ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಲಕಿ ಅಪಹರಣ ಮಾಡಿದ ಆರೋಪದಡಿ ಡೆಲವರಿ ಬಾಯ…ಗೆ ಅಪಾರ್ಟ್‌ಮೆಂಟ್ ನಿವಾಸಿಗಳು ಹಲ್ಲೆ ನಡೆಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಪಾಲಕರ ಬೈಗುಳದಿಂದ ತಪ್ಪಿಸಿಕೊಳ್ಳಲು ಸುಳ್ಳು ಕತೆ ಕಟ್ಟಿರುವುದಾಗಿ ಬಾಲಕಿಯೇ ತಪ್ಪೊಪ್ಪಿಕೊಂಡಿದ್ದಾಳೆ.
ಏನೂ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿ ಡೆಲಿವರಿ ಬಾಯ್ ಪಜೀತಿಗೆ ಸಿಲುಕಿದ್ದಾನೆ. ಜೂ.12ರಂದು ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ 8 ವರ್ಷದ ಬಾಲಕಿ ಪಾಲಕರಿಗೆ ತಿಳಿಸದೇ ಟೆರಸ್ ಮೇಲೆ ಆಟವಾಡುತ್ತಿದ್ದಳು. ಇತ್ತ ಪೋಷಕರು ಮಗಳಿಗಾಗಿ ಹುಡುಕಾಟ ನಡೆಸಿದಾಗ ಅಪಾರ್ಟ್ಮೆಂಟ್‌ನ ಟೆರಸ್ ಮೇಲೆ ಸಿಕ್ಕಿದ್ದಳು. ಎಲ್ಲಿ ಹೋಗಿದ್ದೆ ಎಂದು ಪಾಲಕರು ಕೇಳಿದಾಗ, ನನ್ನನ್ನು ಯಾರೋ ಅಪಹರಣ ಮಾಡಿದ್ದರು. ನಂತರ ಕೈ ಕಚ್ಚಿ ಬಿಡಿಸಿಕೊಂಡು ಬಂದಿದ್ದಾಗಿ ಹೇಳಿದ್ದಳು. ಈ ವೇಳೆ ಯಾರು ಅಪಹರಿಸಿದ್ದರು ಎಂದು ಪೋಷಕರು ಪ್ರಶ್ನೆ ಮಾಡಿದಾಗ ಅಪಾರ್ಟ್ಮೆಂಟ್ ಮುಂಭಾಗದಲ್ಲಿ ತೆರಳುತ್ತಿದ್ದ ಡೆಲವರಿ ಬಾಯ್ ನ್ನು ತೋರಿಸಿದ್ದಳು. ಕೂಡಲೇ ಡೆಲಿವರಿ ಬಾಯ್ ಅಖಿಲ್ ರಂಜನ್ ದಾಸ್ (28) ಎಂಬಾತನನ್ನು ಪ್ರಶ್ನಿಸಿದ ಅಪಾರ್ಟ್‌ಮೆಂಟ್ ನಿವಾಸಿಗಳು ಆತನಿಗೆ ಹಲ್ಲೆ ನಡೆಸಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು.
ಸ್ಥಳಕ್ಕೆ ಧಾವಿಸಿದ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಅಖೀಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆಯಲ್ಲಿ ಆತ ತಪ್ಪೊಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾ ಪರಿಶೀಲಿಸಲು ಮುಂದಾಗಿದ್ದರು. ಆದರೆ, ಟೆರಸ್ ಮೇಲೆ ಯಾವುದೇ ಸಿಸಿ ಕ್ಯಾಮೆರಾ ಇರಲಿಲ್ಲ. ಮಗು ಹೇಳಿದ ರೀತಿ ಆತನ ಕೈಯ ಮೇಲೆ ಕಚ್ಚಿದ ಗಾಯಗಳಾಗಿತ್ತು. ಪಕ್ಕದ ಕಟ್ಟಡದಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಬಾಲಕಿ ಸುಳ್ಳು ಹೇಳಿರುವ ಅಸಲಿ ಸಂಗತಿ ಗೊತ್ತಾಗಿದೆ.
ಪ್ರಕರಣದಲ್ಲಿ ನಡೆದಿದ್ದೇನು?: ಟೆರಸ್ ಮೇಲೆ ಆಟವಾಡುತ್ತಿದ್ದ ಬಾಲಕಿಯನ್ನು ರಂಜನ್ ದಾಸ್ ಪ್ರಶ್ನಿಸಿದಾಗ ಆತನ ಕೈಗೆ ಆಕೆ ಕಚ್ಚಿದ್ದಳು. ಆತ ಅಲ್ಲಿಂದ ಹೊರಟಿದ್ದ. ಆಟ ಆಡೋಕೆ ಪಾಲಕರು ಬಿಡುತ್ತಿಲ್ಲ ಎಂಬ ಕಾರಣಕ್ಕೆ ಈ ರೀತಿ ಸುಳ್ಳು ಹೇಳಿರೋದಾಗಿ ಇದೀಗ ಪೊಲೀಸರ ಮುಂದೆ ಬಾಲಕಿ ಒಪ್ಪಿಕೊಂಡಿದ್ದಾಳೆ. ಆಟ ಆಡೋಕೆ ಹೋಗಿದ್ದೇನೆ ಅಂದರೆ ಬೈಯುತ್ತಾರೆ ಎಂದು ಹೇಳಿಕೊಂಡಿದ್ದಾಳೆ.
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲ್ಲೆಗೊಳಗಾದ ಅಖಿಲ್ ರಂಜನ್ ದಾಸ್ ಹಲ್ಲೆ ಮಾಡಿದ ಅಪಾರ್ಟ್‌ಮೆಂಟ್ ನಿವಾಸಿಗಳ ವಿರುದ್ಧ ದೂರು ನೀಡಿದ್ದಾನೆ.