Advertisement

ಪೋಷಕರ ಮಡಿಲು ಸೇರಿದ ಅಪಹೃತ ಮಗು

06:47 AM May 01, 2019 | Team Udayavani |

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ನಡೆದಿದ್ದ ಅಂಧ ದಂಪತಿಯ ಪುತ್ರನ ಅಪಹರಣ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಎಂಟು ತಿಂಗಳ ಹಸುಗೂಸು ಪೋಷಕರ ಮಡಿಲು ಸೇರಿದೆ.

Advertisement

ರಾಯಚೂರು ಮೂಲದ ಬಸವರಾಜು ಹಾಗೂ ಬಿ.ಕೆ.ಚಿನ್ನು ದಂಪತಿಯ ಸಾಗರ್‌ ಎಂಬ ಎಂಟು ತಿಂಗಳ ಮಗು ಪೋಷಕರ ಮಡಿಲು ಸೇರಿದೆ. ಚಿತ್ರದುರ್ಗ ಮೂಲದ ಪಾರ್ವತಮ್ಮ ಅವರ ಸಹೋದರಿ, ಕೆಂಗೇರಿ ನಿವಾಸಿ ಲಕ್ಷೀದೇವಿ ಎಂಬುವವರು ಮಂಗಳವಾರ ಮಧ್ಯಾಹ್ನ ಮಗುವನ್ನು ಸುರಕ್ಷಿತವಾಗಿ ಉಪ್ಪಾರ್‌ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಲಕ್ಷ್ಮೀದೇವಿ ಸಹೋದರಿ ಪಾರ್ವತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಕಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏ.27ರಂದು ಕಾರ್ಯ ನಿಮಿತ್ತ ಬೆಂಗಳೂರಿಗೆ ಬಂದಿದ್ದು, ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಆ ವೇಳೆ ಅವರ ಬಳಿ ಬಂದ ಅಪರಿಚಿತ ಮಹಿಳೆಯೊಬ್ಬರು ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಮಗುವನ್ನು ಕೊಟ್ಟು ಹೋಗಿದ್ದಾರೆ.

ಬಹಳ ಹೊತ್ತಾದರೂ ವಾಪಸ್‌ ಬಂದಿಲ್ಲ. ಕೊನೆಗೆ ಶೌಚಾಲಯದಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಆತಂಕಗೊಂಡ ಪಾರ್ವತಮ್ಮ ಹಸುಗೂಸನ್ನು ಏನು ಮಾಡಬೇಕೆಂದು ತೋಚದೆ ನೇರವಾಗಿ ಕೆಂಗೇರಿಯಲ್ಲಿರುವ ಸಹೋದರಿ ಲಕ್ಷ್ಮೀದೇವಿ ಮನೆಗೆ ಕರೆದೊಯ್ದಿದ್ದರು ಎಂದು ಪೊಲೀಸರು ಹೇಳಿದರು.

ದಿನಪತ್ರಿಕೆಯಿಂದ ಮಾಹಿತಿ: ಈ ಮಧ್ಯೆ ಪಾರ್ವತಮ್ಮ ವಾಪಸ್‌ ಚಿತ್ರದುರ್ಗಕ್ಕೆ ಹೋಗಿದ್ದಾರೆ. ಆದರೆ, ಮಗುವನ್ನು ಲಕ್ಷ್ಮೀದೇವಿ ಅವರೇ ಎರಡು ದಿನಗಳ ಕಾಲ ಪಾಲನೆ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ದಿನಪತ್ರಿಕೆಗಳಲ್ಲಿ ಮಗುವಿನ ಕಳ್ಳತನ ಸುದ್ದಿ ಕಂಡ ಲಕ್ಷ್ಮೀದೇವಿ ಕೂಡಲೇ ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ತಂದು ಒಪ್ಪಿಸಿದ್ದಾರೆ. ಸದ್ಯ ಮಗುವನ್ನು ಪೋಷಕರಿಗೆ ಒಪ್ಪಿಸಲಾಗುವುದು ಎಂದು ಪಶ್ಚಿಮ ವಲಯ ಡಿಸಿಪಿ ರವಿ ಡಿ. ಚೆನ್ನಣ್ಣನವರ್‌ ಹೇಳಿದರು.

Advertisement

ಮಹಿಳೆ ಯಾರು?: ಮಗುವನ್ನು ಪಾರ್ವತಮ್ಮ ಕೈಗೆ ನೀಡಿದ ಆ ಅಪರಿಚಿತ ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮಗುವಿನ ಪೋಷಕರು ದೃಷ್ಟಿಹೀನರಾಗಿರುವ ಹಿನ್ನೆಲೆಯಲ್ಲಿ ಮಗುವನ್ನು ಸಾಕುವ ಉದ್ದೇಶದಿಂದ ಯಾರೋ ಅಪಹರಣ ಮಾಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮಗುವಿನ ಪೋಷಕರು ಸ್ವಂತಃ ಊರಿಗೆ ಹೋಗಿದ್ದು, ಅವರ ಬಂದ ನಂತರ ಕಾನೂನು ಪ್ರಕ್ರಿಯೆ ಮುಗಿಸಿ ಮಗುವನ್ನು ಹಸ್ತಾಂತರಿಸಲಾಗುವುದು. ಅದುವರೆಗೂ ಮಗು ಉಪ್ಪಾರಪೇಟೆ ಪೊಲೀಸರ ವಶದಲ್ಲೇ ಇರಲಿದೆ ಎಂದು ಪೊಲೀಸರು ತಿಳಿಸಿದರು. ಮಗು ಅಪಹರಣ ಪ್ರಕರಣವನ್ನು ಪಶ್ಚಿಮ ವಿಭಾಗದ ಪೊಲೀಸರು ಸವಾಲಾಗಿ ತೆಗೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

ಸಮಾಧಾನ ಮಾಡುವ ನೆಪದಲ್ಲಿ ಮಗು ಕಳವು: ಬಸವರಾಜು ಹಾಗೂ ಬಿ.ಕೆ.ಚಿನ್ನು ದಂಪತಿ ಏ.26ರಂದು ಊರಿನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ರಾಯಚೂರಿನಿಂದ ಬಂದು ಏ.27ರಂದು ಮೆಜೆಸ್ಟಿಕ್‌ನಲ್ಲಿ ಇಳಿದುಕೊಂಡಿದ್ದರು. ಬೆಳಗ್ಗೆ 7.30ರಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿರುವ ಪ್ಲಾಟ್‌ಫಾರಂ ನಂ 19(ಡಿ)ನಲ್ಲಿ ದಂಪತಿ ಪುತ್ರನ ಜತೆ ಕುಳಿತಿದ್ದರು.

ಮಗ ಜೋರಾಗಿ ಅಳುತ್ತಿದ್ದರಿಂದ ತಾಯಿ ಮಗುವಿಗೆ ನೀರು ಕುಡಿಸಲು ಮುಂದಾಗಿದ್ದಾರೆ. ಇದೇ ವೇಳೆ ನಿಲ್ದಾಣದಲ್ಲಿದ್ದ ಅಪರಿಚಿತ ಮಹಿಳೆಯೊಬ್ಬರು, ನೀರು ಕುಡಿಸಿ ಸಮಾಧಾನ ನೆಪದಲ್ಲಿ ಮಗುವನ್ನು ದಂಪತಿಯಿಂದ ಪಡೆದುಕೊಂಡು ತಮ್ಮೊಡನೆ ಕೆರೆದೊಯ್ದಿದ್ದರು. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next