ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಇಬ್ಬರು ಮಕ್ಕಳನ್ನು ಅಪಹರಿಸಿ ರೈಲಿನಲ್ಲಿ ಬಿಹಾರಕ್ಕೆ ಪರಾರಿಯಾಗಲು ಯತ್ನಿಸಿದ ದಂಪತಿಯನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದು, ಕೊಡಿಗೇಹಳ್ಳಿ ಠಾಣೆಗೆ ಒಪ್ಪಿಸಿದ್ದಾರೆ.
ಬಿಹಾರ ಮೂಲದ ಪ್ರಮೀಳಾ ದೇವಿ (33) ಮತ್ತು ಬಲರಾಮ್ (40) ಬಂಧಿತರು.
ಆರೋಪಿ ದಂಪತಿಗೆ ಮಕ್ಕಳು ಇರಲಿಲ್ಲ. ಹೀಗಾಗಿ ಅಪಹರಣ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಬಿಹಾರ ಮೂಲದ ದಂಪತಿ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ನಗರದಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದರು. ಮದುವೆಯಾಗಿ ಐದಾರು ವರ್ಷವಾಗಿದ್ದರೂ ಮಕ್ಕಳು ಇರಲಿಲ್ಲ. ಈ ನಡುವೆ ತಾವೂ ವಾಸವಾಗಿದ್ದ ಮನೆ ಸಮೀಪದಲ್ಲೇ ಇಬ್ಬರು ಮಕ್ಕಳು, ಮನೆ ಮುಂದೆ ಯಾವಾಗಲೂ ಆಟವಾಡುತ್ತಿದ್ದನ್ನು ಗಮನಿಸಿದ್ದಾರೆ. ಮಂಗಳವಾರ ಬೆಳಗ್ಗೆಯೂ ಮಕ್ಕಳು ಮನೆ ಮುಂದೆ ಆಟವಾಡುತ್ತಿದ್ದರು. ಅದನ್ನು ಕಂಡ ದಂಪತಿ, ಅಪಹರಿಸಿ, ಬಿಹಾರಕ್ಕೆ ಹೋಗಲು ರಾತ್ರಿ 9 ಗಂಟೆಗೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ತಡರಾತ್ರಿ 11.30ರ ಸುಮಾರಿಗೆ ರೈಲಿನಲ್ಲಿ ಮಕ್ಕಳು ಜೋರಾಗಿ ಅಳುತ್ತಿದ್ದವು. ಜತೆಗೆ ದಂಪತಿ ಅನುಮಾನಾಸ್ಪದವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಸಹ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಅನುಮಾನದ ಮೇರೆಗೆ ರೈಲ್ವೆ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಮಕ್ಕಳ ಅಪಹರಣ ಬೆಳಕಿಗೆ ಬಂದಿದೆ.
ಮತ್ತೂಂದೆಡೆ ಮಕ್ಕಳನ್ನು ಕಳೆದುಕೊಂಡ ಪೋಷಕರು, ಮನೆ ಸಮೀಪದ ಹುಡುಕಾಟ ನಡೆಸಿ ಮಕ್ಕಳು ಸಿಗದಿದ್ದಾಗ ಈ ಬಗ್ಗೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಅದೇ ವೇಳೆಗೆ ಮಕ್ಕಳ ಸಮೇತ ಆರೋಪಿತ ದಂಪತಿ ಯನ್ನು ಠಾಣೆಗೆ ಕರೆದೊಯ್ದು ಒಪ್ಪಿಸಲಾಗಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.