ಸಂಕೇಶ್ವರ: ಸಂಕೇಶ್ವರ ಪಟ್ಟಣದಲ್ಲಿ ಇತ್ತಿಚೇಗೆ ಬಾಲಕನ ಅಪಹರಣ ಮಾಡಿ ಹಣದ ಬೇಡಿಕೆ ಇಟ್ಟಿದ್ದ ಒಟ್ಟು 6 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಇಂದಿಲ್ಲಿ ಹೇಳಿದರು.
ಪ್ರಸಾದ ಉರ್ಫ ಬಬ್ಲೂ ಸಂಜಯ ರಾವುತ (20), ದೀಪಕ ಶಾಮಸಿಂಗ್ ಚಿಲವಾರ (21) , ಸುಲ್ತಾನರಾಜು ಹುಸೇನ ಮುಜಾವರ (19), ರಮೇಶ ಯಲಪ್ಪಾ ಅಚಗತ್ತಿ (19), ಸೌರಭ ದಗಡು ತಳವಾರ, (22) ವಿನಾಯಕ ಪಂಡರಿನಾಥ ಪಾಂಡವ (23) ಬಂಧಿತರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ. 2ರಂದು ಸಂಕೇಶರ್ವದ ಭಾಸ್ಕರ ಪ್ರಕಾಶ ಕಾಕಡೆ ಅವರ 14 ವರ್ಷದ ಮಗ ಟ್ಯೂಶನ್‌ನಿಂದ ಮನೆಗೆ ಬರುತ್ತಿರುವ ವೇಳೆ ಅಪರಿಚಿತರು ಹತ್ತಿರ ಬಂದು ನಿಮ್ಮ ತಂದೆಗೆ ನಿಪ್ಪಾಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಮ್ಮ ಮನೆಯವರೆಲ್ಲರೂ ಅಲ್ಲಿಗೆ ಹೋಗಿದ್ದಾರೆ ಎಂದು ಪುಸಲಾಯಿಸಿ ನಾವು ಅಲ್ಲಿಗೆ ಹೋಗೊಣ ಬಾ ಅಂತಾ ಹೇಳಿ ನಂಬಿಸಿ ಅಪಹರಣ ಮಾಡಿದ್ದಾರೆ ಎಂದು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಂದು ಗಂಟೆಯಲ್ಲಿ ಅಪಹರಣವಾದ ಬಾಲಕನನ್ನು ಪತ್ತೆ ಹಚ್ಚಿದ್ದಾರೆ. 15 ದಿನದ ಅಂತರದಲ್ಲಿ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ 3 ಬೈಕ್ ಹಾಗೂ 6 ಮೊಬೈಲ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಂಜೀವ ಪಾಟೀಲ ತಿಳಿಸಿದರು.
ಹೆಚ್ಚುವರಿ ಎಸ್.ಪಿ ಮಹಾನಿಂಗ ನಂದಗಾವಿ, ಗೋಕಾಕ ಡಿ.ಎಸ್.ಪಿ ಮನೋಜಕುಮಾರ್ ನಾಯಿಕ ಹಾಗೂ ಯಮಕನಮರಡಿ ಪಿಐ ರಮೇಶ ಛಾಯಾಗೋಳ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.