Advertisement

ಕಿಡ್ನಾಪ್‌ ಕೇಸಲ್ಲಿ ಬಿಎಸ್‌ವೈ ಆಪ್ತನ ವಿಚಾರಣೆ

11:28 AM Jul 12, 2017 | |

ಬೆಂಗಳೂರು: ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್‌ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಅರಸ್‌ ಪೊಲೀಸರ ಮುಂದೆ ವಿಚಾರಣೆಗಾಗಿ ಮಂಗಳವಾರ  ಹಾಜರಾಗಿದ್ದಾರೆ.

Advertisement

ಮೇ 11ರಂದು ವಿನಯ್‌ ಅವರನ್ನು ಮಹಾಲಕ್ಷಿ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ಅಪಹರಿಸಲು ಯತ್ನಿಸಿದ್ದರು. ಈ ಪ್ರಕರಣ ಬಹಿರಂಗಗೊಳ್ಳುತ್ತಿದ್ದಂತೆ ಪ್ರಕರಣದ ಪ್ರಮುಖ ಆರೋಪಿ ರಾಜೇಂದ್ರ ಅರಸ್‌ ತಲೆಮರೆಸಿಕೊಂಡಿದ್ದ. ಆ ನಂತರ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದು ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾನೆ.

ಇತ್ತೀಚೆಗೆ ಎಚ್‌ಎಎಲ್‌ ಠಾಣೆ ಪೊಲೀಸರಿಂದ ತಪ್ಪಿಸಿಕೊಂಡಿರುವ ಪ್ರಶಾಂತ್‌ ಕುಮಾರ್‌ ಕೂಡ ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದು, ಈತನನ್ನು ಮಹಾಲಕ್ಷ್ಮಿಲೇಔಟ್‌ ಠಾಣೆ ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದರು. ಈ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತ ಎನ್ನಲಾದ ರಾಜೇಂದ್ರ ಅರಸ್‌ ವಿಚಾರಣೆಗೆ ಹಾಜರಾಗಿರುವುದು ಬಿಜೆಪಿ ವಲಯದಲ್ಲೇ ಬಾರಿ ಚರ್ಚೆಗೆ ಗ್ರಾಸವಾಗಿದೆ.

ಭೂಗತ ಜಗತ್ತಿನ ನಂಟು?
ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ರೌಡಿ ಶೀಟರ್‌ ಪ್ರಶಾಂತ್‌ ಕುಮಾರ್‌ ಭೂಗತ ಜಗತ್ತಿನ ಕೆಲವರ ಜತೆ ನಂಟು ಹೊಂದಿದ್ದ. ಈತನ ಜತೆಗೆ ಕಿಶೋರ್‌, ಅಭಿಷೇಕ್‌, ಸೆಲ್ವಕುಮಾರ್‌ ಮತ್ತು ಅಯ್ಯಪ್ಪ , ಶಿವಪ್ಪ, ರಾಜೇಂದ್ರ ಸೇರಿ ಒಟ್ಟು 8 ಮಂದಿಯ ತಂಡ ಅಪಹರಣಕ್ಕೆ ಯತ್ನಿಸಿದರು. ಆದರೆ, ಪ್ರಕರಣದ ವಿಚಾರಣೆಯ ಆರಂಭದಲ್ಲಿ ಇದೊಂದು ವೈಯಕ್ತಿಕ ವಿಚಾರವಾಗಿ ನಡೆದ ಕೃತ್ಯ ಎಂದು ಪೊಲೀಸರು ಊಹಿಸಿದ್ದರು.

ಆದರೆ, ಪ್ರಕರಣದ ಒಬ್ಬೊಬ್ಬ ಆರೋಪಿಯನ್ನು ಬಂಧಿಸಿದಾಗಲು ಪ್ರಕರಣದ ಹಿಂದಿನ ರಹಸ್ಯ ಬಯಲಾಗಿದೆ. ಅಲ್ಲದೇ ವಿನಯ್‌ ಅಪಹರಣದ ಹಿಂದೆ ಮಂಗಳೂರು ಪಬ್‌ ಮೇಲೆ ದಾಳಿ ನಡೆಸಿದ ಆರೋಪಿಗಳ ಕೈವಾಡ ಇದೆ ಎಂಬ ಶಂಕೆವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ರಾಜೇಂದ್ರನನ್ನು ಬಂಧಿಸಲು ಇಲ್ಲಿನ ತಂಡ ತೆರಳಿತ್ತು. ಆದರೆ, ಸಾಧ್ಯವಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

ನಿರೀಕ್ಷಣಾ ಜಾಮೀನು ಪಡೆದ
ಪ್ರಕರಣದ ಸಂಬಂಧ ಪ್ರಶಾಂತ್‌ ಕುಮಾರ್‌ನನ್ನು ಬಂಧಿಸುತ್ತಿದ್ದಂತೆ ಗಾಬರಿಗೊಂಡ ರಾಜೇಂದ್ರ ಕೂಡಲೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ರೌಡಿ ಶೀಟರ್‌ ಪ್ರಶಾಂತ್‌ ಮತ್ತು ರಾಜೇಂದ್ರನ ನಡುವೆ ಒಡನಾಟ ಇತ್ತು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಆದರೆ, ಪ್ರಶಾಂತ್‌ ಕುಮಾರ್‌ ವಿಚಾರಣೆ ತೀವ್ರಗೊಳಿಸುವ ಮೊದಲೇ ಆತ ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ. ಆದರೆ ಯಾವ ಕಾರಣಕ್ಕೆ ಕಿಡ್ನಾಪ್‌ ಯತ್ನ ನಡೆಯಿತು ಎನ್ನುವುದನ್ನು ಮಾತ್ರ ಅಧಿಕಾರಿಗಳು ಈ ವರೆಗೆ ಬಹಿರಂಗಗೊಳಿಸಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next