ ರಾಜ್ ಕಿಶೋರ್ ಹಾಗೂ ಬೂತಪಲ್ಲಿ ನಿವಾಸಿ ದಿನೇಶ್ ಬಂಧಿತರು. ಆರೋಪಿಗಳಿಂದ 20 ಲಕ್ಷ ರೂ. ನಗದು ಹಾಗೂ ಕ್ರಿಪ್ಟೋ ಕರೆನ್ಸಿಯನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರು 2022ರ ಜು.7ರಂದು ಖಾಸಗಿ ಕಂಪನಿ ಉದ್ಯೋಗಿ ಕಾರ್ತಿಕ್ ಎಂಬಾತನನ್ನು ಅಪಹರಿಸಿದ್ದರು. ಪೋಲೆಂಡ್ ಮತ್ತು ಉಕ್ರೇನ್‌ನಲ್ಲಿರುವ ಅಂತಾರಾಷ್ಟ್ರೀಯ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಚ್ ಎಸ್‌ಆರ್ ಲೇಔಟ್ ನಿವಾಸಿ ಕಾರ್ತಿಕ್‌ಗೆ ವಿದೇಶಿ ಕಂಪನಿಗಳು ಯುಎಸ್‌ಡಿಟಿ ಮೂಲಕ ಕ್ರಿಪ್ಟೋ ಕರೆನ್ಸಿ ವರ್ಗಾವಣೆ ಮಾಡುತ್ತಿದ್ದವು. ಅವುಗಳನ್ನು ಕಾರ್ತಿಕ್ ಸ್ನೇಹಿತ ವಂಶಿಕೃಷ್ಣ ಭಾರತೀಯ ರೂಪಾಯಿಗೆ ಬದಲಾಯಿಸಿ ಕಮಿಷನ್ ಪಡೆಯುತ್ತಿದ್ದ. ಆದರೆ, ಕಾರ್ತಿಕ್ ಬಳಿ ಲಕ್ಷಾಂತರ ರೂ. ಕ್ರಿಪ್ಟೋ ಕರೆನ್ಸಿಗಳು ಬರುತ್ತಿದ್ದರಿಂದ ಹಣದ ಆಸೆಗೆ ಬಿದ್ದ ವಂಶಿಕೃಷ್ಣ, ತನ್ನ ಸ್ನೇಹಿತರಾದ ವಿನೋದ್ ನಾಯಕ್, ಕಿರಣ್ ಹಾಗೂ ಇತರರ ಮೂಲಕ 2022ರ ಜು. 7ರಂದು ಕಾರ್ತಿಕ್ ನನ್ನು ಅಪಹರಿಸಿದ್ದರು.
ಈ ವಿಚಾರವನ್ನು ಪ್ರೊಬೇಷನರಿ ಪಿಎಸ್‌ಐ ಸಿದ್ಧಾರೂಢಗೆ ತಿಳಿಸಿದ ಆರೋಪಿ ಗಳು ಪ್ರಕರಣದಲ್ಲಿ ಸಹಕಾರ ನೀಡುವಂತೆ ಕೋರಿದ್ದರು. ಹಣದ ಆಸೆಗೆ ಬಿದ್ದ ಸಿದ್ಧಾರೂಢ, ಕಾನ್ ಸ್ಟೇಬಲ್ ಅಲ್ಲಾಭಕ್ಷ್ ಕರಜಗಿ, ಕಾರ್ತಿಕ್, ಅಪಹರಣಕ್ಕೊಳಗಾದ ಕಾರ್ತಿಕ್‌ಗೆ ಕರೆ ಮಾಡಿ ತಾವು ಹೇಳಿದಂತೆ ಕೇಳಬೇಕು. ಇಲ್ಲವಾದರೆ, ಎನ್‌ಡಿಪಿಎಸ್ ಕಾಯ್ದೆ ಅಡಿ ಕೇಸ್ ದಾಖಲಿಸುತ್ತೇವೆ ಎಂದು ಬೆದರಿಕೆಯೊಡ್ಡಿದ್ದರು. ಬಳಿಕ ಆರೋಪಿಗಳು ಕಾರ್ತಿಕ್‌ನ ಕ್ರಿಪ್ಟೋ ವ್ಯಾಲೆಟ್‌ನಲ್ಲಿದ್ದ 1.56 ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿ ಮತ್ತು 20 ಲಕ್ಷ ರೂ. ನಗದನ್ನು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಆ ಬಳಿಕ 60 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಅಪಹರಣ ವಿಚಾರ ಪೊಲೀಸರಿಗೆ ಗೊತ್ತಾಗಲಿದೆ ಎಂಬ ಭಯದಲ್ಲಿ ಕಾರ್ತಿಕ್ ನನ್ನು ಬಿಟ್ಟು ಕಳುಹಿಸಿದ್ದರು. ನಂತರ ಈ ಸಂಬಂಧ ಕಾರ್ತಿಕ್ ಕಾಡುಗೊಂಡನಹಳ್ಳಿ ಠಾಣೆಗೆ ದೂರು ನೀಡಿದ್ದರು.
ಈ ವಿಚಾರ ತಿಳಿದ ವಂಶಿಕೃಷ್ಣ, ವಿನೋದ್ ನಾಯಕ್, ಕಿರಣ್ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಆದರೆ, ಕಾಡುಗೊಂಡನಹಳ್ಳಿ ಪೊಲೀಸರ ತನಿಖೆಯಲ್ಲಿ ಕೋಟ್ಯಂತರ ರೂ. ವ್ಯವಹಾರ ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಸಿಸಿಬಿ ಪೊಲೀಸರು, ಕಾರ್ತಿಕ್ ಅಪಹರಣಕ್ಕೆ ಆರೋಪಿಗಳಿಗೆ ನೇರವಾಗಿಯೇ ಸಹಕಾರ ನೀಡಿ, ಹಣ ಸುಲಿಗೆ ಮಾಡಿದ ಆರೋಪದಡಿ ಪಿಎಸ್‌ಐ, ಕಾನ್ ಸ್ಟೇಬಲ್, ಹೋಮ್‌ಗಾರ್ಡ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.